ನಾನ್​ವೆಜ್​ ಹೋಟೆಲ್​ಗಳನ್ನು ಮುಚ್ಚಿ! ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ BJP ಶಾಸಕರಿಂದ ಖಡಕ್​ ಸೂಚನೆ

BJP MLA
Published on

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದ್ದು, ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರಕ್ಕೆ ಗೇಟ್​ ಪಾಸ್​ ನೀಡಿದೆ.

ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚನೆಗೂ ಮುನ್ನವೇ ಜೈಪುರದ ಹವಾ ಮಹಾಲ್​ ಕ್ಷೇತ್ರದ ಬಿಜೆಪಿ ಶಾಸಕ ಬಾಲಮುಕುಂದ್​ ಆಚಾರ್ಯ ಅವರು ಕಾರ್ಯಪ್ರವೃತರಾಗಿದ್ದು, ತಮ್ಮ ಕ್ಷೇತ್ರದ ರಸ್ತೆಯ ಬದಿಗಳಲ್ಲಿರುವ ನಾನ್​ ವೆಜ್​ ಹೋಟೆಲ್​ಗಳನ್ನು ಮುಚ್ಚುವಂತೆ ಆದೇಶ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಅಧಿಕಾರಿಯೊಬ್ಬರಿಗೆ ಕರೆ ಮಾಡಿ, ರಸ್ತೆ ಬದಿಯಲ್ಲಿರುವ ನಾನ್​ ವೆಜ್​ ಹೋಟೆಲ್​ಗಳನ್ನು ಸಂಜೆ ಒಳಗೆ ಮುಚ್ಚಿಸುವಂತೆ ಸೂಚನೆ ನೀಡಿದ್ದಾರೆ.

ನಾನ್ ವೆಜ್ ಅನ್ನು ರಸ್ತೆಯಲ್ಲಿ ಬಹಿರಂಗವಾಗಿ ಮಾರಾಟ ಮಾಡಬಹುದೇ? ಹೌದೋ ಅಥವಾ ಇಲ್ಲವೋ ಉತ್ತರಿಸಿ. ಹಾಗಾದ್ರೆ ನೀವು ಇದನ್ನು ಬೆಂಬಲಿಸುತ್ತೀರಿ. ಕೂಡಲೇ ರಸ್ತೆ ಬದಿಯ ಎಲ್ಲ ಮಾಂಸಾಹಾರಿ ಅಂಗಡಿಗಳನ್ನು ಮುಚ್ಚಬೇಕು. ಸಂಜೆ ನಿಮ್ಮಿಂದ ವರದಿ ತರಿಸಿಕೊಳ್ಳುತ್ತೇನೆ. ಅಧಿಕಾರಿ ಯಾರೆಂಬುದನ್ನು ಸಹ ನಾನು ನೋಡುವುದಿಲ್ಲ ಎಂದು ಬಾಲಮುಕುಂದ್ ಆಚಾರ್ಯ ಎಚ್ಚರಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ವೈರಲ್​ ವಿಡಿಯೋ ಕುರಿತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದು, ಯಾರಾದರೂ ಇಂತಹದನ್ನು ಅದು ಹೇಗೆ ಮಾಡುತ್ತಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಆದೇಶ ಸರಿಯಲ್ಲ ಎಂದಿರುವ ಓವೈಸಿ, ನಾನ್​ವೆಜ್​ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಯಾರಾದರೂ ಮಾಂಸಾಹಾರಿ ಆಹಾರದ ಮಳಿಗೆ ಸ್ಥಾಪಿಸಲು ಬಯಸಿದರೆ ಅದನ್ನು ತಡೆಯುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.

600 ಮತಗಳಿಂದ ಗೆಲುವು

ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಅವರು ರಾಜಸ್ಥಾನದ ಹವಾ ಮಹಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆರ್‌ಆರ್ ತಿವಾರಿ ಅವರನ್ನು 600 ಮತಗಳಿಂದ ಸೋಲಿಸಿದರು. ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ, ಕಾಂಗ್ರೆಸ್ 69 ಸ್ಥಾನಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net