ಭಾರಿ ಮಳೆಗೆ ಚೆನ್ನೈನಲ್ಲಿ 5 ಸಾವು - ಸೋಮವಾರ ಅರ್ಧರಾತ್ರಿವರೆಗೆ ವಿಮಾನಗಳಿಲ್ಲ

heavy rain in chennai
Published on

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮೈಚಾಂಗ್ ಚಂಡಮಾರುತ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿಗೆ ಸೋಮವಾರ ರಾತ್ರಿಯೇ ಅಪ್ಪಳಿಸಿದ್ದು, ಚೆನ್ನೈನಲ್ಲಿ ಭಾರೀ ಮಳೆ ಸುರಿಯಿತು. ಇದರ ಪರಿಣಾಮ ಚೆನ್ನೈನ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣಗಳು ಸೇರಿ ಬಹುತೇಕ ಬಡಾವಣೆಗಳು ಜಲಾವೃತವಾಗಿವೆ. ಮಳೆ ಸಂಬಂಧಿತ ಘಟನೆಗಳಿಂದ ವಿವಿಧೆಡೆ ಏಳು ಜನ ಮೃತಪಟ್ಟಿದ್ದಾರೆ.

ಮೈಚಾಂಗ್ ಬಲವಾದ ಗಾಳಿ ಜತೆಗೆ ಬಿರುಸಿನ ಭಾರಿ ಮಳೆ ಸುರಿಸುತ್ತಿದೆ. ಚೆನ್ನೈ ನಗರದಲ್ಲಿ ಮಾತ್ರ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ. ವಿಮಾನ ನಿಲ್ದಾಣದ ರನ್‌ವೇ ಜಲಾವೃತಗೊಂಡಿದ್ದರಿಂದ ವಿಮಾನಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿವೆ, ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಬೆಂಗಳೂರಿನಿಂದ ಕಾರ್ಯಾಚರಣೆಗೊಳ್ಳುವಂತೆ ಮಾಡಲಾಗಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರಾತ್ರಿ 11 ಗಂಟೆಯವರೆಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಜಲಾವೃತಗೊಂಡಿರುವ ಪ್ರದೇಶದಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ, ರಸ್ತೆಗಳಲ್ಲಿ ಮೊಸಳೆಗಳು ಕಾಣಿಸಿಕೊಂಡಿವೆ. ಚೆನ್ನೈನ ಹಲವು ಮೆಟ್ರೋ ನಿಲ್ದಾಣಗಳ ಬಳಿ ಜಲಾವೃತಗೊಂಡಿವೆ. ಸೇಂಟ್ ಥಾಮಸ್ ಮೆಟ್ರೋ ನಿಲ್ದಾಣದಲ್ಲಿ 4 ಅಡಿ ನೀರು ಸಂಗ್ರಹಗೊಂಡಿದ್ದು, ನಿಲ್ದಾಣದ ಪ್ರವೇಶವನ್ನು ಕಡಿತಗೊಳಿಸಲಾಗಿದೆ. ಆಲಂದೂರಿನಲ್ಲಿ ಮೆಟ್ರೋ ರೈಲು ಹತ್ತಲು ಪ್ರಯಾಣಿಕರಿಗೆ ಸೂಚಿಸಲಾಯಿತು.

ಭಾರೀ ಮಳೆಯಿಂದಾಗಿ ನಗರದಾದ್ಯಂತ ಐದು ಸಾವುಗಳಾಗಿರುವುದಾಗಿ ಚೆನ್ನೈ ಪೊಲೀಸರು ತಿಳಿಸಿದ್ದಾರೆ. ವೈದ್ಯನಾಥನ್ ಮೇಲ್ಸೇತುವೆ ಬಳಿಯ ಪ್ಲಾಟ್‌ಫಾರ್ಮ್‌ನಲ್ಲಿ 70 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಫೋರ್‌ಶೋರ್ ಎಸ್ಟೇಟ್ ಬಸ್ ಡಿಪೋದಲ್ಲಿ 60 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಮತ್ತೊಂದು ಶವ ಪತ್ತೆಯಾಗಿದೆ. ನಿರ್ಮಾಣ ಹಂತದ ಮನೆ ಕುಸಿದು ಇಬ್ಬರು ಛತ್ತೀಸ್​ಗಢ ಮೂಲದವರು ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net