

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬೆಂಬಲಿಗರಿಂದ ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಇಂದು ಸಾಯಂಕಾಲ ಜಯನಗರದ ಪೃಥ್ವಿ ಸಿಂಗ್ ಅವರ ಮನೆ ಮುಂದೆ ಚನ್ನರಾಜ ಹಟ್ಟಿಹೊಳಿ ಅವರ ಐದಾರು ಜನ ಬೆಂಬಲಿಗರು ಏಕಾಏಕಿ ಬಂದು ಹೊರಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೃಥ್ವಿ ಸಿಂಗ್ ರಮೇಶ ಜಾರಕಿಹೊಳಿ ಆಪ್ತ. ಚನ್ನರಾಜ್ ಆಪ್ತರು ಪೃಥ್ವಿ ಸಿಂಗ್ ಜೊತೆಗೆ ಮಾತನಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಕ್ಷಣವೇ ಪೃಥ್ವಿ ಸಿಂಗ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಗಾಯಾಳು ಪೃಥ್ವಿ ಸಿಂಗ್ ಪುತ್ರ ಜಸ್ವೀರ್ ಸಿಂಗ್, ಇಂದು ಸಾಯಂಕಾಲ 4.50ರ ಸುಮಾರಿಗೆ ನಮ್ಮ ಮನೆಗೆ ಬಂದ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅವರ ಪಿಎ ಮತ್ತು ಅಂಗ ರಕ್ಷಕರು ಹೊರಗೆ ಕರೆದುಕೊಂಡು ಬಂದರು. ಆಗ ಫೋನ ಮಾಡಿ ಚನ್ನರಾಜ ಬೈಯುತ್ತಿದ್ದರು. ಹೊರಗೆ ಬಾ ಎಂದು ಧಮ್ಕಿ ಹಾಕಿದರು. ಹೊರಗೆ ಬರುತ್ತಿದ್ದಂತೆ ಐದಾರು ಜನರು ಕೂಡಿಕೊಂಡು ಕಟ್ಟರ್ ನಿಂದ ಕೈ, ಹೊಟ್ಟೆ, ಬೆನ್ನಿಗೆ ಇರಿದು ಹಲ್ಲೆ ಮಾಡಿದ್ದಾರೆ. ರಕ್ತ ಬರುತ್ತಿತ್ತು. ಅಲ್ಲದೇ ಪ್ರಜ್ಞೆ ತಪ್ಪಿದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈಗ ಅವರ ಸ್ಥಿತಿ ಹೇಗಿದೆ ಅಂತಾ ನನಗೂ ಗೊತ್ತಿಲ್ಲ. ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಗೊತ್ತಿಲ್ಲ. ತಂದೆಯವರೇ ಹೇಳಬೇಕು ಎಂದರು.
ಇನ್ನು ಗಾಯಾಳು ಪೃಥ್ವಿ ಸಿಂಗ್ ಕೂಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ನನ್ನ ಮನೆಗೆ ಬಂದ ಚನ್ನರಾಜ ಹಟ್ಟಿಹೊಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆಸ್ಪತ್ರೆಗೆ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ, ಎಂ.ಬಿ.ಜೀರಲಿ ಸೇರಿ ಮತ್ತಿತರರು ಭೇಟಿ ನೀಡಿ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದರು. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.