ರೋಗಿಗೆ ಮೂತ್ರ ಚೀಲದ ಬದಲು ಕೂಲ್​ ಡ್ರಿಂಕ್​ ಬಾಟಲಿ ಬಳಕೆ: ಅವ್ಯವಸ್ಥೆ ಕಂಡು ನೆಟ್ಟಿಗರು ಗರಂ

URIN BAG
ಸಾಂದರ್ಭಿಕ ಚಿತ್ರ
Published on

ಜಮುಯಿ: ಜೀವರಕ್ಷಕ ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳ ಕೊರತೆಯಿಂದಾಗಿ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗೆ ಮೂತ್ರದ ಚೀಲದ ಬದಲಿಗೆ ಸ್ಪ್ರೈಟ್ ಬಾಟಲಿಯನ್ನು ಅಳವಡಿಸಿರುವ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದೆ.

ಸೋಮವಾರ ತಡರಾತ್ರಿ ಝಝಾ ರೈಲ್ವೆ ಪೊಲೀಸರು ರೈಲಿನಿಂದ ಬಿದ್ದು ಗಾಯಗೊಂಡ ಅಪರಿಚಿತ ವ್ಯಕ್ತಿಯನ್ನು ಸದರ್‌ ಆಸ್ಪತ್ರೆಗೆ ಕರೆತಂದಿದ್ದು, ಚಿಕಿತ್ಸೆಯ ಸಮಯದಲ್ಲಿ ವೈದ್ಯರು ವ್ಯಕ್ತಿಗೆ ಮೂತ್ರ ಚೀಲವನ್ನು ಅಳವಡಿಸುವಂತೆ ಆಸ್ಪತ್ರೆಯ ಸಿಬ್ಬಂದಿಗೆ ಸೂಚಿಸಿದ್ದರು. ಆದರೆ ಮೂತ್ರ ಚೀಲ ಲಭ್ಯವಿಲ್ಲದ ಕಾರಣ, ಆಸ್ಪತ್ರೆಯ ಸಿಬ್ಬಂದಿ ಸ್ಪ್ರೈಟ್​​ ಬಾಟಲಿಯನ್ನು ಅಳವಡಿಸಿದ್ದಾರೆ.

ಇದನ್ನೂ ಓದಿ: ಸೈಬರ್, ಮಾಲ್‌ವೇರ್ ದಾಳಿ ತಡೆಯಲು ಶೀಘ್ರವೇ ಬರಲಿದೆ 'ಮಾಯಾ ಒಎಸ್': ಏನಿದು? ಇಲ್ಲಿದೆ ಮಾಹಿತಿ..

ಅಲ್ಲದೇ, ವೈದ್ಯರು ಹೇಳಿದ ರೋಗಿಗೆ ಇನ್ಫೋಲಿನ್ ಚುಚ್ಚುಮದ್ದನ್ನು ನೀಡುವಂತೆ ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಿದ್ದರು. ಆದರೆ ತುರ್ತು ಕೋಣೆಯಲ್ಲಿ ಔಷಧಿ ಲಭ್ಯವಿಲ್ಲದ ಕಾರಣ ಸಿಬ್ಬಂದಿಗಳು ಆತನಿಗೆ ಚುಚ್ಚುಮದ್ದನ್ನು ನೀಡಿರಲಿಲ್ಲ. ಈ ಕಾರಣದಿಂದಾಗಿ, ರೋಗಿಯು ರಾತ್ರಿಯಿಡೀ ಅರೆಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ನರಳಾಡುತ್ತಲೇ ಇದ್ದನು.

ಈ ಬಗ್ಗೆ ಆಸ್ಪತ್ರೆಯಲ್ಲಿದ್ದ ವ್ಯಕ್ತಿಯೋರ್ವ ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಬಳಿಕ, ಮಂಗಳವಾರ ಬೆಳಗ್ಗೆ ಸುದ್ದಿ ತಿಳಿದ ಕೂಡಲೇ ಮೂತ್ರ ಚೀಲವನ್ನು ಜೋಡಿಸಿ ಸ್ಪ್ರೈಟ್ ಬಾಟಲಿಯನ್ನು ಹೊರತೆಗೆಯಲಾಗಿದೆ. ಅಲ್ಲದೇ, ಇದರೊಂದಿಗೆ ಇತರ ಅಗತ್ಯ ಔಷಧಗಳನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕಳುಹಿಸಲಾಗಿದ್ದು, ಆರೋಗ್ಯ ಕಾರ್ಯಕರ್ತರ ನಿರ್ಲಕ್ಷ್ಯದ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಸದ್ಯ, ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಔಷಧಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆ ವ್ಯವಸ್ಥಾಪಕ ರಮೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net