ರಾಜೀನಾಮೆ ಕೇಳುವ ನೈತಿಕ ಹಕ್ಕು ಬಿಜೆಪಿಗಿಲ್ಲ, ಬೇಕಿದ್ದರೆ ಉಚ್ಚಾಟಿಸಲಿ; ಸ್ವಪಕ್ಷೀಯರ ವಿರುದ್ಧವೇ ಗುಡುಗಿದ ಶಾಸಕ ಹೆಬ್ಬಾರ್

Shivaram Hebbar
Published on

ಉತ್ತರಕನ್ನಡ: ನಾವು ಯಾವ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ನಮ್ಮದು ಕರ್ನಾಟಕ ಶಾಸಕಾಂಗ ಪಕ್ಷ. ನಮ್ಮ ರಾಜೀನಾಮೆ ಕೇಳುವ ಹಕ್ಕು ಬಿಜೆಪಿ ಅವರಿಗಿಲ್ಲ. ಬೇಕಿದ್ದರೆ ಅವರು ನನ್ನ ಹಾಗೂ ಸೋಮಶೇಖರ್​ ಅವರನ್ನು ಉಚ್ಛಾಟಿಸಲಿ ಎಂದು ಸ್ವಪಕ್ಷೀಯರ ವಿರುದ್ಧವೇ ಶಾಸಕ ಶಿವರಾಮ್​ ಹೆಬ್ಬಾರ್​ ಗುಡುಗಿದ್ದಾರೆ.

ಶಿರಸಿಯಲ್ಲಿ ಈ ಕುರಿತು ಮಾತನಾಡಿ ಹೆಬ್ಬಾರ್​, ನಾನು ಈ ಹಿಂದೆ ರಾಜೀನಾಮೆ ಕೊಟ್ಟೇ ಚುನಾವಣೆ ಎದುರಿಸಿ ಬಂದವನು. ರಾಜೀನಾಮೆ ಬಗ್ಗೆ ಬೇರೆಯವರ ಉಪದೇಶ ಬೇಕಿಲ್ಲ. ಆಗ ನಾನು ರಾಜೀನಾಮೆ ಕೊಟ್ಟು ಬಂದಾಗ ಕಾಂಗ್ರೆಸ್​​ಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಅವರಿಗೆ ಅನಿಸಲಿಲ್ಲವೇ. ಅಧಿಕಾರಕ್ಕೆ ಬರೋವಾಗ ಏನು ಅನ್ನಿಸದಿದ್ದಾಗ ಈಗ ಯಾಕೆ ಅನ್ಸುತ್ತೆ ಎಂದು ಪ್ರಶ್ನಿಸಿದ್ದಾರೆ.

ಅವಶ್ಯಕತೆ ಬಿದ್ದಾಗ ಮತ್ತೆ ರಾಜೀನಾಮೆ ಕೊಡುತ್ತೇನೆ. ಅದಕ್ಕೂ ನಾನು ಹೆದರಲ್ಲ. ನನ್ನ ಕ್ಷೇತ್ರದ ಜನರ ಮೇಲೆ ವಿಶ್ವಾಸವಿದೆ. ಆದರೆ ನಾವೇನು ಉಚ್ಚಾಟನೆ ಮಾಡೋದು ಬೇಡ ಅಂತಾ ಅರ್ಜಿ ಕೊಟ್ಟಿದ್ದೀವಾ. ನಮ್ಮ ನಡುವಳಿಕೆ ಅವರಿಗೆ ಸಮಾಧಾನ ಇಲ್ಲ ಎಂದರೆ ಅವರೇ ತೀರ್ಮಾನ ಮಾಡುತ್ತಾರೆ.‌ ಇಂಥದ್ದೇ ನಿರ್ಣಯ ತೆಗೆದುಕೊಳ್ಳಿ ಅನ್ನೋಕೆ ನಾನ್ಯಾರು. ಸರ್ಕಾರ ಬರಲು ಕಾರಣರಾದವರು, ಸ್ಪೀಕರ್ ಆಗಲು ಕಾರಣರಾದವರು ಯಾರೂ ಬಿಜೆಪಿಗೆ ಕಾಣುತ್ತಿಲ್ಲ.‌ ಎಲ್ಲ ಆಗಿ ಆಯ್ತು, ಅನುಭವಿಸಿ ಆಯ್ತು. ದೋಣಿ ದಾಟಿದ ಮೇಲೆ ದೋಣಿಗಾರನ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.

Shivaram Shekar

ಶಾಸನ ಸಭೆಯಲ್ಲಿ ಬಿಜೆಪಿಯವರಿಗೆ ನನ್ನ ಜೊತೆ ಗುರುತಿಸಿಕೊಳ್ಳಲು ಮುಜುಗರ ಆದರೆ ಅದು ಅವರಿಗೆ ಬಿಟ್ಟದ್ದು. ನನ್ನನ್ನು ಯಾವುದೇ ಪ್ರತಿಭಟನೆಗೆ ಕರೆದಿಲ್ಲ. ನಾನು ಮತ್ತು ಸೋಮಶೇಖರ್ ಬಿಎಲ್​​​​​ಪಿಗೂ ಹೋಗ್ತಿಲ್ಲ. ಸಿಎಲ್​ಪಿಗೂ ಹೋಗ್ತಿಲ್ಲ. ನಮ್ದು ಕೆಎಲ್​ಪಿ, ಕರ್ನಾಟಕ ಲೆಜೆಸ್ಲೇಟಿವ್ ಪಾರ್ಟಿ. ಬಂಡವಾಳ ಇಲ್ಲದ ಮನುಷ್ಯ ನಾನಲ್ಲ. ಏನೇನಾಗಿದೆ ಅನ್ನೋದನ್ನು ಎಲ್ಲವನ್ನೂ ಬಿಚ್ಚಿಡುತ್ತೇನೆ. ಎಲ್ಲ ಬಂಡವಾಳ ನನ್ನತ್ರ ಇದೆ, ಬಂಡವಾಳ ಖಾಲಿ ಆಗಿ ಬಂದವ ನಾನಲ್ಲ. ನಾನೇನು ಕಳವು ಮಾಡಿಲ್ಲ, ದರೋಡೆ ಮಾಡಿಲ್ಲ, ಏನಾದ್ರು ಮಾಡಿದ್ರೆ ಬೇಕಲ್ಲಾ ಇಡಿ ಏನು ಇವರಪ್ಪನ ಮನೆ ಆಸ್ತಿ ಅಲ್ಲ. ಯಾರನ್ನೋ ತಂದು ಬೆಳಿಗ್ಗೆ ಒಳಗೆ ಹಾಕಿಸ್ತೀನಿ ಅನ್ನೋಕೆ. ಏನ್ ಮಾಡೋಕೆ ಆಗುತ್ತೆ. ಒಂದು ತಿಂಗಳು ಒಳಗಡೆ ಹಾಕಿಸ್ಬಹುದು ಅಷ್ಟೇ.

ಸಾರ್ವಜನಿಕ ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕಾಗುತ್ತೆ. ಎದುರಿಸೋಕೆ ಆಗದಿದ್ರೆ ಉಳಿಬಾರದು. ಯಾವ ಲೆವೆಲ್‌ಗೆ ಯಾರು ಪ್ರತಿಕ್ರಿಯೆ ಕೊಡ್ಬೇಕೋ ಅವರು ಕೊಡ್ತಾರೆ ಎಂದು ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್​ ಹೆಬ್ಬಾರ್​ ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net