ಆರ್​ಸಿಬಿ ಸೇರಲಿದ್ದಾರೆ ಕೆ.ಎಲ್. ರಾಹುಲ್​? ಇದು ನಿಜವಾಗ್ಲಿ ಎಂದು ಪ್ರಾರ್ಥಿಸಿದ ಫ್ಯಾನ್ಸ್​

KL Rahul
Published on

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ ಆರಂಭ ಆಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, 18ನೇ ಆವೃತ್ತಿಯ ಕುರಿತಾದ ಸುದ್ದಿಗಳು ಸಖತ್​ ಸೌಂಡ್​ ಮಾಡುತ್ತಿವೆ. ಐಪಿಎಲ್​ಗೆ ಸಂಬಂಧಿಸಿದಂತೆ ಕನ್ನಡಿಗೆ ಕೆ.ಎಲ್. ರಾಹುಲ್​ ಕುರಿತಾದ ಸುದ್ದಿಯೊಂದು ಸಖತ್​ ವೈರಲ್​ ಆಗಿದ್ದು, ಅಭಿಮಾನಿಗಳು ಇದು ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ 2025ರಲ್ಲಿ ನಡೆಯುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕನ್ನಡಿಗ, ಲಖನೌ ಸೂಪರ್​ಜೈಂಟ್ಸ್​ ತಂಡದ ನಾಯಕ ಕೆ.ಎಲ್. ರಾಹುಲ್​ ಕಾಣಿಸಿಕೊಳ್ಳಲಿದ್ದಾರೆ ಎಂದಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ಖಾಸಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ರಾಹುಲ್​ ಲಖನೌ ತೊರೆದು ಆರ್​ಸಿಬಿ ಸೇರಲಿದ್ದಾರೆ ಎಂದು ಹೇಳಲಾಗಿದ್ದು, ರಾಹುಲ್​ ತಮ್ಮ ಹೆಸರನ್ನು ಆಕ್ಷನ್​ಗೆ ನೀಡಿದ್ದಾರೆ ಎಂದು ವರದಿ ಮಾಡಿದೆ.

ರಾಹುಲ್​ ಅವರ ಈ ನಿರ್ಧಾರಕ್ಕೆ ಮುಖ್ಯ ಕಾರಣ ಲಖನೌ ಸೂಪರ್​ಜೈಂಟ್ಸ್​ ತಂಡದ ಮಾಲೀಕ ಸಂಜೀವ್​ ಗೋಯೆಂಕಾ ಎಂದು ಹೇಳಲಾಗಿದೆ. ಏಕೆಂದರೆ ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ ಲಖನೌ ಹೀನಾಯವಾಗಿ ಸೋಲುಂಡಿತ್ತು. ಪಂದ್ಯದ ಬಳಿಕ ರಾಹುಲ್​ ಅವರನ್ನು ತಂಡದ ಮಾಲೀಕ ಸಂಜೀವ್​ ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಸಖತ್ ವೈರಲ್ ಆಗಿತ್ತು. ಇದೀಗ ಈ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಹುಲ್​ ಲಖನೌ ತೊರೆದು ಆರ್​ಸಿಬಿ ಸೇರಲಿದ್ದಾರೆ ಎಂಬ ಸುದ್ದಿ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

KL Rahul

ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಕೆ.ಎಲ್. ರಾಹುಲ್​ ಅವರನ್ನು ಖರೀದಿಸಲು ಆರ್​ಸಿಬಿ ಉತ್ಸುಕತೆ ತೋರುತ್ತಿದ್ದು, ರಾಹುಲ್​ ಆರ್​ಸಿಬಿ ಪಾಲಾಗುವುದು ಖಚಿತ ಎನ್ನಲಾಗುತ್ತಿದೆ. ಏಕೆಂದರೆ ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್​ ದಿನೇಶ್​ ಕಾರ್ತಿಕ್​ ನಿವೃತ್ತಿ ಘೋಷಿಸಿರುವ ಕಾರಣ ಅವರ ಸ್ಥಾನ ತುಂಬಬಲ್ಲ ಸೂಕ್ತ ಆಟಗಾರನನ್ನು ಆರ್​ಸಿಬಿ ಫ್ರಾಂಚೈಸಿ ಹುಡುಕುತ್ತಿದೆ. ಹೀಗಾಗಿ ಆರ್​ಸಿಬಿ ಫ್ರಾಂಚೈಸಿಯು ವಿಕೆಟ್​​ಕೀಪರ್ ಬ್ಯಾಟ್ಸ್​ಮನ್ ಆಗಿ ರಾಹುಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.

ಇದಲ್ಲದೆ ಭವಿಷ್ಯದ ದೃಷ್ಟಿಯಿಂದ ಆರ್​ಸಿಬಿ ತಂಡ ನೂತನ ನಾಯಕನನ್ನು ನೇಮಿಸಬೇಕಿದ್ದು, ರಾಹುಲ್ ಆಯ್ಕೆಯಿಂದ ಆರ್​ಸಿಬಿ ಈ ಎರಡು ಸ್ಥಾನಗಳನ್ನು ತುಂಬಲು ಲೆಕ್ಕಾಚಾರ ಹಾಕಿಕೊಂಡಿದೆ. ನಾಯಕನಾಗಿ ಎರಡು ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ಲೇಆಫ್​ಗೆ ಕೊಂಡೊಯ್ದಿರುವ ರಾಹುಲ್​​ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಆಯ್ಕೆಯಿಂದ ಆರ್​ಸಿಬಿ ವಿಕೆಟ್ ಕೀಪರ್ ಹಾಗೂ ನಾಯಕನ ಸ್ಥಾನವನ್ನು ತುಂಬಿಕೊಳ್ಳಬಹುದು. ಅದರಂತೆ ಐಪಿಎಲ್ 2025ರಲ್ಲಿ  ಕ್ಯಾಪ್ಟನ್ ಪಟ್ಟದೊಂದಿಗೆ ಕಣಕ್ಕಿಳಿಯುವುದು ಖಚಿತವಾಗಿದೆ. ಅಂತಿಮವಾಗಿ ಆರ್​ಸಿಬಿ ಯಾರಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net