ನನ್ನ ಮುಂದಿನ ಚಿತ್ರಕ್ಕೂ ನೀವೇ ಹಾಡ್ತೀರಾ ಅಂತ ನಂಬಿಕೆ ಇದೆ ...

Shivarajakumar - SPB
Published on

ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಹೆಚ್ಚೇನೂ ಚೇತರಿಕೆ ಕಂಡು ಬರುತ್ತಿಲ್ಲ. ಅವರು ಬೇಗ ಗುಣಮುಖರಾಗಲೀ ಮತ್ತು ಮೊದಲಿನಂತೆ ಹಾಡುವಂತಾಗಲೀ ಎಂದು ಜಗತ್ತಿನಾದ್ಯಂತ ಎಲ್ಲರೂ ಪ್ರಾರ್ಥನೆ ಮಾಡುತ್ತಲೇ ಇದ್ದಾರೆ.

ಕನ್ನಡದಲ್ಲೂ ಹಲವು ನಟರು, ಸಂಗೀತ ನಿರ್ದೇಶಕರು ಮತ್ತು ಗಾಯಕ-ಗಾಯಕಿಯರು, ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖರಾಗಲೀ ಎಂದು ಹಾರೈಸುತ್ತಿದ್ದಾರೆ. ಈಗ ಶಿವರಾಜಕುಮಾರ್​ ಸಹ ತಮ್ಮ ಮೆಚ್ಚಿನ ಗಾಯಕ ಬೇಗ ಹುಷಾರಾಗಿ ಮತ್ತೆ ತಮ್ಮ ಮುಂದಿನ ಚಿತ್ರಕ್ಕೆ ಹಾಡಲಿ ಎಂದು ಹಾರೈಸಿದ್ದಾರೆ.

ಶಿವರಾಜಕುಮಾರ್​ ಮತ್ತು ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರಿಗೂ ಅವಿನಾಭಾವ ಸಂಬಂಧ. ಶಿವರಾಜಕುಮಾರ್​ ಅವರ ಮೊದಲ ಚಿತ್ರ 'ಆನಂದ್​'ನಿಂದ ಇಲ್ಲಿಯವರೆಗೂ, ಬಾಲಸುಬ್ರಹ್ಮಣ್ಯಂ ಬಹುತೇಕ ಚಿತ್ರಗಳಿಗೆ ಹಾಡಿದ್ದಾರೆ. ಶಿವರಾಜಕುಮಾರ್​ ಅವರೇ ಹಾಡುತ್ತಿದ್ದಾರೆ ಎಂಬ ಭಾವನೆ ಬರವಷ್ಟು ಪರ್ಫೆಕ್ಟ್​ ಆಗಿ ಬಾಲಸುಬ್ರಹ್ಮಣ್ಯಂ ಅವರು ಹಾಡುತ್ತಿದ್ದರು.

ಈ ಕುರಿತು ಟ್ವೀಟ್​ ಮಾಡಿರುವ ಶಿವಣ್ಣ, 'ನನ್ನ ಮೊದಲ ಚಿತ್ರದಿಂದ ಪ್ರಾರಂಭಿಸಿ, ಹಲವು ಚಿತ್ರಗಳಿಗೆ ಹಾಡಿದ್ದೀರಿ. ಅಷ್ಟೇ ಅಲ್ಲ, ನಾನು ನಿಮ್ಮ ದೊಡ್ಡ ಅಭಿಮಾನಿ. ಆದಷ್ಟು ಬೇಗ ಹುಷಾರಾಗಿ ಬನ್ನಿ ಸಾರ್​. ನನಗೆ ಗೊತ್ತು, ನೀವು ಗುಣಮುಖರಾಗಿ ಬಂದು ಎಲ್ಲರ ಚಿತ್ರಗಳಿಗೆ ಹಾಡುತ್ತೀರಿ ಎಂಬ ನಂಬಿಕೆ ಇದೆ. ನನ್ನ ಮುಂದಿನ ಚಿತ್ರಕ್ಕೂ ನೀವು ಹಾಡುತ್ತೀರಿ ಎಂದು ಕಾಯುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ ಶಿವರಾಜಕುಮಾರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net