

ಮುಂಬೈ: ಕರೊನಾ ವೈರಸ್ ವಿಚಾರದಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ಸದಾ ಟೀಕಿಸುವ ಶಿವಸೇನಾ ನಾಯಕ ಸಂಜಯ್ ರಾವತ್ ಅವರು ಮತ್ತೊಮ್ಮೆ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಕೇವಲ 20 ಮಂದಿ ಮಾತ್ರ ಭಾಗವಹಿಸಬೇಕೆಂಬ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ, ಮದ್ಯ ಮಾರಾಟದ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಿದ್ದನ್ನು ಖಂಡಿಸಿದ್ದಾರೆ. ಶವಸಂಸ್ಕಾರದಲ್ಲಿ 20 ಮಂದಿ ಮಾತ್ರ ಪಾಲ್ಗೊಳ್ಳಬೇಕಂತೆ ಆದರೆ, ವೈನ್ ಶಾಪ್ನಲ್ಲಿ ಸಾವಿರಾರು ಮಂದಿ ಒಟ್ಟಿಗೆ ಸೇರುವುದು ಎಷ್ಟರ ಮಟ್ಟಿಗೆ ಸರಿಯೆಂದು ಪ್ರಶ್ನಿಸಿದ್ದಾರೆ.
ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ರಾವತ್, ಅಂತ್ಯಕ್ರಿಯೆಲ್ಲಿ ಪಾಲ್ಗೊಳ್ಳಲು ಸರ್ಕಾರ 20 ಮಂದಿಗೆ ಮಾತ್ರ ಅವಕಾಶ ನೀಡಿದೆ. ಏಕೆಂದರೆ, ಮೃತದೇಹದಲ್ಲೇ ಆತ್ಮವೇ ಇರುವುದಿಲ್ಲ. ವೈನ್ ಶಾಪ್ ಬಳಿ ಸಾವಿರಾರು ಮಂದಿ ಸೇರಬಹುದು ಏಕೆಂದರೆ ಶಾಪ್ಗಳಲ್ಲಿ ಆತ್ಮಗಳಿರುತ್ತವೆ ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ದೀಪ ಬೆಳಗಿಸಿ ಎಂದು ಕರೆ ನೀಡಿದ್ದನ್ನು ಟೀಕಿಸಿ ಸರ್ಕಾರ ಕೋವಿಡ್-19 ಪರಿಸ್ಥಿತಿಯನ್ನು ಸುಧಾರಿಸಲು ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದರು.
ಇನ್ನು ಸರ್ಕಾರ ಮದ್ಯ ಮಾರಾಟಕ್ಕೆ ಅನುವು ನೀಡಿರುವುದರಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಮದ್ಯಕ್ಕಾಗಿ ಕುಡುಕರು ಮುಗಿಬೀಳುತ್ತಿರುವುದು ಸಹ ಕಳವಳಕ್ಕೆ ಕಾರಣವಾಗಿದೆ. ವಿಪರ್ಯಾಸವೆಂದರೆ ಮದ್ಯಾ ಮಾರಾಟಕ್ಕೆ ಅನುಮತಿ ಮಾಡಿಕೊಟ್ಟಾಗಿನಿಂದ ಅಪರಾಧ ಚಟುವಟಿಕೆಗಳು ಸಹ ಹೆಚ್ಚಾಗಿದೆ. (ಏಜೆನ್ಸೀಸ್)