VIDEO| ಚಲಿಸುತ್ತಿದ್ದ ಆಂಬುಲೆನ್ಸ್​ನಿಂದ ಸ್ಟ್ರೆಚರ್ ಸಮೇತ ರಸ್ತೆಗೆ ಬಿದ್ದ ರೋಗಿ: ಮುಂದೇನಾಯಿತು ನೋಡಿ!

Ambulence
Published on

ಬ್ಯಾಂಕಾಕ್​: ಚಲಿಸುತ್ತಿದ್ದ ಆಂಬುಲೆನ್ಸ್​ನಿಂದ ಇದ್ದಕ್ಕಿದ್ದಂತೆ ರೋಗಿಯ ಸಮೇತ ಸ್ಟ್ರೆಚರ್ ರಸ್ತೆಗೆ ಉರುಳಿ ಹಿಂಬದಿ ಸವಾರರನ್ನು ಕಕ್ಕಾಬಿಕ್ಕಿಯಾಗಿಸಿದ ಘಟನೆ ಥಾಯ್ಲೆಂಡ್​ ರಾಜಧಾನಿ ಬ್ಯಾಂಕಾಕ್​ನ ವಾಹನನಿಬಿಡ ರಸ್ತೆಯಲ್ಲಿ ನಡೆದಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬೈಕ್​ ಅಪಘಾತದಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಘಟನೆ ನಡೆದಿದೆ. ಚಾಲಕ ಚಾಲನೆಯಲ್ಲಿ ನಿರತನಾಗಿದ್ದಾಗ ಇದ್ದಕ್ಕಿದ್ದಂತೆ ವಾಹನದ ಹಿಂಬದಿ ಬಾಗಿಲು ತೆರೆದುಕೊಂಡು ರೋಗಿಯ ಸಮೇತ ಸ್ಟ್ರೆಚರ್​ ರಸ್ತೆಗೆ ಉರುಳಿದೆ. ಮೊದಲೇ ವಾಹನ ನಿಬಿಡ ರಸ್ತೆಯಾಗಿದ್ದರಿಂದ ಹಿಂಬದಿ ಸವಾರರು ಕೆಲಕಾಲ ಕಕ್ಕಾಬಿಕ್ಕಿಯಾಗಿದ್ದಲ್ಲದೆ, ಟ್ರಾಫಿಕ್​ ಜಾಮ್​ಗೂ ಘಟನೆ ಕಾರಣವಾಯಿತು.

ರೋಗಿ ಕೆಳಗೆ ಬಿದ್ದಿದ್ದನ್ನು ಮನಗಂಡ ಚಾಲಕ ತಕ್ಷಣ ಆಂಬುಲೆನ್ಸ್​ ನಿಲ್ಲಿಸಿದ್ದಾನೆ. ಈ ವೇಳೆ ಹಿಂದೆ ಬರುತ್ತಿದ್ದ ಬೈಕ್​ ಸವಾರರ ನೆರವಿನಿಂದ ಮತ್ತೆ ರೋಗಿ ಹಾಗೂ ಸ್ಟ್ರೆಚರ್​ ಅನ್ನು ಆಂಬುಲೆನ್ಸ್​ ಒಳಗೆ ಹಾಕಿ, ಬಾಗಿಲು ಭದ್ರವಾಗಿ ಮುಚ್ಚಿ ಅಲ್ಲಿಂದ ಹೊರಟಿದ್ದಾನೆ.

ಮೊದಲೇ ಅಪಘಾತದಿಂದ ಗಾಯಗೊಂಡಿದ್ದ ರೋಗಿಗೆ ಈ ಘಟನೆಯು ಗಾಯದ ಮೇಲೆ ಬರೆ ಎಳೆಯಿತು. ತಡಮಾಡದೇ ವೇಗವಾಗಿ ಆಸ್ಪತ್ರೆಗೆ ಆಂಬುಲೆನ್ಸ್​ ಚಲಾಯಿಸಿಕೊಂಡು ಬಂದ ಚಾಲಕ ಗಾಯಾಳುವನ್ನು ದಾಖಲಿಸಿದ್ದಾನೆ. ಅದೃಷ್ಟವಶಾತ್​ ಹೆಚ್ಚೇನು ಗಾಯವಾಗಿರದಿದ್ದರಿಂದ ವ್ಯಕ್ತಿ ಬದುಕುಳಿದಿದ್ದಾನೆ. ಇನ್ನು ಅನಿರೀಕ್ಷಿತ ಘಟನೆ ಕುರಿತು ಸ್ವಯಂಪ್ರೇರಿತವಾಗಿ ಆಂಬುಲೆನ್ಸ್​ ಸೇವೆ ಸಲ್ಲಿಸುವ ಪೋಹ್​ ಟೆಕ್​ ತುಂಗ್​ ಫೌಂಡೇಶನ್​ ಕ್ಷಮೆಯಾಚಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net