

ಹಾಸನ: ಹೊರಗಡೆ ತಿರುಗಾಡಿ ಬರುತ್ತೇವೆಂದು ಮನೆಯಿಂದ ಹೊರ ಹೋದ ನವದಂಪತಿ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಸಕಲೇಶಪುರದ ಹೆನ್ನಲಿ ಗ್ರಾಮದಲ್ಲಿ ನಡೆದಿದೆ.
ಅರ್ಥೇಶ್ (27) ಹಾಗೂ ಕೃತಿಕಾ (23) ಮೃತ ದಂಪತಿ. ಬೇಲೂರು ಮೂಲದ ಅರ್ಥೇಶ್ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಗುರುವಾರ ಪತ್ನಿ ಕೃತಿಕಾ ಮನೆಗೆ ಬಂದಿದ್ದ. ಈ ವೇಳೆ ಬೈಕ್ನಲ್ಲಿ ಹೊರ ಹೋಗಿ ಬರುವುದಾಗಿ ಮನೆಯವರಿಗೆ ಹೇಳಿ ತೆರಳಿದ್ದರು.
ಸಮಯವಾಗುವುದನ್ನು ನೋಡಿ ಮನೆಯವರು ದಂಪತಿಗೆ ಫೋನ್ ಮಾಡಿದ್ದಾರೆ. ಆದರೆ ಸ್ವಿಚ್ ಆಫ್ ಆಗಿದ್ದನ್ನು ಕೇಳಿ ಗಾಬರಿಗೊಂಡು ನಿನ್ನೆ ಸಂಜೆ ಹುಡುಕಾಡಿದ್ದಾರೆ. ಈ ವೇಳೆ ಕೃತಿಕಾ ಶವ ಮೀನಿನ ಬಲೆಗೆ ಸಿಕ್ಕಿ ಪತ್ತೆಯಾಗಿದೆ. ಇಂದು ಮುಂಜಾನೆ ಅರ್ಥೇಶ್ ಶವ ಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಸೆಲ್ಫಿ ತಗೆಯಲು ಹೋಗಿ ಇಬ್ಬರು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಸಕಲೇಶಪುರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)