ತೀವ್ರ ಸೊಂಟದ ನೋವು ಎಂದ ವ್ಯಕ್ತಿಯಲ್ಲಿ ದೇಹದಲ್ಲಿ ಎಂಥ ಅಚ್ಚರಿ ಕಾದಿತ್ತು ನೋಡಿ!

kidney
Published on

ಬ್ರೆಸಿಲಿಯಾ (ಬ್ರೆಜಿಲ್​): ಆ ವ್ಯಕ್ತಿ ಇದ್ದಕಿದ್ದಂತೆ ತೀವ್ರ ಸೊಂಟ ನೋವಿನಿಂದ ಬಳಲು ಆರಂಭಿಸಿದ್ದ. ಅದೆಷ್ಟೇ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿದರೂ, ನೋವು ನಿವಾರಕ ಬಾಮ್​ಗಳನ್ನು ಹಚ್ಚಿದರೂ ಆತನಲ್ಲಿ ಸೊಂಟದ ನೋವು ಕಡಿಮೆಯಾಗಲಿಲ್ಲ. ಹೀಗಾಗಿ ಆತ ಆಸ್ಪತ್ರೆಗೆ ದೌಡಾಯಿಸಿದ್ದ. ಆತನನ್ನ ಪರೀಕ್ಷಿಸಿದಾಗ ಇಡೀ ಮನುಕುಲವೇ ಅಚ್ಚರಿಪಡುವಂತ ಸಂಗತಿ ಬಹಿರಂಗಗೊಂಡಿತು.

ಅದೇನು ಅಚ್ಚರಿ? ಸೌ ಪಾಲೋದ ನಿವಾಸಿಯಾದ ಆತನ ದೇಹದಲ್ಲಿ ಎರಡರ ಬದಲು ಮೂರು ಮೂತ್ರಪಿಂಡಗಳಿದ್ದವು!

38 ವರ್ಷದ ವ್ಯಕ್ತಿಯನ್ನು ಹಾಸ್ಪಿಟಲ್​ ಡೊ ರಿಮ್​ನ ವೈದ್ಯರು ಸಿ.ಟಿ. ಸ್ಕ್ಯಾನ್​ಗೆ ಒಳಪಡಿಸಿದಾಗ, ಆತನಲ್ಲಿ ಸ್ಲಿಪ್​ ಡಿಸ್ಕ್​ ಇರುವಂತೆ ತೋರಿತು. ಆದರೆ, ಇದು ವಾಸ್ತವವಾಗಿ ಸ್ಲಿಪ್​ ಡಿಸ್ಕ್​ ಆಗಿರದೆ ಅಂಗರಚನಾತ್ಮಕ ಸಮಸ್ಯೆ ಇರುವ ಲಕ್ಷಣಗಳನ್ನು ಹೊಂದಿತ್ತು.

ಇದರಿಂದ ಕುತೂಹಲಗೊಂಡ ವೈದ್ಯರು ಆತನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಎಲ್ಲರಿಗೂ ಸಾಮಾನ್ಯವಾಗಿ ಇರುವಂತೆ ಎರಡು ಮೂತ್ರಪಿಂಡಗಳ ಜತೆಗೆ ಇನ್ನೊಂದು ಏನೋ ಇರುವುದು ಕಂಡುಬಂದಿತು. ಮತ್ತೂ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತನಲ್ಲಿ ಮೂರನೇ ಮೂತ್ರಪಿಂಡ ಇರುವುದು ಪತ್ತೆಯಾಯಿತು.

ಎಡಗಡೆಯಲ್ಲಿ ಸಾಮಾನ್ಯ ರೀತಿಯ ಮೂತ್ರಪಿಂಡ ಇದ್ದರೆ ಬಲಗಡೆಯಲ್ಲಿ ಪೆಲ್ವಿಸ್​ (ಕುಹರ) ಭಾಗದಲ್ಲಿ ಎರಡು ಮೂತ್ರಪಿಂಡಗಳು ಒಂದರೊಂದಿಗೆ ಮತ್ತೊಂದು ಬೆಸೆದುಕೊಂಡಿದ್ದು ಕಂಡುಬಂದ ಮಾಹಿತಿಯನ್ನು ವೈದ್ಯರು ದ ನ್ಯೂ ಇಂಗ್ಲೆಂಡ್​ ಜರ್ನಲ್​ ಆಫ್​ ಮೆಡಿಸಿನ್​ ಎಂಬ ಜರ್ನಲ್​ನಲ್ಲಿ ಪ್ರಕಟಿಸಿದ್ದಾರೆ.

ಸಾಮಾನ್ಯವಾಗಿ ಮನುಷ್ಯರಲ್ಲಿ ಇರುವ ಎರಡು ಮೂತ್ರಪಿಂಡಗಳು ಯುರೇಟರ್​ ಮೂಲಕ ಮೂತ್ರಕೋಶಕ್ಕೆ ಸಂಪರ್ಕ ಪಡೆದುಕೊಂಡಿರುತ್ತವೆ. ಕುಹರದ ಭಾಗದಲ್ಲಿದ್ದ ಒಂದು ಮೂತ್ರಪಿಂಡವು ಯುರೇಟರ್​ ಮೂಲಕ ಮೂತ್ರಕೋಶದೊಂದಿಗೆ ಸಂಪರ್ಕ ಪಡೆದುಕೊಂಡಿತ್ತು. ಆದರೆ, ಎಡಬದಿಯಲ್ಲಿದ್ದ ಸಾಮಾನ್ಯಗಾತ್ರದ ಮೂತ್ರಪಿಂಡದಿಂದ ಹೊರಟ ಯುರೇಟರ್​ಗೆ ಪೆಲ್ವಿಸ್​ ಭಾಗದಲ್ಲಿನ ಯುರೇಟರ್​ ನೇರವಾಗಿ ಕೂಡಿಕೊಂಡು ಮೂತ್ರಕೋಶದೊಂದಿಗೆ ಸಂಪರ್ಕ ಪಡೆದುಕೊಂಡಿತ್ತು. ಹೀಗಾಗಿ ಆ ವ್ಯಕ್ತಿಯಲ್ಲಿ ಮೂತ್ರಪಿಂಡ ಸಂಬಂಧಿತ ಯಾವುದೇ ಸಮಸ್ಯೆಗಳು ಕಾಣಿಸಿಕೊಂಡಿರಲಿಲ್ಲ ಎಂದು ಜರ್ನಲ್​ನಲ್ಲಿ ವಿವರಿಸಲಾಗಿದೆ.

ಈ ರೀತಿಯ ಸಮಸ್ಯೆಗಳು ಭ್ರೂಣ ಬೆಳವಣಿಗೆಯ ಹಂತದಲ್ಲೇ ಉಂಟಾಗುತ್ತವೆ. ಆದರೆ, ಬೇರಾವುದೇ ಕಾರಣಗಳಿಗೆ ಚಿಕಿತ್ಸೆ ಪಡೆಯುವಾಗ ಇಂಥ ಸಮಸ್ಯೆಗಳು ಆಕಸ್ಮಿಕವಾಗಿ ಬೆಳಕಿಗೆ ಬರುತ್ತವೆ ಎಂದು ತಿಳಿಸಲಾಗಿದೆ.

100ಕ್ಕೂ ಕಡಿಮೆ: ಮನುಷ್ಯರಲ್ಲಿ ಸಾಮಾನ್ಯವಾಗಿ ಎರಡು ಮೂತ್ರಪಿಂಡಗಳು ಇರುತ್ತವೆ. ಆದರೂ ಮೂರು ಮೂತ್ರಪಿಂಡಗಳು ಇರುವ ಬಗ್ಗೆ ಇದುವರೆಗೆ 100ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿರುವುದಾಗಿ 2013ರಲ್ಲಿ ಪ್ರಕಟವಾದ ದ ಇಂಟರ್​ನೆಟ್​ ಜರ್ನಲ್​ ಆಫ್​ ರೇಡಿಯಾಲಜಿ ಎಂಬ ಜರ್ನಲ್​ನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net