ವೈಜಾಗ್​ ವಿಷಾನಿಲ ದುರಂತ: ಸದ್ಯ ತಮ್ಮ ಮನೆಗಳಿಗೆ ಹೋಗುವಂತಿಲ್ಲ ಕಾರ್ಖಾನೆ ಸಮೀಪದ ಗ್ರಾಮಸ್ಥರು!

Gas Leak
Published on

ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಆರ್​.ಆರ್​. ವೆಂಕಟಪುರಂನಲ್ಲಿರುವ ಎಲ್​.ಜಿ. ಪಾಲಿಮರ್ಸ್​ ಕೆಮಿಕಲ್​ ಕಾರ್ಖಾನೆಯಲ್ಲಿ ಗುರುವಾರ ಮುಂಜಾನೆ ನಡೆದ ವಿಷಾನಿಲ ದುರಂತದಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ. ಗ್ಯಾಸ್​ ಇಡೀ ಊರಿಗೆ ಹರಡಿದ್ದರಿಂದ ಅಲ್ಲಿದ್ದವರನ್ನು ಗುರುವಾರ ಬೆಳಗ್ಗೆಯೇ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

ಸದ್ಯ ಅಧಿಕಾರಿಗಳು ಹೇಳುವ ಪ್ರಕಾರ ಗ್ರಾಮಸ್ಥರು ಇನ್ನು ಎರಡು ದಿನ ಇರುವಲ್ಲಿಯೇ ಆಶ್ರಯ ಪಡೆಯಬೇಕಾಗಿದೆ. ಆ ಬಳಿಕ ತಮ್ಮ ಊರಿಗೆ ತೆರಳುವುದು ಸೂಕ್ತವೆಂದಿದ್ದಾರೆ. ಪುಣೆಯ ವಿಶೇಷ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಇನ್ನೂ ಕಾರ್ಯಾಚರಣೆ ನಡೆಸುತ್ತಿದ್ದು, ಅದರೊಂದಿಗೆ ಗ್ಯಾಸ್​ ಲೀಕ್​ ಆಗಲು ಕಾರಣ ಏನಿರಬಹುದೆಂಬ ತನಿಖೆಯನ್ನು ನಡೆಸುತ್ತಿದೆ.

ಇನ್ನು ಕಾರ್ಖಾನೆಯ ಎರಡು ಕಿ.ಮೀ ವ್ಯಾಪ್ತಿಯ ಹೊರಗಿರುವ ಜನರು ಯಾವುದೇ ಭಯಪಡಬೇಕಾಗಿಲ್ಲ. ಅವರಿಗೆ ಸ್ಥಳಾಂತರದ ಅವಶ್ಯಕತೆ ಇಲ್ಲವೆಂದು ವಿಶಾಖಪಟ್ಟಣಂ ಪೊಲೀಸ್​ ಆಯುಕ್ತರಾದ ಆರ್​.ಕೆ. ಮೀನಾ ಅವರು ಭರವಸೆ ನೀಡಿದ್ದಾರೆ.

ಕಾರ್ಖಾನೆಯಲ್ಲಿ ಗ್ಯಾಸ್​ ಈಗಲೂ ಲೀಕ್​ ಆಗುತ್ತಿದೆ, ಅನಿಲ ಆವಿಗಳು ಹೊರ ಸೂಸುತ್ತಿದ್ದು, ಸ್ಥಳೀಯ ಜನರಿಗೆ ಆತಂಕವನ್ನುಂಟುಮಾಡಿದೆ. ಕಾರ್ಖಾನೆಯ 5 ಕಿ.ಮೀ ವ್ಯಾಪ್ತಿಯಲ್ಲಿರುವ ಜನರನ್ನು ಸ್ಥಳಾಂತರ ಮಾಡಬೇಕೆಂದು ವಿಶಾಖಪಟ್ಟಣಂ ಅಗ್ನಿಶಾಮಕ ಅಧಿಕಾರಿ ಸುರೇಂದ್ರ ಆನಂದ್​ ಅವರು ಗುರುವಾರ-ಶಕ್ರವಾರದ ಮಧ್ಯರಾತ್ರಿಯ ಕಾರ್ಯಾಚರಣೆ ವೇಳೆ ಹೇಳಿದ್ದರು.

ಸದ್ಯ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಗ್ಯಾಸ್​ ಲೀಕ್​ ಆಗುವುದನ್ನು ತಡೆಯಲು ಗುಜರಾತಿನಿಂದ ವಿಶೇಷ ಇಂಡಿಯಾ ಕಾರ್ಗೋ ವಿಮಾನಿಂದ ವಿಶಾಖಪಟ್ಟಣಂಗೆ ಪ್ಯಾರಾ ಟೆರ್ಟಿಯರಿ ಬ್ಯುಟೈಲ್ ಕ್ಯಾಟೆಕೋಲ್ (ಪಿಟಿಬಿಸಿ) ಅನ್ನು ತರಲಾಗಿದೆ.

ಇದರೊಂದಿಗೆ ಹೆಚ್ಚುವರಿಯಾಗಿ 10 ಅಗ್ನಿಶಾಮಕ ವಾಹನ ಸ್ಥಳದಲ್ಲೇ ಬೀಡುಬಿಟ್ಟಿದೆ. ಅಲ್ಲದೆ, ವೈದ್ಯಕೀಯ ತುರ್ತು ಸಂದರ್ಭಕ್ಕಾಗಿ ಆಂಬುಲೆನ್ಸ್​ ಕೂಡ ಸ್ಥಳದಲ್ಲಿವೆ. ವಿಷಾನಿಲದಿಂದ ಜನರು ಒದ್ದಾಡಿ ಪ್ರಾಣಬಿಟ್ಟಿದ್ದು, ಭೋಪಾಲ್​ ಅನಿಲ ದುರಂತವನ್ನು ನೆನಪಿಸುವಂತಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net