ಆಸ್ಕರ್​ ಬಂದ್ರೆ ನಿಮ್​ ಕಥೆ ಮುಗೀತು ... ಶೇಖರ್​ ಕಪೂರ್​ ಹೀಗೆ ಹೇಳಿದ್ದು ಯಾಕೆ?

Rahman - Shekhar Kapur
Published on

ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ, ಕಂಗನಾ ಬಿಟ್ಟರೆ ಸಾಕಷ್ಟು ಸುದ್ದಿಯಲ್ಲಿರುವ ಮತ್ತೊಬ್ಬ ಸೆಲೆಬ್ರಿಟಿ ಎಂದರೆ ಅದು ಹಿರಿಯ ನಿರ್ದೇಶಕ ಶೇಖರ್​ ಕಪೂರ್​. ಅವರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದು, ಬಾಲಿವುಡ್​ನ ಪೊಳ್ಳುತನದ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಈಗ ಮತ್ತೊಮ್ಮೆ ಶೇಖರ್​ ಕಪೂರ್​, ಬಾಲಿವುಡ್​ ಕುರಿತು ಮಾತನಾಡಿದ್ದಾರೆ.

ಅದಕ್ಕೆ ಕಾರಣ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್​. ಇತ್ತೀಚೆಗಷ್ಟೇ ರೆಹಮಾನ್​ ಅವರು, ಹೇಗೆ ಬಾಲಿವುಡ್​ನಲ್ಲಿ ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂಬುದರ ಬಗ್ಗೆ ಮಾತನಾಡಿದ್ದರು. ಅದೇ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ನಲ್ಲಿ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಲಾಗುತ್ತಿಲ್ಲ ಎಂದು ಸಹ ಹೇಳಿದ್ದರು.

ಈ ಬಗ್ಗೆ ಟ್ವೀಟ್​ ಮಾಡಿರುವ ಶೇಖರ್​ ಕಪೂರ್​, 'ರೆಹಮಾನ್​ ನಿಮ್ಮ ಸಮಸ್ಯೆ ಏನು ಗೊತ್ತಾ? ನೀವು ಆಸ್ಕರ್​ ಪ್ರಶಸ್ತಿ ವಿಜೇತರು. ಒಮ್ಮೆ ಆ ಪ್ರಶಸ್ತಿ ಪಡೆದರೆ, ನಿಮ್ಮ ಕಥೆ ಮುಗೀತು. ಏಕೆಂದರೆ, ನೀವು ಬಾಲಿವುಡ್​ಗಿಂಥ ದೊಡ್ಡದಾಗಿ ಬೆಳೆದುಬಿಟ್ಟಿದ್ದೀರಿ ಎಂದು ಪ್ರೂವ್​ ಆದಂತೆ' ಎಂದು ಬರೆದುಕೊಂಡಿದ್ದಾರೆ.

ರೆಹಮಾನ್​ ಅವರು 'ಸ್ಲಂಡಾಗ್​ ಮಿಲಿಯನೇರ್​'ಗೆ ಸಂಗೀತಕ್ಕೆ ಆಸ್ಕರ್​ ಪ್ರಶಸ್ತಿ ಪಡೆಯುವ ಮೂಲಕ, ಆ ಪ್ರಶಸ್ತಿ ಪಡೆದ ಭಾರತದ ಮೊದಲ ಸಂಗೀತ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಆ ಚಿತ್ರದಲ್ಲಿನ 'ಜೈ ಹೋ' ಹಾಡಿಗೆ ಅತ್ಯುತ್ತಮ ಹಾಡು ಪ್ರಶಸ್ತಿ ಸಿಕ್ಕಿದರೆ, ಆ ಚಿತ್ರದ ಸಂಗೀತ ನಿರ್ದೇಶನಕ್ಕೆ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ ಎಂಬ ಪ್ರಶಸ್ತಿಗೆ ಭಾಜನರಾದರು. ಅಲ್ಲಿಯವರೆಗೂ ಉತ್ತುಂಗದಲ್ಲಿದ್ದ ರೆಹಮಾನ್​, ನಂತರದ ವರ್ಷಗಳಲ್ಲಿ ಬಾಲಿವುಡ್​ನಲ್ಲಿ ಸಂಗೀತ ನಿರ್ದೇಶನ ಮಾಡಿದ್ದು ಕಡಿಮೆಯೇ.

ತಮ್ಮ ಬಗ್ಗೆ ಶೇಖರ್​ ಕಪೂರ್​ ಬರೆದಿರುವ ಸಾಲುಗಳ ಬಗ್ಗೆ ಪ್ರತಿಕ್ರಿಯಿಸಿರುವ ರೆಹಮಾನ್​, 'ಕಳೆದು ಹೋದ ಹಣ ಪುನಃ ಸಿಗುತ್ತದೆ. ಕಳೆದು ಹೋದು ಜನಪ್ರಿಯತೆ ಮತ್ತೆ ಸಿಗುತ್ತದೆ. ಆದರೆ, ಮತ್ತೆ ಸಿಗದಿರುವುದೆಂದರೆ ಅದು ಸಮಯ ಮಾತ್ರ. ನಾವು ಸಮಯ ಹಾಳು ಮಾಡಿಕೊಂಡು, ಈ ಬಗ್ಗೆ ಕೊರಗುತ್ತಾ ಕೂರಬಾರದು. ನಾವಿನ್ನೂ ಮಾಡುವುದು ಸಾಕಷ್ಟಿದೆ. ಆ ನಿಟ್ಟಿನಲ್ಲಿ ಮುಂದುವರೆಯೋಣ' ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net