VIDEO| ನಟ ಸೋನು ಸೂದ್​ರಿಂದ ಟ್ರ್ಯಾಕ್ಟರ್​ ಗಿಫ್ಟ್​ ಪಡೆದ ರೈತನ ಭಾವುಕ ನುಡಿ!

Sonu Sood
Published on

ವಿಶಾಖಪಟ್ಟಣಂ: ಕರೊನಾ ಸಂಕಷ್ಟ ಕಾಲದಲ್ಲಿ ಸಾಕಷ್ಟು ನೋಂದ ಜೀವಗಳಿಗೆ ಆಸರೆಯಾಗಿರುವ ಬಾಲಿವುಡ್​ ನಟ ಸೋನು ಸೂದ್​ ತೆರೆಯ ಮೇಲೆ ಖಳನಾಯಕನಾಗಿ ಅಬ್ಬರಿಸಿದರೂ ನಿಜ ಜೀವನದಲ್ಲಿ ರಿಯಲ್​ ಹಿರೋ ಆಗಿ ಸಾಕಷ್ಟು ಮೆಚ್ಚುಗೆ ಪಾತ್ರರಾಗಿದ್ದಾರೆ.

ಇತ್ತೀಚೆಗಷ್ಟೇ ಆಂಧ್ರ ಪ್ರದೇಶದ ಚಿತ್ತೂರು ಮೂಲದ ರೈತ ನಾಗೇಶ್ವರ್​ ರಾವ್​ ಆರ್ಥಿಕ ಸಮಸ್ಯೆಯಿಂದ ತಮ್ಮ ಇಬ್ಬರು ಹೆಣ್ಣುಮಕ್ಕಳ ಸಹಾಯದಿಂದ ಹೊಲ ಉಳುಮೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದು ಸೋನು ಸೂದ್​ ಗಮನಕ್ಕೆ ಬಂದು, ಅವರ ಮನಕರಗಿ ಇದೀಗ ರೈತನ ಮನೆಗೆ ಟ್ಯಾಕ್ಟರ್​ ಕೊಡುಗೆ ನೀಡಿದ್ದು, ಅದನ್ನು ಪಡೆದ ರೈತನ ಮೊಗದಲ್ಲಿ ನೋವು ಮಾಯವಾಗಿದೆ.

ಜುಲೈ 26ರಂದೇ ಟ್ರ್ಯಾಕ್ಟರ್​ ಕೊಡುಗೆ ನೀಡುವುದಾಗಿ ಸೋನು ಸೂದ್​ ಟ್ವೀಟ್​ ಮಾಡಿದ್ದರು. ಕೊಟ್ಟ ಮಾತಿನಂತೆ ನಿನ್ನೆ ಸಂಜೆ ನಾಗೇಶ್ವರ್​ ರಾವ್ ಅವರ ಮನೆಗೆ ಟ್ರ್ಯಾಕ್ಟರ್​ ಬಂದು ತಲುಪಿದೆ.

ಟ್ರ್ಯಾಕ್ಟರ್​ ಕೊಡುಗೆಗೆ ಸೋನು ಸೂದ್​ ಅವರಿಗೆ ಕೃತಜ್ಞತೆ ಸಲ್ಲಿಸಿರುವ ನಾಗೇಶ್ವರ್​ ರಾವ್​, ನಾನು ಮತ್ತು ನನ್ನ ಕುಟುಂಬ ಸಹೃದಯಿ ನಟ ಸೋನ್​ ಸೂದ್​ ಕಾಲಿಗೆ ತಲೆಬಾಗಿ ನಮಸ್ಕರಿಸುತ್ತೇವೆ. ಅವರು ತೆರೆಯ ಮೇಲೆ ಖಳನಾಯಕನಾಗಿ ನಟಿಸಿದರೂ, ನಿಜ ಜೀವನದಲ್ಲಿ ಅವರೊಬ್ಬ ರಿಯಲ್​ ಹೀರೋ ಎಂದಿದ್ದಾರೆ.

ಉಳುಮೆ ಮಾಡಲು ಎತ್ತುಗಳನ್ನು ತರುವಷ್ಟು ಹಣ ನಾಗೇಶ್ವರ್​ ರಾವ್​ ಕುಟುಂಬದ ಬಳಿ ಇರಲಿಲ್ಲ. ಹೀಗಾಗಿ ತನ್ನ ಹೆಣ್ಣುಮಕ್ಕಳೇ ಉಳುಮೆಗೆ ಹೆಗಲಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದನ್ನು ನೋಡಿ ಟ್ವೀಟ್​ ಮಾಡಿದ್ದ ಸೋನು ಸೂದ್​, ಈ ಕುಟುಂಬ ಒಂದು ಜೊತೆ ಎತ್ತುಗಳಿಗೆ ಅರ್ಹರಲ್ಲ. ಅವರು ಟ್ರ್ಯಾಕ್ಟರ್​ಗೆ ಅರ್ಹರು. ಹೀಗಾಗಿ ನಾನೊಂದು ಟ್ರ್ಯಾಕ್ಟರ್​ ಅವರಿಗೆ ಕಳುಹಿಸಿಕೊಡುತ್ತೇನೆ. ಇಂದು ಸಂಜೆಯೊಳಗೆ ಟ್ರ್ಯಾಕ್ಟರ್​ ನಿಮ್ಮ ಹೊಲ ಉಳುಮೆ ಮಾಡಲಿದೆ. ನಿಮಗೆ ಒಳ್ಳೆಯದಾಗಲಿ ಎಂದು ಸೋನು ಹರಸಿದ್ದರು.

ಇದರ ನಡುವೆ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರೈತ ನಾಗೇಶ್ವರ್​ ರಾವ್​ ಅವರ ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಬಗ್ಗೆ ಟ್ವೀಟ್​ ಮೂಲಕ ತಿಳಿಸಿರುವ ಅವರು ಸೋನು ಸೂದ್​ ಅವರನ್ನು ಪ್ರಶಂಸಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೋನು ಸೂದ್​ ಸಹ ಧನ್ಯವಾದಗಳನ್ನು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net