ಭೋಪಾಲ್: ಹುಡುಗರು ಕಾಲೇಜಿಗೆ ಸೇರಿದಾಗ ಅವರು ಸರಿಯಾಗಿ ಓದುತ್ತಿದ್ದಾರೋ? ಇಲ್ಲವೋ? ಎಂಬ ಅನುಮಾನ ಪಾಲಕರಿಗೆ ಬರುತ್ತದೆ. ಎಲ್ಲಿ ಪುಂಡರ ಸಂಘ ಸೇರಿ, ಓದನ್ನು ನಿರ್ಲಕ್ಷಿಸಿ ಹಾಳಾಗುತ್ತಾರೋ ಎಂಬ ಭಯವಿರುತ್ತದೆ. ಆದರೆ, ಹೆಣ್ಣುಮಕ್ಕಳ ವಿಷಯಕ್ಕೆ ಬಂದರೆ ಪಾಲಕರು ಎದುರಿಸುವ ಆತಂಕ ಹೆಚ್ಚಿರುತ್ತಿದೆ. ನಮ್ಮ ಮಗಳು ಯಾರನ್ನಾದರೂ ಪ್ರೀತಿಸುತ್ತಿದ್ದಾಳೆಯೇ ಎಂಬ ಚಿಂತೆ ಒಂದೆಡೆಯಾದರೆ, ಯಾರಾದರೂ ಆಕೆಯನ್ನು ಹಿಂಬಾಲಿಸಿ ಕಿರುಕುಳ ಕೊಡುತ್ತಾರೋ ಎಂಬ ಭಯ ಮತ್ತೊಂದೆಡೆ. ಹೀಗಾಗಿ ಕೆಲ ಪಾಲಕರು ಕಾಲಕಾಲಕ್ಕೆ ಕಾಲೇಜಿಗೆ ಹೋಗಿ, ತಮ್ಮ ಮಕ್ಕಳ ಮೇಲೆ ನಿಗಾ ಇಡುತ್ತಾರೆ. ಆದರೆ ನಾವೀಗ ಹೇಳಲು ಹೊರಟಿರುವ ಸ್ಟೋರಿ ಇದಕ್ಕೆ ವಿಭಿನ್ನವಾಗಿದೆ.ಅದೇನೆಂದರೆ, ಮಹಿಳೆಯೊಬ್ಬರು ತನ್ನ ಮಗಳು ಓದುತ್ತಿರುವ ಕಾಲೇಜಿಗೆ ನಿತ್ಯವೂ ತಪ್ಪದೇ ಹೋಗುತ್ತಿದ್ದಾರೆ. ಅಷ್ಟಕ್ಕೂ ಆಕೆ ಕಾಲೇಜಿಗೆ ಹೋಗುತ್ತಿರುವುದು ಮಗಳ ಮೇಲೆ ಕಣ್ಣಿಡಲೂ ಅಲ್ಲ ಮತ್ತು ಆಕೆ ಉಪನ್ಯಾಸಕಿಯೂ ಅಲ್ಲ. ಹಾಗಾದರೆ ಕಾಲೇಜಿಗೆ ಹೋಗಲು ಕಾರಣ ಏನಿರಬಹುದು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಆಕೆಯ ಹೆಸರು ಶಕುನ್ ವಿಶ್ವಕರ್ಮ. ಮಧ್ಯ ಪ್ರದೇಶದ ನಿವಾಸಿ. ಶಕುನ್ ಅವರ ಮಗಳು ಸ್ಥಳೀಯ ಮಾಲ್ತಾನ್ನಲ್ಲಿರುವ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾಳೆ. ಶಕುನ್ ಕೂಡ ಅದೇ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷ ಓದುತ್ತಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಒಟ್ಟಿಗೆ ಕಾಲೇಜಿಗೆ ಹೋಗುತ್ತಾರೆ. 25 ವರ್ಷಗಳ ನಂತರ ತನ್ನ 40ನೇ ವಯಸ್ಸಿನಲ್ಲಿ ಶುಕುನ್ ಶಿಕ್ಷಣವನ್ನು ಪೂರ್ಣಗೊಳಿಸುತ್ತಿದ್ದಾರೆ.
ಅಂದಹಾಗೆ ಶಕುನ್ ಅವರ ಹಳ್ಳಿಯಲ್ಲಿ ಐದನೇ ತರಗತಿಯವರೆಗೆ ಮಾತ್ರ ಶಾಲೆ ಇತ್ತು. ಇದರಿಂದಾಗಿ ಆಕೆ ಐದನೇ ತರಗತಿಗೆ ಓದುವುದನ್ನು ನಿಲ್ಲಿಸಿದ್ದರು. 1992ರಲ್ಲಿ ಐದನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ, 2004ರಲ್ಲಿ ಶಕುನ್ ಮದುವೆಯಾದರು. ಆದರೆ, ಮದುವೆಯ ನಂತರವೂ ಆಕೆಗೆ ಓದುವ ಆಸೆ ಹುಟ್ಟಿತು. ಈ ಬಗ್ಗೆ ಮನೆಯಲ್ಲಿ ಹೇಳಿದಾಗ ಒಪ್ಪಿಕೊಂಡರು. 2017ರಲ್ಲಿ ಶಕುನ್ ಅವರು ತಮ್ಮ ಮಗಳನ್ನು 8ನೇ ತರಗತಿಗೆ ಸೇರಿಸಿ, ತಾವೂ ಸೇರಿಕೊಂಡರು. ಇಬ್ಬರೂ ಒಟ್ಟಿಗೆ ಓದುತ್ತಿದ್ದರು. ಮಗಳು ತನ್ನ ಅಧ್ಯಯನದ ಜತೆಗೆ ತಾಯಿಗೂ ತುಂಬಾ ಬೆಂಬಲವಾಗಿ ನಿಂತಳು. ಇಬ್ಬರು ಜತೆಯಲ್ಲೇ ಶಾಲೆಗೆ ತೆರಳುತ್ತಿದ್ದರು.
ಪ್ರಸ್ತುತ ಶಕುನ್ ಅವರು ಅಂತಿಮ ವರ್ಷದ ಬಿಎ ಓದುತ್ತಿದ್ದಾರೆ. ಡಿಗ್ರಿ ಮುಗಿಸಿದ ನಂತರವೂ ಓದು ಮುಂದುವರಿಸುವುದಾಗಿ ಹೇಳಿದ್ದಾರೆ. ಶಕುನ್ ಅವರ ಮಗಳು ಅನು ವಿಶ್ವಕರ್ಮ, ಬಿಎಸ್ಸಿ ಅಂತಿಮ ವರ್ಷ ಓದುತ್ತಿದ್ದಾಳೆ. ನನ್ನ ಅಮ್ಮ ನನಗಿಂತ ಬುದ್ಧಿವಂತೆ ಮತ್ತು ಚೆನ್ನಾಗಿ ಓದುತ್ತಾಳೆ ಎಂದು ಅನು ಹೇಳುತ್ತಾಳೆ. ತಾಯಿಯ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದಾಳೆ.
ಮನೆಯಲ್ಲಿ ಕುಟುಂಬ ಸದಸ್ಯರ ಬೆಂಬಲದಿಂದ 8, 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ಶಕುನ್ ತೇರ್ಗಡೆಯಾಗಿದ್ದಾರೆ. ಮನೆಯಲ್ಲಿ ಕೆಲಸ ಮಾಡುತ್ತಲೇ ಸಾಮಾನ್ಯ ವಿದ್ಯಾರ್ಥಿನಿಯಾಗಿಯೂ ಓದಿ ಶಕುನ್ ಅವರು ಉತ್ತಮ ಅಂಕ ಗಳಿಸಿದ್ದಾರೆ. ಶಿಕ್ಷಣದ ಮೌಲ್ಯ ಏನು ಎಂಬುದನ್ನು ಶುಕುನ್ ತಿಳಿದಿರುವ ಕಾರಣ ಅವರು ಈ ಮಾರ್ಗವನ್ನು ಆರಿಸಿಕೊಂಡರು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ತಾಯಿ-ಮಗಳ ವಿಷಯ ತಿಳಿದ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)
ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಸ್ಟಾರ್ ನಟನಿಗೆ ಕಾದಿತ್ತು ಸರ್ಪ್ರೈಸ್!
ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ವರುಣನ ಆರ್ಭಟ: ವಾಹನ ಸವಾರರ ಪರದಾಟ, ಆರ್ಸಿಬಿ ಪಂದ್ಯಕ್ಕೆ ಮಳೆ ಭೀತಿ