More

    ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ವರುಣನ ಆರ್ಭಟ: ವಾಹನ ಸವಾರರ ಪರದಾಟ, ಆರ್​ಸಿಬಿ ಪಂದ್ಯಕ್ಕೆ ಮಳೆ ಭೀತಿ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೆಲ ದಿನಗಳಿಂದ ರಾತ್ರಿ ಅಥವಾ ಸಂಜೆ ಹೊತ್ತು ಅಬ್ಬರಿಸುತ್ತಿದ್ದ ಮಳೆರಾಯ ಇಂದು ಬೆಳ್ಳಂಬೆಳಗ್ಗೆಯೇ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾನೆ. ಬೆಳಗ್ಗೆ 5 ಗಂಟೆಯಿಂದಲೇ ನಗರದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

    ನಗರದ ಕೆ.ಆರ್​. ಮಾರ್ಕೆಟ್​, ಮೆಜಿಸ್ಟಿಕ್​, ಟೌನ್​ ಹಾಲ್​, ಮೈಸೂರು ಬ್ಯಾಂಕ್​ ವೃತ್ತ, ಚಾಮರಾಜಪೇಟೆ, ಶಾಂತಿನಗರ, ಕೋರಮಂಗಲ, ರಿಚ್ಮಂಡ್ ಸರ್ಕಲ್ ಹಾಗೂ ಕಾರ್ಪೋರೇಷನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಈಗಲೂ ಮೋಡಕವಿದ ವಾತಾವರಣವಿದ್ದು ಮಳೆ ಮುಂದುವರಿಯುವ ಸಾಧ್ಯತೆ ಇದೆ.

    ಬೆಳ್ಳಂಬೆಳಗ್ಗೆ ಮಳೆ ಸುರಿದಿದ್ದರಿಂದ ಕೆ.ಆರ್​. ಮಾರುಕಟ್ಟೆಯ ವಹಿವಾಟುವಿನಲ್ಲಿ ಕೆಲ ಕಾಲ ಅಡಚಣೆಯಾಗಿದೆ. ಬೆಳ್ಳಂಬೆಳಗ್ಗೆ ರಸ್ತೆಗಿಳಿದ ವಾಹನ ಸವಾರರು ಕೂಡ ಮಳೆಗೆ ಸಿಲುಕಿ ಪರದಾಡುವಂತಾಯಿತು. ಕಳೆದ ಮೂರು ದಿನಗಳಿಂದ ನಗರದಲ್ಲಿ ಸಾಕಷ್ಟು ತಂಪನೆಯ ವಾತಾವರಣ ಇದೆ. ಮಳೆ ಹೀಗೆ ಮುಂದುವರಿದರೆ ಬೇಸಿಗೆಯ ಬಿಸಿಗೆ ಬಳಲಿ ಬೆಂಡಾಗಿದ್ದ ಬೆಂಗಳೂರಿನ ಜತೆಗೆ ತಣ್ಣನೆಯ ಅನುಭವ ಮುದ ನೀಡಲಿದೆ.

    ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ಮುಂದಿನ ಒಂದು ವಾರದವರೆಗೆ ರಾಜ್ಯದ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮೇ 19ರಿಂದ ಮಳೆ ಇನ್ನಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ. ಬಾಗಲಕೋಟೆ, ಚಾಮರಾಜನಗರ, ಕೊಡಗು, ಶಿವಮೊಗ್ಗದ ಆಗುಂಬೆ ಸೇರಿ ವಿವಿಧ ಪ್ರದೇಶಗಳಲ್ಲಿ ಗುರುವಾರವೂ ಭರ್ಜರಿ ಮಳೆ ಸುರಿದಿದೆ. ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡದಲ್ಲಿ ಮೇ 19ರಿಂದ ಎರಡು ದಿನ ಹಾಗೂ ಮಂಡ್ಯ, ತುಮಕೂರು, ಉಡುಪಿಯಲ್ಲಿ ಮೇ 20ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

    ಬಳ್ಳಾರಿ, ಮಂಡ್ಯ, ಮೈಸೂರು, ಕೊಡಗು, ಹಾಸನ, ಚಿತ್ರದುರ್ಗದಲ್ಲಿ ಮುಂದಿನ ಎರಡು ದಿನ, ಉಡುಪಿ, ಉತ್ತರ ಕನ್ನಡದಲ್ಲಿ ಮೇ 19ರಂದು ಯೆಲ್ಲೋ ಅಲರ್ಟ್ ಇರಲಿದೆ. ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ.

    ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಗದಗ, ರಾಯಚೂರು, ಕೋಲಾರ, ರಾಮನಗರ, ವಿಜಯನಗರ, ಬಾಗಲಕೋಟೆಯಲ್ಲಿ 40-50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಗರಿಷ್ಠ ತಾಪಮಾನದಲ್ಲಿ 2-4 ಡಿ. ಸೆ. ಇಳಿಮುಖವಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಕ್ರಮವಾಗಿ 30 ಡಿ. ಸೆ ಮತ್ತು 22 ಡಿ. ಸೆ. ಉಷ್ಣಾಂಶ ದಾಖಲಾಗಿದೆ.

    ಆರ್​ಸಿಬಿ ಪಂದ್ಯಕ್ಕೆ ಮಳೆ ಭೀತಿ
    ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ಆರ್​ಸಿಬಿ ಪ್ಲೇಆಫ್​ ಪ್ರವೇಶ ಮಾಡಲು ಈ ಪಂದ್ಯ ನಡೆಯಲೇಬೇಕು. ಒಂದು ವೇಳೆ ಮಳೆಯಿಂದ ರದ್ದಾದರೆ ಆರ್​ಸಿಬಿ ಐಪಿಎಲ್​ನಿಂದ ಹೊರಬೀಳಲಿದೆ. ಸಿಎಸ್​ಕೆ ಪಾಲಿಗೆ ವರವಾಗಲಿದೆ. ಹವಾಮಾನ ಇಲಾಖೆಯಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ ಇರುವುದರಿಂದ ಆರ್​ಸಿಬಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.

    ಟೀಮ್​ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಸ್ಟಾರ್​ ನಟನಿಗೆ ಕಾದಿತ್ತು ಸರ್ಪ್ರೈಸ್​​!​

    ಮಳೆ ಇನ್ನಷ್ಟು ಬಿರುಸು; 6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts