ಕಂಗನಾ ಕಂಡರೆ ಎಲ್ಲರಿಗೂ ಹೊಟ್ಟೆಉರಿ ...'ಕ್ವೀನ್​' ಪರವಾಗಿ ನಿಂತ ಶತ್ರುಘ್ನ ಸಿನ್ಹಾ

Kangana - Shatrughan Final
Published on

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ನಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ಒಬ್ಬ ಸೆಲೆಬ್ರಿಟಿ ಎಂದರೆ ಅದು ಕಂಗನಾ ರಣಾವತ್​. ಒಂದಲ್ಲಾ ಒಂದು ಕಾರಣಕ್ಕೆ ಕಂಗನಾ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಸುಶಾಂತ್​ ಆತ್ಮಹತ್ಯೆಯ ನಂತರ ಕಂಗನಾ, ಹಲವರ ವಿರುದ್ಧ ಮಾತಾಡಿ, ತಮ್ಮ ಶತ್ರು ಪಾಳಯದಲ್ಲಿ ಇನ್ನಷ್ಟು ಜನರನ್ನು ಹೆಚ್ಚಿಸಿಕೊಂಡಿದ್ದಾರೆ ಎಂದರೆ ತಪ್ಪಿಲ್ಲ.

ಇಷ್ಟಕ್ಕೂ ಕಂಗನಾ ಕಂಡರೆ, ಬಾಲಿವುಡ್​ನಲ್ಲಿ ಹಲವು ಸೆಲೆಬ್ರೆಟಿಗಳಿಗೆ ಆಗಿಬರುವುದಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಆಕೆ ಪ್ರತಿಭಾವಂತೆ ಎಂಬ ಕಾರಣಕ್ಕೆ ಹಲವರಿಗೆ ಹೊಟ್ಟೆ ಉರಿ ಎನ್ನುತ್ತಾರೆ ಹಿರಿಯ ನಟ ಶತ್ರುಘ್ನ ಸಿನ್ಹಾ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನಾನು ನೋಡಿರುವಂತೆ, ಬಹಳಷ್ಟು ಜನ ಕಂಗನಾ ವಿರುದ್ಧ ಮಾತಾಡುತ್ತಾರೆ. ಅದಕ್ಕೆ ಕಾರಣ ಆಕೆಯ ಬಗ್ಗೆ ಅವರೆಲ್ಲರಿಗೂ ಹೊಟ್ಟೆ ಉರಿ. ಆಕೆ ಯಾವ ಕ್ಯಾಂಪ್​ನಲ್ಲೂ ಗುರುತಿಸಿಕೊಂಡಿಲ್ಲ. ಆಕೆಗೆ ಗಾಡ್​ಫಾದರ್​ ಇಲ್ಲ. ತನ್ನ ಸ್ವಂತ ಪ್ರತಿಭೆಯನ್ನು ನಂಬಿಕೊಂಡು ಬಂದ ಆಕೆ, ಇಂದು ಎಲ್ಲರನ್ನೂ ಹಿಂದಕ್ಕೆ ಸರಿಸಿ, ಸಾಧನೆ ಮಾಡಿರುವುದು ಸಹಜವಾಗಿಯೇ ಎಲ್ಲರಿಗೂ ಹೊಟ್ಟೆ ಉರಿ ಇದ್ದೇ ಇರುತ್ತದೆ' ಎನ್ನುತ್ತಾರೆ ಶತ್ರುಘ್ನ ಸಿನ್ಹಾ.

ಆ ಹೊಟ್ಟೆಉರಿಯಿಂದಲೇ ಎಲ್ಲರೂ ಸಮಯ ಸಿಕ್ಕಾಗಲೆಲ್ಲಾ ಆಕೆಯ ವಿರುದ್ಧ ಹಗೆ ಸಾಧಿಸುತ್ತಾ ಬಂದಿದ್ದಾರೆ ಎಂಬ ಮಾತನ್ನು ಶತ್ರುಘ್ನ ಸಿನ್ಹಾ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಇನ್ನು 'ಕಾಫಿ ವಿಥ್​ ಕರಣ್​' ತರಹದ ಕಾರ್ಯಕ್ರಮಗಳ ಕುರಿತು ಮಾತನಾಡಿರುವ ಅವರು, 'ನಮ್ಮ ಕಾಲದಲ್ಲಿ ಇಂತಹ ಕಾರ್ಯಕ್ರಮಗಳು ಇರಲಿಲ್ಲ. ಇಂತಹ ಕಾರ್ಯಕ್ರಮಗಳಿಂದಲೇ ಚಿತ್ರರಂಗದಲ್ಲಿ ವಿವಾದಗಳು ಹೆಚ್ಚಾಗುತ್ತಿವೆ. ಇದರಿಂದಾಗಿಯೇ ಒಂದೇ ಮನೆಯ ಜನ ಕಿತ್ತಾಡುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net