

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ ಆಹಾರಗಳನ್ನು ತ್ಯಾಗ ಮಾಡಬೇಕು. ಅಲ್ಲದೆ, ಸಾಕಷ್ಟು ಸವಾಲುಗಳನ್ನೂ ಎದುರಿಸಬೇಕು.
ಒಂದೇ ಕಡೆ ಕುಳಿತು ಮಾಡುವ ಕೆಲಸಗಳಿಂದಾಗಿ ನೂರರಲ್ಲಿ ತೊಂಬತ್ತೊಂಬತ್ತು ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಿನ್ನುವುದರಲ್ಲಿ ನಾವು ಮಾಡುವ ಮಿಸ್ಟೇಕ್ಸ್ ಕೂಡ ಅಧಿಕ ತೂಕದ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದರೆ, ಉತ್ತಮ ಆಹಾರ ಪದ್ಧತಿಯಿಂದ ಮಾತ್ರ ತೂಕವನ್ನು ನಿಯಂತ್ರಣ ಮಾಡಬಹುದು ಎಂದು ತಜ್ಞರು ಯಾವಾಗಲೂ ಹೇಳುತ್ತಲೇ ಇರುತ್ತಾರೆ.
ಇನ್ನು ಸಿನಿಮಾಗಾಗಿ ಅನೇಕ ಕಲಾವಿದರು ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳುವುದು ಮತ್ತು ಇಳಿಸಿಕೊಳ್ಳುವುದು ಸಾಮಾನ್ಯ. ಪಾತ್ರಕ್ಕೆ ತಕ್ಕಂತೆ ನಟರು ತಮ್ಮನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಬದ್ಧತೆ ಇದ್ದವರು ಮಾತ್ರ ಇಂತಹ ಏರಿಳಿತಗಳನ್ನು ಮಾಡಲು ಸಾಧ್ಯ. ದಂಗಲ್ ಸಿನಿಮಾಗೆ ತೂಕ ಹೆಚ್ಚಿಕೊಂಡಿದ್ದ ಸಲ್ಮಾನ್ ಖಾನ್, ನಂತರದಲ್ಲಿ ತೂಕ ಇಳಿಸಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು. ಅದೇ ರೀತಿ ಮುಂಜಾನೆ ಮಾತು ಚಿತ್ರಕ್ಕಾಗಿ ನಟ ಸುದೀಪ್ ಅವರು ಸುಮಾರು 14 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದರು. ಈ ರೀತಿ ಅನೇಕ ಸೆಲೆಬ್ರಿಟಿಗಳು ತೂಕ ಇಳಿಕೆ ಮಾಡುವ ಮೂಲಕ ಅನೇಕರಿಗೆ ಸ್ಫೂರ್ತಿ ನೀಡುತ್ತಿದ್ದಾರೆ.
ಇದೀಗ ತೆಲುಗಿನ ಖ್ಯಾತ ನಟ ಶರ್ವಾನಂದ್ ಅವರು ಆ ಸಾಲಿಗೆ ಸೇರಿಕೊಂಡಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 22 ಕೆಜಿ ತೂಕವನ್ನು ಇಳಿಸಿಕೊಂಡು ಸ್ಲಿಮ್ ಆಗಿ ಕಾಣುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಷ್ಟೊಂದು ಕೆಜಿ ತೂಕವನ್ನು ಇಳಿಸಿಕೊಳ್ಳಲು ಶರ್ವಾನಂದ್ ಅವರು ತುಂಬಾ ಶ್ರಮಪಟ್ಟಿದ್ದಾರೆ. ಹಾಗಾದರೆ, ಶರ್ವಾನಂದ್ ಅವರು ತೂಕ ಇಳಿಸಲು ಯಾವ ರೀತಿಯ ಆಹಾರ ಕ್ರಮ ಅನುಸರಿಸಿದರು? ಎಷ್ಟು ಹೊತ್ತು ಜಿಮ್ನಲ್ಲಿ ಕಸರತ್ತು ಮಾಡುತ್ತಿದ್ದರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ನಟ ಶರ್ವಾನಂದ್ ಅವರ ಬಗ್ಗೆ ನಿಮಗೆ ತಿಳಿದಿರುತ್ತದೆ ಅನಿಸುತ್ತದೆ. ಶತಮಾನಾಂಭವತಿ, ರನ್ ರಾಜಾ ರನ್, ಶ್ರೀಕಾರಂ ಹಾಗೂ ಮಹಾನುಭಾವಡು ಅಂತಹ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ತೆಲುಗು ಸಿನಿಮಾ ರಂಗದ ಬಹು ಬೇಡಿಕೆ ನಟರಲ್ಲಿ ಇವರು ಕೂರ ಒಬ್ಬರಾಗಿದ್ದಾರೆ.
ತಮಿಳಿನ ಬ್ಲಾಕ್ ಬಸ್ಟರ್ ಸಿನಿಮಾ 96 ತೆಲುಗಿನಲ್ಲಿ ಜಾನು ಹೆಸರಿನಲ್ಲಿ ರಿಮೇಕ್ ಆಗಿ ಬಿಡುಗಡೆಯಾಯಿತು. 2019ರಲ್ಲಿ ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ, ಸ್ಕೈಡೈವಿಂಗ್ ಸ್ಟಂಟ್ ಮಾಡುವಾಗ ಶರ್ವಾನಂದ್ ಅವರ ಭುಜಕ್ಕೆ ದೊಡ್ಡ ಗಾಯವಾಗಿತ್ತು. ತಕ್ಷಣ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಲ್ಲದೆ, ತಿಂಗಳುಗಳ ಕಾಲ ವಿಶ್ರಾಂತಿಯ ಅಗತ್ಯವಿತ್ತು. ಇದರಿಂದಾಗಿ ಶರ್ವಾನಂದ್ ಅವರ ತೂಕ ಶೀಘ್ರದಲ್ಲೇ 92 ಕೆಜಿಗೆ ಏರಿತು. ಇದರಿಂದ ಅವರು ತೀವ್ರ ಹತಾಶೆಗೆ ಒಳಗಾದರು. ಆದರೆ, ಈ ಒಂದು ಹತಾಶೆ, ಅವರ ಜೀವನದ ಅತ್ಯಂತ ನಿರ್ಣಾಯಕ ಅಧ್ಯಾಯಗಳಲ್ಲಿ ಒಂದಾಗಿ ಬದಲಾಯಿತು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಇತ್ತೀಚೆಗೆ ಹೈದರಾಬಾದ್ ಟೈಮ್ಸ್ ಜೊತೆ ಮಾತನಾಡಿದ ಶರ್ವಾನಂದ್, ಆ ಘಟನೆ ಅವರ ಜೀವನದಲ್ಲಿ ಹೇಗೆ ಒಂದು ಮಹತ್ವದ ತಿರುವು ನೀಡಿತು ಎಂಬುದನ್ನು ನೆನಪಿಸಿಕೊಂಡರು. ಅಪಘಾತವು ನನ್ನ ಜೀವನದಲ್ಲಿ ಎಲ್ಲವನ್ನೂ ಬದಲಾಯಿಸಿತು. ನಾನು ತಿಂಗಳುಗಟ್ಟಲೆ ಆ್ಯಂಟಿ ಬಯಾಟಿಕ್ಗಳನ್ನು ತೆಗೆದುಕೊಳ್ಳುತ್ತಿದ್ದೆ. ಅಲ್ಲದೆ, ನಿರಂತರವಾಗಿ ಹಸಿವಿನಿಂದ ಬಳಲುತ್ತಿದ್ದೆ ಮತ್ತು ತೂಕ ಹೆಚ್ಚಾಗುತ್ತಲೇ ಇತ್ತು. ಆದರೆ, ಎರಡು ವರ್ಷಗಳ ಹಿಂದೆ ನನಗೆ 18 ವರ್ಷದ ಯುವಕನ ಪಾತ್ರವನ್ನು ನಿರ್ವಹಿಸಬೇಕಾದ ಬೈಕರ್ ಸಿನಿಮಾವನ್ನು ನೀಡಿದಾಗ, ನನ್ನ ರೂಪಾಂತರದ ಪ್ರಯಾಣ ಆರಂಭವಾಯಿತು ಎಂದರು.
ಅಂದಹಾಗೆ, ಶರ್ವಾನಂದ್ ಅವರು ತೂಕ ಇಳಿಸಲು ಶಿಸ್ತು ಮತ್ತು ಸ್ಥಿರತೆಯ ಮೇಲೆ ಗಮನಹರಿಸಿ, ಕಟ್ಟುನಿಟ್ಟಿನ ದಿನಚರಿಯನ್ನು ಅಳವಡಿಸಿಕೊಂಡರು. ಅಂದರೆ, ಪ್ರತಿದಿನ ಬೆಳಗ್ಗೆ 4.30ಕ್ಕೆ ಎದ್ದು ಕೆಬಿಆರ್ ಪಾರ್ಕ್‌ನಲ್ಲಿ ರನ್ನಿಂಗ್ ಮಾಡುತ್ತಿದ್ದರು. ಇದಾದ ನಂತರ ಜಿಮ್ ಸೆಷನ್‌ಗಳು ಮತ್ತು ಸಂಜೆ ವಾಕಿಂಗ್ ಮಾಡುತ್ತಿದ್ದರು. ಸುಮಾರು ಎಂಟು ತಿಂಗಳ ಕಾಲ, ನಾನು ಒಂದೇ ಒಂದು ವಿರಾಮ ತೆಗೆದುಕೊಳ್ಳಲಿಲ್ಲ. ಆ ದಿನಚರಿ ನನಗೆ ತಾಳ್ಮೆ ಮತ್ತು ಗಮನ ಎಲ್ಲವನ್ನು ಕಲಿಸಿತು ಎಂದು ಶರ್ವಾನಂದ್ ಹಂಚಿಕೊಂಡಿದ್ದಾರೆ.
ಇನ್ನು ತಂದೆಯಾದ ಬಳಿಕ ನನ್ನ ಜೀವನಕ್ಕೆ ಮತ್ತೊಂದು ದೃಷ್ಟಿಕೋನ ಸಿಕ್ಕಿತು. ಅದೇನೆಂದರೆ, ನನ್ನ ಮಗಳು ಜನಿಸಿದ ನಂತರ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಅರಿತುಕೊಂಡೆ. ಮೊದಲು ಫಿಟ್ನೆಸ್ ಎಂದರೆ ಪಾತ್ರಕ್ಕೆ ಸೂಕ್ತವಾಗಿ ಕಾಣುವುದರ ಬಗ್ಗೆ ಆಗಿತ್ತು ಆದರೆ, ಈಗ ಅದು ನನ್ನ ಕುಟುಂಬದೊಂದಿಗೆ ಬೆರೆತಿದೆ ಎಂದು ಶರ್ವಾನಂದ್ ತಿಳಿಸಿದರು.
ಶರ್ವಾನಂದ್ ಅವರಿಗೆ ಆಹಾರ ಪದ್ಧತಿ ಮತ್ತೊಂದು ಪ್ರಮುಖ ಸವಾಲಾಗಿತ್ತು. ಮೊದಲೇ ಆಹಾರಪ್ರಿಯರಾಗಿದ್ದ ಶರ್ವಾನಂದ್ಗೆ ತಮ್ಮಿಷ್ಟದ ಆಹಾರಗಳನ್ನು ತ್ಯಜಿಸಿ, ಕಠಿಣ ಆಹಾರ ಕ್ರಮಕ್ಕೆ ಹೊಂದಿಕೊಳ್ಳಲು ಆರಂಭದಲ್ಲಿ ಹೆಣಗಾಡಿದರು. ಆದರೆ, ಅಂತಿಮವಾಗಿ ಆಹಾರ ಸಮತೋಲನವನ್ನು ಕಲಿತರು. ತೂಕ ಇಳಿಕೆಯ ಪ್ರಯಾಣದಲ್ಲಿ ನಾನು ಎಲ್ಲಿಯೂ ಹಸಿವಿನಿಂದ ಬಳಲಲಿಲ್ಲ. ಎಷ್ಟು ಬೇಕು ಅಷ್ಟು ತಿನ್ನುತ್ತಿದ್ದೆ. ಆದರೆ, ಅದಕ್ಕೆ ಸರಿಸಮಾನವಾಗಿ ವರ್ಕೌಟ್ ಮಾಡುತ್ತಿದೆ. ವ್ಯಾಯಮ ಮತ್ತು ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಮೂಲಕ ಸುಮಾರು 22 ಕೆಜಿ ತೂಕವನ್ನು ಕಳೆದುಕೊಂಡೆ ಎಂದು ಶರ್ವಾನಂದ್ ಹೇಳಿದರು.
ಇದೇ ವೇಳೆ ಬೈಕರ್ ಸಿನಿಮಾದ ಬಗ್ಗೆ ಮಾತನಾಡಿದ ಶರ್ವಾನಂದ್, ಈ ಚಿತ್ರದಲ್ಲಿ ನನ್ನ ಫಿಟ್ನೆಸ್ ಲುಕ್ ಅನ್ನು ನಕಲಿ ಮಾಡುವುದು ಆರಂಭದ ಮಾತುಕತೆಯಾಗಿತ್ತು. ಆದರೆ, ಸ್ವತಃ ಫಿಟ್ನೆಸ್ ಹೊಂದುವುದು ನನ್ನ ಬಯಕೆಯಾಗಿತ್ತು. ಈ ಚಿತ್ರವು ತಂದೆ ಮತ್ತು ಮಗನ ಸುತ್ತ ಸುತ್ತುತ್ತದೆ. ನನಗೆ ಬೈಕ್ಗಳೆಂದರೆ ಹೆಚ್ಚು ಇಷ್ಟ. ಇಲ್ಲೂ ಬೈಕರ್ ಪಾತ್ರವಿರುವುದರಿಂದ ಬೈಕ್ಗಳ ಜತೆ ಮತ್ತೆ ಒಂದಾಗಲು ಅವಕಾಶ ಸಿಕ್ಕಿತು ಎಂದು ಹೇಳಿದರು. ಅಂದಹಾಗೆ, ಬೈಕರ್ ಸಿನಿಮಾ ಡಿಸೆಂಬರ್ 6 ರಂದು ಬಿಡುಗಡೆಯಾಗಲಿದೆ ಮತ್ತು 2026 ರ ಸಂಕ್ರಾಂತಿಗಾಗಿ ನಾರಿ ನಾರಿ ನಡುಮ ಮುರಾರಿ ಹೆಸರಿನ ಮತ್ತೊಂದು ಚಿತ್ರ ಕೂಡ ಬಿಡುಗಡೆಯಾಗಲಿದೆ. (ಏಜೆನ್ಸೀಸ್)