

Health Tips : ಮಾನವರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಈ ಆಧುನಿಕ ಜಗತ್ತಿನಲ್ಲಿ ಬೆರಳ ತುದಿಯಲ್ಲೇ ಲಭ್ಯವಾಗುತ್ತಿವೆ. ಒಂದೇ ಜಾಗದಲ್ಲಿ ಕುಳಿತು ಇಡೀ ಜಗತ್ತನ್ನೇ ನೋಡುತ್ತಿರುವ ಮಾನವ, ಅದೇ ಜಾಗಕ್ಕೆ ತನಗೆ ಬೇಕಾದ ಎಲ್ಲ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದಾನೆ. ಆದರೆ, ಈ ಎಲ್ಲಾ ಸೌಲಭ್ಯಗಳು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿವೆ ಎಂಬ ಆಘಾತಕಾರಿ ಸಂಗತಿಯನ್ನು ಹೊಸ ಅಧ್ಯಯನವೊಂದು ಕಂಡುಹಿಡಿದಿದೆ.
ಮನೆ ಅಥವಾ ಆಫೀಸ್ನಲ್ಲಿ ಕುಳಿತುಕೊಂಡೇ ತಮ್ಮಿಷ್ಟದ ಆಹಾರಗಳನ್ನು ಆರ್ಡರ್ ಮಾಡುವುದು, ಸಭೆಗಳಿಗೆ ಹಾಜರಾಗಲು ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ಮನೆಯಲ್ಲಿ ಅಡುಗೆ ಮಾಡದೇ ಆನ್ಲೈನ್ನಲ್ಲೇ ಆರ್ಡರ್ ಮಾಡುವುದು. ಹೀಗೆ ಅನೇಕ ರೀತಿಯ ಸೌಲಭ್ಯಗಳು ಹೆಚ್ಚಾದಂತೆ ನಿಷ್ಕ್ರಿಯ ಸಮಾಜ (ನಿಷ್ಕ್ರಿಯ ಸಾಂಕ್ರಾಮಿಕ) ಬೆಳೆಯುತ್ತಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ನಿಷ್ಕ್ರಿಯತೆ ಅನ್ನೋದು ಎಷ್ಟೊಂದು ಅಪಾಯಕಾರಿ ಎಂಬುದರ ಕುರಿತು ಜಾಗೃತಿ ಮೂಡಿಸಲು, ವಾಕಿಂಗ್ ಅಪ್ಲಿಕೇಶನ್ WeWord ನ ತಂಡವೊಂದು ಸ್ಯಾಮ್ ಎಂಬ ವಿಚಿತ್ರ ವ್ಯಕ್ತಿಯನ್ನು ಪರಿಚಯಿಸಿದೆ. 2050ರ ವೇಳೆಗೆ ಸರಾಸರಿ ವ್ಯಕ್ತಿ ಹೇಗಿರುತ್ತಾನೆ ಎಂಬುದನ್ನು ಊಹಿಸಿ, ಕೃತಕ ಬುದ್ಧಿಮತ್ತೆಯ ಸಹಾಯದಿಂದ ಸ್ಯಾಮ್ ಎಂಬ ವ್ಯಕ್ತಿಯ ಮಾದರಿಯನ್ನು ರಚಿಸಲಾಗಿದೆ.
ಸ್ಯಾಮ್ ಎಂಬ ವ್ಯಕ್ತಿಯ ಮಾದರಿಯ ಚಿತ್ರಣವನ್ನು ನೀವು ನೋಡಿದರೆ, ನೀವು ಶಾಕ್ ಆಗೋದು ಖಚಿತ. ಏಕೆಂದರೆ, ಗುಳಿಬಿದ್ದ ಕಣ್ಣುಗಳು, ಮಂದ ಮೈಬಣ್ಣ, ಊದಿಕೊಂಡ ಕಾಲುಗಳು ಮತ್ತು ಯಾವಾಗಲೂ ಸ್ಮಾರ್ಟ್‌ಫೋನ್ ಮೇಲೆ ಬಾಗುವುದರಿಂದ ಉಂಟಾಗುವ ಕುತ್ತಿಗೆ ಅಥವಾ ಬಾಗಿದ ಭಂಗಿಯನ್ನು ನೋಡಬಹುದು. ಮಾನವರ ಜೀವನಶೈಲಿಯಿಂದ ಉಂಟಾಗಬಹುದಾದ ಭಯಾನಕ ಭವಿಷ್ಯವನ್ನು ಫೋಟೋದಲ್ಲಿ ನೀವು ಕಾಣಬಹುದು.
ಜಡ ಜೀವನಶೈಲಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ವೈದ್ಯಕೀಯ ಸಂಶೋಧನೆಯ ಬೆಂಬಲದೊಂದಿಗೆ SAM ಮಾದರಿಯನ್ನು ರಚಿಸಲಾಗಿದೆ. ದೇಹವು ನಿರಂತರವಾಗಿ ಚಟುವಟಿಕೆಯಿಂದಿರಲು ಸಾಧ್ಯವಾಗದಿದ್ದಾಗ, ಅತಿಯಾದ ಮೊಬೈಲ್ ಪರದೆಯ ಬಳಕೆ ಮತ್ತು ಸುಲಭವಾಗಿ ದೊರೆಯವುದಕ್ಕೆ ಅಂಟಿಕೊಳ್ಳುವಂತಹ ಅಭ್ಯಾಸಗಳು ಮಾನವ ದೇಹವನ್ನೇ ಹದಗೆಡಿಸುವ ಅನೇಕ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.
ಯಾವುದೇ ವ್ಯಾಯಾಮ ಮಾಡದೆ ನೀವು ನಿರಂತರವಾಗಿ ಫಾಸ್ಟ್ ಫುಡ್ ಸೇವಿಸಿದರೆ, ಅದು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ ಮತ್ತು ಬೊಜ್ಜು, ಮಧುಮೇಹ ಮತ್ತು ಹೃದ್ರೋಗಕ್ಕೆ ಕಾರಣವಾಗುತ್ತದೆ. ಗಂಟೆಗಟ್ಟಲೆ ಕುಳಿತುಕೊಂಡು ಪರದೆಯನ್ನೇ ದೀರ್ಘಕಾಲ ನೋಡುವುದರಿಂದ ಟೆಕ್ ನೆಕ್ ಉಂಟಾಗುತ್ತದೆ. ಅಂದರೆ, ಇದು ಕುತ್ತಿಗೆ ಮತ್ತು ಭುಜಗಳಲ್ಲಿ ನಿರಂತರ ನೋವನ್ನು ಉಂಟುಮಾಡಬಹುದು. ಇದಲ್ಲದೆ, ನಮ್ಮ ದೇಹಕ್ಕೆ ಅಗತ್ಯವಾದ ಚಲನೆ ಇಲ್ಲದಿದ್ದರೆ, ಕೀಲುಗಳು ಬಾಗುವುದಿಲ್ಲ ಮತ್ತು ಗಟ್ಟಿಯಾಗುತ್ತವೆ. ಇದು ಕೀಲು ನೋವಿಗೆ ಕಾರಣವಾಗುತ್ತದೆ. ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಇದು ನಮ್ಮ ಪಾದಗಳು ಮತ್ತು ಕಣಕಾಲುಗಳಲ್ಲಿ ಊತವನ್ನು ಉಂಟುಮಾಡುತ್ತದೆ ಮತ್ತು ಉಬ್ಬಿರುವ ರಕ್ತನಾಳಗಳ ಅಪಾಯವನ್ನು ಹೆಚ್ಚಿಸುತ್ತದೆ.
ಇನ್ನು ಪರದೆಗಳಿಂದ ಬರುವ ನೀಲಿ ಬೆಳಕು, ಕುಳಿತುಕೊಳ್ಳುವುದರಿಂದ ಉಂಟಾಗುವ ಒತ್ತಡ ಮತ್ತು ಅಪೌಷ್ಟಿಕತೆ ಇವೆಲ್ಲವೂ ಕೂದಲು ಉದುರುವಿಕೆ ಮತ್ತು ಚರ್ಮದ ಸುಕ್ಕುಗಳಿಗೆ ಕಾರಣವಾಗಬಹುದು. ಅತಿಯಾದ ಪರದೆಯ ಸಮಯವು ಕಣ್ಣುಗಳು ಒಣಗುವುದು, ದೃಷ್ಟಿ ಮಂದವಾಗುವುದು ಮತ್ತು ತಲೆನೋವುಗಳಿಗೆ ಕಾರಣವಾಗಬಹುದು. ಅಲ್ಲದೆ, ಕಡಿಮೆಯಾದ ರಕ್ತದ ಹರಿವಿನಿಂದ ಚರ್ಮವು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳಬಹುದು. ಇದು ಎಸ್ಜಿಮಾ, ಕಣ್ಣುಗಳ ಸುತ್ತ ಕಪ್ಪು ವರ್ತುಲಗಳು ಮತ್ತು ಮಂದ ಚರ್ಮಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. (ಏಜೆನ್ಸೀಸ್)