ನ್ಯೂಯಾರ್ಕ್ ಮೇಯರ್ ಚುನಾವಣೆ ಗೆದ್ದು ಇತಿಹಾಸ ಸೃಷ್ಟಿಸಿದ ಝೋಹ್ರಾನ್ ಮಾಮ್ದಾನಿ! Zohran Mamdani

Zohran Mamdani
Published on

ನ್ಯೂಯಾರ್ಕ್​: ನವೆಂಬರ್ 04 ರಂದು ನಡೆದ ನ್ಯೂಯಾರ್ಕ್ ಸಿಟಿ ಮೇಯರ್ ಚುನಾವಣೆಯಲ್ಲಿ 34 ವರ್ಷದ ಆಫ್ರಿಕಾ ಮತ್ತು ಭಾರತೀಯ ಮೂಲದ ಮುಸ್ಲಿಂ ಧರ್ಮದ ಝೋಹ್ರಾನ್​ ಮಾಮ್ದಾನಿ ( Zohran Mamdani ) ಜಯಭೇರಿ ಬಾರಿಸಿ ಇತಿಹಾಸ ಸೃಷ್ಟಿಸಿದ್ದಾರೆ.

Benki Basanna

ಸಲಾಂ ಬಾಂಬೆ ಹಾಗೂ ಮನ್ಸೂನ್ ವೆಡ್ಡಿಂಗ್ ಸಿನೆಮಾಗಳ ಖ್ಯಾತಿಯ ಇವರ ತಾಯಿ ಮೀರಾ ನಾಯರ್ ಭಾರತ ಮೂಲದವರು ಎನ್ನುವುದು ನಮಗೆಲ್ಲ ಹೆಮ್ಮೆಯ ಸಂಗತಿ.

ಮಾಮ್ದಾನಿ ಅವರು ನ್ಯೂ ಯಾರ್ಕ್ ಸಿಟಿಯ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ವಯಸ್ಸಿನ ಮತ್ತು ಮೊಟ್ಟ ಮೊದಲ ಮುಸ್ಲಿಂ ಧರ್ಮದ ಮೇಯರ್ ಎಂಬ ದಾಖಲೆ ಬರೆದಿದ್ದಾರೆ. ನ್ಯೂಯಾರ್ಕ್ ಸಿಟಿಯ 85 ಲಕ್ಷ ಜನಸಂಖ್ಯೆಯಲ್ಲಿ ಸುಮಾರು 59% ಕ್ರಿಶ್ಚಿಯನ್ನರು, ಕೇವಲ 9% ಮುಸ್ಲಿಮರು ಮತ್ತು ಶೇ. 2 ರಷ್ಟು ಹಿಂದುಗಳಿದ್ದಾರೆ. ಕ್ರಿಶ್ಚಿಯನರೇ ಮೆಜಾರಿಟಿ ಇರುವ ನಗರದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ಚುನಾವಣೆಯನ್ನು ಗೆಲ್ಲುವುದು ಸುಲಭದ ವಿಷಯವಲ್ಲ.

ಹಾಗಾದರೆ ಮಾಮ್ದಾನಿಗೆಲುವಿಗೆ ಕಾರಣಗಳೇನು?

ಪ್ರಮುಖ ಕಾರಣ ಯುವ ಜನತೆ ಮಮದಾನಿ ಬೆಂಬಲಕ್ಕೆ ನಿಂತಿದ್ದು. ಗಗನಕ್ಕೆ ಏರುತ್ತಿರುವ ಕಾಸ್ಟ್ ಆಫ್ ಲಿವಿಂಗ್, ಹಣದುಬ್ಬರ, ಕೈಗೆ ನಿಟುಕದ ಬಾಡಿಗೆ ಹಾಗೂ ಪ್ರಯಾಣ ದರ ಹೀಗೆ ಜನಸಾಮಾನ್ಯರ ಸಮಸ್ಯೆಗಳಿಗೆ ಮಾಮ್ದಾನಿ ತುಂಬಾ ಉತ್ತಮವಾಗಿ ಸ್ಪಂದಿಸಿದರು.

ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಈ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮಾಮ್ದಾನಿ ಓರ್ವ ಮುಸ್ಲಿಂ ಮೂಲಭೂತವಾದಿ, ಕಮ್ಯುನಿಸ್ಟ್ ಹುಚ್ಚ, ಸಮಾಜವಾದಿ ಹಾಗೂ ಲೆಫ್ಟಿಸ್ಟ್ ಅಂತೆಲ್ಲ ಬಹಳಷ್ಟು ಅಪಪ್ರಚಾರ ಮಾಡಿದರು. ಒಂದು ವೇಳೆ ಈತ ಗೆದ್ದರೆ, ನ್ಯೂಯಾರ್ಕ್ ಸಿಟಿಗೆ ಫೆಡರಲ್ ಫಂಡಿಂಗ್ ಕಟ್ ಮಾಡುವುದಾಗಿ ಬೆದರಿಕೆ ಹಾಕಿದರು. ಇದರ ಜೊತೆಗೆ ಪಕ್ಷೇತರ ಅಭ್ಯರ್ಥಿ ಅಂಡ್ರು ಕೊಮೋ ಪರ ಭರ್ಜರಿ ಪ್ರಚಾರ ನಡೆಸಿದರು.

ಆದರೆ ಮಾಮ್ದಾನಿ ಪರವಾಗಿ ಅವರದೇ ಡೆಮಾಕ್ರೆಟಿಕ್ ಪಕ್ಷದ ಕೆಲವು ಹಿರಿಯ ನಾಯಕರು ಪ್ರಚಾರ ಮಾಡಲಿಲ್ಲ. ಇಷ್ಟೆಲ್ಲಾ ಅಡತಡೆಗಳ ಮಧ್ಯೆಯು ಮಾಮ್ದಾನಿ ಧೈರ್ಯ ಬಿಡದೇ, ಮನೆಮನೆಗೂ ಹೋಗಿ ಮತ ಕೇಳಿದರು. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕನೆಕ್ಟ್ ಆದರು.

ಮಾಮ್ದಾನಿ ಗೆಲುವಿಗೆ ಕಾರಣ ನ್ಯೂಯಾರ್ಕ್ ಜನತೆ ಟ್ರಂಪ್ ಆಡಳಿತದಿಂದ ನಿರಾಸೆಗೊಂಡಿದ್ದಾರೆ. ಫೆಡರಲ್ ಗವರ್ನಮೆಂಟ್ ಶಟ್ ಡೌನ್ ಆಗಿದ್ದು, ಲಕ್ಷಾಂತರ ಸರ್ಕಾರಿ ನೌಕರರು ಸಂಬಳ ಇಲ್ಲದೇ ಪರದಾಡುತ್ತಿದ್ದಾರೆ. ಟ್ರಂಪ್​ ಅವರ ಅನಿರೀಕ್ಷಿತ ಟಾರಿಫ್ ನೀತಿಯಿಂದಾಗಿ ದಿನಬಳಕೆ ವಸ್ತುಗಳ ಬೆಲೆಗಳು ತುಂಬಾ ಹೆಚ್ಚಾಗಿವೆ. ಸಾಮಾನ್ಯ ಜನರು ಪರದಾಡುತ್ತಿದ್ದಾರೆ. ಜೊತೆಗೆ ದೊಡ್ಡ ಸಿಟಿಗಳಲ್ಲಿ ಅಕ್ರಮ ವಲಸೆಗಾರರನ್ನು ಬಂಧಿಸುತ್ತಿರುವುದು ಎಲ್ಲೆಡೆ ಭಯ ಭೀತಿಯ ವಾತಾವರಣ ಮೂಡಿಸಿದೆ.

ಮಾಮ್ದಾನಿ ಜನವರಿ ಒಂದನೇ ತಾರೀಕು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಂಬರುವ ದಿನಗಳಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಮೇಯರ್ ಮಾಮ್ದಾನಿ ಮಧ್ಯೆ ಹೋರಾಟ, ಘರ್ಷಣೆ ಉಂಟಾಗುವ ಎಲ್ಲಾ ಲಕ್ಷಣಗಳಿವೆ. ಟ್ರಂಪ್ ಅವರು ನ್ಯೂಯಾರ್ಕ್ ಸಿಟಿಗೆ ನ್ಯಾಷನಲ್ ಗಾರ್ಡನ್ನು ಕಳಿಸಿ ತನ್ನ ಅಧೀನಕ್ಕೆ ತೆಗೆದುಕೊಂಡರೆ ಅಚ್ಚರಿ ಪಡಬೇಕಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net