

ಚೆನ್ನೈ: ಲೋಕೇಶ್ ಕನಗರಾಜ್... ( Lokesh Kanagaraj ) ತಮಿಳು ಚಿತ್ರರಂಗದಲ್ಲಿ ಈ ಹೆಸರಿಗೆ ಒಂದು ಬೆಲೆ ಇದೆ. ಅನೇಕ ಸ್ಟಾರ್ ನಟರೇ ನನಗೊಂದು ಸಿನಿಮಾ ಮಾಡಿಕೊಡಿ ಎಂದು ಸ್ಟಾರ್ ನಿರ್ದೇಶಕ ಲೋಕೇಶ್ ಹಿಂದಿ ಬಿದ್ದಿದ್ದಾರೆ. ಅಲ್ಲದೆ, ಒಂದು ಸಿನಿಮಾ ಮಾಡಿಕೊಡಲು ನಿರ್ಮಾಪಕರು ಕೂಡ ಕೋಟಿಗಟ್ಟಲೆ ಸಂಭಾವನೆ ಕೊಡಲು ಮುಂದಾಗಿದ್ದಾರೆ. ತನಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡ ಲೋಕೇಶ್, ಸತತವಾಗಿ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡುವ ಮೂಲಕ ಈ ಹಂತಕ್ಕೆ ಬೆಳೆದಿದ್ದಾರೆ.
ಖೈದಿ, ಮಾಸ್ಟರ್, ವಿಕ್ರಮ್ ಹಾಗೂ ಲಿಯೋ ಮುಂತಾದ ಸಿನಿಮಾಗಳ ಮೂಲಕ ಒಂದರ ನಂತರ ಒಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ಲೋಕೇಶ್ ನೀಡಿದ್ದಾರೆ. ಈ ಸಿನಿಮಾಗಳಿಂದ ಲೋಕೇಶ್ ಅವರ ರೇಂಜ್ ಕೂಡ ಹೆಚ್ಚಾಗಿದೆ. ಆದರೆ, ಈಗ ಒಂದೇ ಒಂದು ಫ್ಲಾಪ್ ಅವರನ್ನು ಕೆಳಕ್ಕೆ ಇಳಿಸಿದೆ. ಇಲ್ಲಿಯವರೆಗೆ ಸರಣಿ ಅವಕಾಶಗಳನ್ನು ಪಡೆದಿದ್ದ ಈ ಸ್ಟಾರ್ ನಿರ್ದೇಶಕನ ಕೈಯಲ್ಲಿ ಈಗ ಒಂದೇ ಒಂದು ಚಿತ್ರವಿಲ್ಲ.
ಲೋಕೇಶ್ ಅವರು ಇತ್ತೀಚೆಗೆ ಸೂಪರ್ ಸ್ಟಾರ್ ರಜಿನಿಕಾಂತ್ ಜತೆ ಕೂಲಿ ಹೆಸರಿನಲ್ಲಿ ಸಿನಿಮಾ ಮಾಡಿದರು. ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾದ ಈ ಸಿನಿಮಾ ಅಷ್ಟೊಂದು ಯಶಸ್ಸು ಕಾಣಲಿಲ್ಲ. ಇದರ ಪರಿಣಾಮ ಈ ನಿರ್ದೇಶಕರ ಮುಂದಿನ ಸಿನಿಮಾಗಳ ಮೇಲೆ ಪರಿಣಾಮ ಬೀರಿದೆ. ಯಾವುದೇ ನಾಯಕ ಅಥವಾ ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬರುತ್ತಿಲ್ಲ ಎಂಬ ವರದಿಗಳಿವೆ.
ಇನ್ನು ಬಜೆಟ್ ಕಾರಣಗಳಿಂದಾಗಿ ಖೈದಿ 2 ಸಿನಿಮಾ ಈಗಾಗಲೇ ರದ್ದಾಗಿದೆ ಎಂಬ ಸುದ್ದಿ ತಮಿಳುನಾಡಿನಲ್ಲಿ ವೈರಲ್ ಆಗುತ್ತಿದೆ. ಆದರೆ, ನಿರ್ಮಾಪಕರಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಇದೇ ವೇಳೆ ಲೋಕೇಶ್ ಅವರು ಇತ್ತೀಚೆಗೆ ಸ್ಟಾರ್ ಹೀರೋ ಒಬ್ಬರಿಗೆ ಕಥೆ ಹೇಳಿದ್ದಾರೆ ಎಂಬ ಮಾತಿದೆ. ಆದರೆ, ಆ ಕತೆಯನ್ನು ಹೀರೋ ತಿರಸ್ಕರಿಸಿದ್ದಾರೆ ಎಂದು ವರದಿಯಾಗುತ್ತಿದೆ.
ಅಂದಹಾಗೆ, ಆ ಸ್ಟಾರ್ ಹೀರೋ ಬೇರೆ ಯಾರೂ ಅಲ್ಲ ಅವರೇ ಸಕಲಕಲಾವಲ್ಲಭ ಕಮಲ್ ಹಾಸನ್. ಹೌದು, ಲೋಕೇಶ್ ಕನಗರಾಜ್ ಇತ್ತೀಚೆಗೆ ಕಮಲ್ ಅವರನ್ನು ಭೇಟಿಯಾಗಿ ಮಾಫಿಯಾ ಹಿನ್ನೆಲೆಯ ಕಥೆಯನ್ನು ಹೇಳಿದ್ದರಂತೆ ಆದರೆ, ಕಮಲ್ ಆ ಕಥೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಅವರಿಬ್ಬರ ಕಾಂಬೋದಲ್ಲಿ ಈ ಹಿಂದೆ ಬಿಡುಗಡೆಯಾದ ವಿಕ್ರಮ್ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿ, ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿ, ಕಮಲ್ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಆಯಿತು.
ಇದೀಗ ಅದೇ ಪರಿಚಯದೊಂದಿಗೆ ಕಮಲ್ ಅವರೊಂದಿಗೆ ಮತ್ತೊಂದು ಚಿತ್ರ ಮಾಡಲು ಲೋಕೇಶ್ ಪ್ಲ್ಯಾನ್ ಮಾಡುತ್ತಿದ್ದಾರೆ. ಆದರೆ, ಕಥೆಯಲ್ಲಿ ಯಾವುದೇ ಹೊಸತನವಿಲ್ಲದ ಕಾರಣ ಕಮಲ್ ಅವರು ಅದನ್ನು ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಇದೆ. ಇದೇ ಸುದ್ದಿ ಇದೀಗ ತಮಿಳುನಾಡಿನಲ್ಲಿ ವೈರಲ್ ಆಗಿದೆ. ಲೋಕೇಶ್ಗೆ ಮತ್ತೆ ಯಾವ ಸ್ಟಾರ್ ಅವಕಾಶ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)