

ಇಸ್ಲಮಾಬಾದ್: ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಆತಿಥೇಯ ಪಾಕಿಸ್ತಾನ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಮಂಗಳವಾರ (ನ. 04) ಫೈಸಲಾಬಾದ್ ಇಕ್ಬಾಲ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ನೇತೃತ್ವದ ಪಾಕ್ ಪಡೆ ಗೆಲುವು ಸಾಧಿಸಿ, ಸರಣಿ ಮುನ್ನಡೆ ಸಾಧಿಸಿತು. ಇದೇ ಪಂದ್ಯದಲ್ಲಿ ಒಂದು ಕುತೂಹಲಕಾರಿ ಘಟನೆ ಸಹ ನಡೆಯಿತು. ಅದೇನೆಂದರೆ, ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ( Abrar Ahmed ) ಅವರು ಹ್ಯಾಟ್ರಿಕ್ ವಿಕೆಟ್ ಕಿತ್ತು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆದರೆ, ಕೆಲವೇ ಕ್ಷಣಗಳಲ್ಲಿ ಆ ಸಂಭ್ರಮವನ್ನು ಥರ್ಡ್ ಅಂಪೈರ್ ಕಸಿದುಕೊಂಡರು.
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಇನ್ನಿಂಗ್ಸ್ನ 44ನೇ ಓವರ್ ಅನ್ನು ಅಬ್ರಾರ್ ಅಹ್ಮದ್ ಎಸೆದರು. ಈ ವೇಳೆ ಅವರು ಮೊದಲ ಎರಡು ಎಸೆತಗಳಲ್ಲಿ ಬ್ಯಾಟ್ಸ್‌ಮನ್‌ಗಳಾದ ನಾಯಕ ಮ್ಯಾಥೀವ್ ಬ್ರಿಟ್ಜ್ಕೆ ಮತ್ತು ಜೋರ್ನ್ ಫೋರ್ಟುಯಿನ್ ಅವರನ್ನು ಔಟ್ ಮಾಡಿದರು. ಮೂರನೇ ಎಸೆತ ಎಸೆದಾಗ, ಲುಂಗಿ ಎನ್ಜಿಡಿ ರಕ್ಷಣಾತ್ಮಕ ಆಟವಾಡಿದರು. ಆದಾಗ್ಯೂ, ಚೆಂಡು ಅವರ ಪ್ಯಾಡ್‌ಗಳಿಗೆ ತಗುಲಿತು. ತಕ್ಷಣ ಪಾಕಿಸ್ತಾನಿ ಫೀಲ್ಡರ್‌ಗಳು ಎಲ್‌ಬಿಗೆ ಮನವಿ ಮಾಡಿದರು ಮತ್ತು ಫೀಲ್ಡ್ ಅಂಪೈರ್ ಔಟ್ ಎಂದು ಕೈಯನ್ನು ಮೇಲೆತ್ತಿ ಒಂಟಿ ಬೆರಳು ತೋರಿದರು.
ಔಟ್ ಎಂದು ಹೇಳುತ್ತಿದ್ದಂತೆ ಹ್ಯಾಟ್ರಿಕ್ ಸಾಧನೆಯ ಖುಷಿಯಲ್ಲಿ ಅಬ್ರಾರ್ ಅಹ್ಮದ್ ತೇಲಾಡಿದರು. ಅಬ್ರಾರ್ ಅವರು ತಮ್ಮ ತಂಡದ ಸದಸ್ಯರೊಂದಿಗೆ ಸಂಭ್ರಮಾಚರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಎಂನ್ಜಿಡಿ ಅವರು ಥರ್ಡ್ ಅಂಪೈರ್ ಮೊರೆ ಹೋದರು. ಬಳಿಕ ಪರಿಶೀಲನೆ ನಡೆಸಿದಾಗ ಚೆಂಡು ಬ್ಯಾಟ್ ಅಂಚಿಗೆ ತಗುಲಿರುವುದು ತಿಳಿದುಬಂತು. ಇದರೊಂದಿಗೆ, ಥರ್ಡ್ ಅಂಪೈರ್ ನಾಟ್ ಔಟ್ ಎಂದು ಘೋಷಿಸಿದರು. ಇತ್ತ ಖುಷಿಯಲ್ಲಿ ಸಂಭ್ರಮಿಸುತ್ತಿದ್ದ ಅಬ್ರಾರ್, ಹ್ಯಾಟ್ರಿಕ್ ಮಿಸ್ ಆಗಿದ್ದರಿಂದ ತೀವ್ರ ನಿರಾಶೆಗೊಂಡರು. ಪ್ರಸ್ತುತ, ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅನೇಕ ಮಂದಿ ಅಬ್ರಾರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಮೊದಲೇ ಸಂಭ್ರಮಿಸುವುದು ಸರಿಯಲ್ಲ, ಮುಖಭಂಗ ಅನುಭವಿಸಬೇಕಾಗುತ್ತದೆ ಎಂದು ಬುದ್ಧಿಮಾತು ಹೇಳುತ್ತಿದ್ದಾರೆ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 49.1 ಓವರ್‌ಗಳಲ್ಲಿ 263 ರನ್‌ಗಳಿಗೆ ಆಲೌಟ್ ಆಯಿತು. ತಮ್ಮ ತಂಡದ ಪರ ಕ್ವಿಂಟನ್ ಡಿ ಕಾಕ್ (63 ರನ್, 71 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ಲುಯೆನ್-ಡ್ರೆ ಪ್ರಿಟೋರಿಯಸ್ (57 ರನ್, 60 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕ ಗಳಿಸಿದರು. ಉಳಿದ ಎಲ್ಲ ಬ್ಯಾಟ್ಸ್ಮನ್ಗಳು ವಿಫಲರಾದರು. ಪಾಕಿಸ್ತಾನಿ ಬೌಲರ್‌ಗಳಲ್ಲಿ ನಸೀಮ್ ಶಾ ಮತ್ತು ಅಬ್ರಾರ್ ಅಹ್ಮದ್ ತಲಾ ಮೂರು ವಿಕೆಟ್ ಪಡೆದರು. ಸೈಮ್ ಅಯೂಬ್ ಎರಡು ವಿಕೆಟ್ ಪಡೆದರೆ, ಶಾಹೀನ್ ಅಫ್ರಿದಿ ಮತ್ತು ನವಾಜ್ ತಲಾ ಒಂದು ವಿಕೆಟ್ ಪಡೆದರು.
ಪಾಕಿಸ್ತಾನ ತಂಡವು 49.4 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 264 ರನ್‌ಗಳ ಗುರಿಯನ್ನು ತಲುಪಿತು. ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಲ್ಲಿ ಸಲ್ಮಾನ್ ಅಘಾ (62 ರನ್, 71 ಎಸೆತ, 5 ಬೌಂಡರಿಗಳು, 1 ಸಿಕ್ಸರ್) ಮತ್ತು ಮೊಹಮ್ಮದ್ ರಿಜ್ವಾನ್ (55 ರನ್, 74 ಎಸೆತ, 6 ಬೌಂಡರಿ) ಅರ್ಧಶತಕಗಳನ್ನು ಗಳಿಸಿದರು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಲುಂಗಿ ಎನ್ಜಿಡಿ, ಡೊನೊವನ್ ಫೆರಿರಾಮ್ ಮತ್ತು ಕಾರ್ಬಿನ್ ಬಾಷ್ ತಲಾ ಎರಡು ವಿಕೆಟ್ ಪಡೆದರು. ಜಾರ್ಜ್ ಲಿಂಡೆ ಮತ್ತು ಫೋರ್ಟುಯಿನ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್)