

ಹೈದರಾಬಾದ್: ಬೆಟ್ಟಿಂಗ್ ಎಂಬ ಸಾಂಕ್ರಾಮಿಕ ರೋಗದ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಕರ್ನಾಟಕ ಮೂಲದ ತೆಲಂಗಾಣ ಕೇಡರ್ನ ಐಪಿಎಸ್ ಅಧಿಕಾರಿ ಹಾಗೂ ಹೈದರಾಬಾದ್ ಪೊಲೀಸ್ ಆಯುಕ್ತರಾದ ವಿಶ್ವನಾಥ್ ಸಿ ಸಜ್ಜನರ್ ( VC Sajjanar ) ಅವರು ಮತ್ತೊಮ್ಮೆ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದಲ್ಲಿ ಭಾಗವಹಿಸುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಜನರನ್ನು ದಾರಿ ತಪ್ಪಿಸುವಂತಹ ಇಂತಹ ಆ್ಯಪ್ಗಳನ್ನು ಪ್ರಚಾರ ಮಾಡುವ ಅವರು ಸೆಲೆಬ್ರಿಟಿಗಳೇ? ಎಂದು ಟ್ವೀಟ್ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದ ಪ್ರಕರಣದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರಿಗೆ ಸೇರಿದ 11.14 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸಿ ಸಜ್ಜನರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇವರು ಸೆಲೆಬ್ರಿಟಿಗಳೇ?... ಜನರಿಂದ ಮೆಚ್ಚುಗೆ ಪಡೆದು ಹಣ ಸಂಪಾದಿಸುವ ಇವರು ಆದರ್ಶ ಆಟಗಾರರಾಗಲು ಹೇಗೆ ಸಾಧ್ಯ? ಅನೇಕ ಯುವಕರು ಬೆಟ್ಟಿಂಗ್ ಸಾಂಕ್ರಾಮಿಕಕ್ಕೆ ವ್ಯಸನಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಾವಿರಾರು ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಡೀ ಸಮಾಜವನ್ನೇ ನಾಶಮಾಡುತ್ತಿರುವ ಬೆಟ್ಟಿಂಗ್ ಎಂಬ ಹುಚ್ಚನ್ನು ಪ್ರಚಾರ ಮಾಡಿದ ಇವರು ಇದಕ್ಕೆಲ್ಲ ಕಾರಣರಲ್ಲವೇ? ಸಮಾಜದ ಒಳಿತಿಗಾಗಿ, ಯುವಕರು ಉನ್ನತ ಹುದ್ದೆಗಳನ್ನು ತಲುಪಲು ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಿ, ಅದನ್ನು ಬಿಟ್ಟು ನಿಮ್ಮನ್ನು ಮೆಚ್ಚುವವರ ದಾರಿ ತಪ್ಪಿಸಿ, ಅವರ ಪ್ರಾಣವನ್ನು ತೆಗೆಯಬೇಡಿ ಎಂದು ವಿಸಿ ಸಜ್ಜನರ್ ಕಿಡಿಕಾರಿದ್ದಾರೆ.
ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ ಮತ್ತು ಸುರೇಶ್ ರೈನಾ ಅವರಿಗೆ ಜಾರಿ ನಿರ್ದೇಶನಾಲಯವು (ED ) ಹೊಸ ಶಾಕ್ ನೀಡಿದ್ದು, ಇಬ್ಬರಿಗೂ ಸಂಬಂಧಿಸಿದ 11.14 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇತ್ತೀಚೆಗೆ, ಮಾಜಿ ಕ್ರಿಕೆಟಿಗರು ಈ ಪ್ರಕರಣದಲ್ಲಿ ಇಡಿ ವಿಚಾರಣೆಗೆ ಹಾಜರಾಗಿದ್ದರು. ಅಧಿಕಾರಿಗಳಿಂದ ಬಂದ ಮಾಹಿತಿಯ ಪ್ರಕಾರ, ಧವನ್ 4.5 ಕೋಟಿ ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದರೆ, ರೈನಾ 6.64 ಕೋಟಿ ರೂ. ಮೌಲ್ಯದ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಹೊಂದಿದ್ದಾರೆ. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಸಂಸ್ಥೆ ಜಪ್ತಿ ಆದೇಶ ಹೊರಡಿಸಿದೆ. ಈ ಮಧ್ಯೆ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ರಾಬಿನ್ ಉತ್ತಪ್ಪ, ನಟರಾದ ಸೋನು ಸೂದ್, ಉರ್ವಶಿ ರೌಟೇಲಾ, ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದ ಮಿಮಿ ಚಕ್ರವರ್ತಿ ಮತ್ತು ಬಂಗಾಳಿ ನಟ ಅಂಕುಶ್ ಹಜ್ರಾ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳನ್ನು ಇಡಿ ಈಗಾಗಲೇ ವಿಚಾರಣೆಗೆ ಒಳಪಡಿಸಿದೆ. ಬೆಟ್ಟಿಂಗ್ ಸಂಸ್ಥೆ ಜತೆಗಿನ ಅವರ ಸಂಪರ್ಕಗಳು ಮತ್ತು ಬದಲಿ ಉದ್ಯಮಗಳ ಬಗ್ಗೆ ಸ್ಪಷ್ಟ ವಿವರಗಳನ್ನು ಸಂಗ್ರಹಿಸಲು ಇಡಿ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದೆ.
ಪ್ರಸ್ತುತ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಸಜ್ಜನರ್ ಅವರು ಈ ಹಿಂದೆ ಟಿಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅಲ್ಲದೆ, ಸೈಬರಾಬಾದ್ ಆಯುಕ್ತಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಜ್ಜನರ ಅವರು ಸೈಬರಾಬಾದ್ ಆಯುಕ್ತರಾಗಿದ್ದಾಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲದೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ಕೈಗೊಂಡರು. ಸೈಬರಾಬಾದ್ ಪೊಲೀಸ್ ಕಮೀಷನರೇಟ್‌ನಲ್ಲಿ ಹಲವಾರು ಸುಧಾರಣೆಗಳನ್ನು ಪ್ರಾರಂಭಿಸಿದರು ಮತ್ತು ಕೋವಿಡ್ -19 ಮೊದಲ ಅಲೆಯ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಹೈದರಾಬಾದ್ನ ಪಶುವೈದ್ಯೆಯನ್ನು ಹತ್ಯೆ ಮಾಡಿದವರನ್ನು ಎನ್ಕೌಂಟರ್ ಮಾಡಿದ ಪ್ರಕರಣದಲ್ಲಿ ವಿಶ್ವನಾಥ್ ಸಜ್ಜನರ್ ಭಾರಿ ಸುದ್ದಿಯಾದರು. ಅವರ ಸಾಹಸವನ್ನು ರಾಷ್ಟ್ರದೆಲ್ಲೆಡೆ ಜನರು ಶ್ಲಾಘಿಸಿದರು. ವಿಶ್ವನಾಥ್ ಅವರು ಮೂಲತಃ ಕರ್ನಾಟಕದ ಹುಬ್ಬಳ್ಳಿ ಮೂಲದವರು, (ಏಜೆನ್ಸೀಸ್).