

ನವದೆಹಲಿ: ಸಾಮಾನ್ಯವಾಗಿ ವಿದೇಶ ಪ್ರಯಾಣಕ್ಕೆ ಹೋದಾಗ ಎದುರಾಗುವುದು ರೋಮಿಂಗ್ ಸಮಸ್ಯೆ. ಕೆಲವೊಂದು ದೇಶಗಳಲ್ಲಿ ಅಲ್ಲಿಗೆ ಹೋದ ಬಳಿಕ ಪ್ರತ್ಯೇಕ ಇನ್ನೊಂದು ಸಿಮ್ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಅದಕ್ಕೆ ಇದೀಗ ಪ್ರಪ್ರಥಮವಾಗಿ ಪರಿಹಾರ ಕಂಡುಕೊಳ್ಳಲಾಗಿದೆ.
ಯಾವುದೇ ದೇಶಕ್ಕೆ ಹೋದರೂ ಸಂಪರ್ಕ-ಸಂವಹನಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ದೇಶದ ಮೊದಲ ಇ-ಸಿಮ್ ಬಂದಿದೆ. ಈ ಸಿಮ್ ಇದ್ದರೆ ಸಾಕು, ವಿದೇಶ ಪ್ರಯಾಣಿಕರಿಗೆ ರೋಮಿಂಗ್ ಸೇರಿದಂತೆ ಇತರ ಸಮಸ್ಯೆ ಆಗುವುದಿಲ್ಲ. ಎಂ2ಎಂ ಸರ್ವಿಸ್ ಪ್ರೊವೈಡರ್ ಕಂಪನಿ ಆಗಿರುವ ಸೆನ್ಸರೈಸ್ ಇಂಥದ್ದೊಂದು ಸಿಮ್ ಜಾರಿಗೆ ತಂದಿದೆ. ಇದನ್ನು ಭಾರತದ ಪ್ರಪ್ರಥಮ ಇ-ಸಿಮ್ ಎನ್ನಲಾಗುತ್ತಿದೆ.
ಜಗತ್ತಿನಾದ್ಯಂತ ಸುತ್ತಾಟ ನಡೆಸುವವರಿಗೆ, ಯಾವಾಗಲೂ ವಿದೇಶ ಪ್ರಯಾಣದಲ್ಲಿ ಇರುವವರಿಗೆ ಈ ಸಿಮ್ನಿಂದ ತುಂಬಾ ಅನುಕೂಲಗಳಾಗಲಿವೆ. ಇದೊಂದು ಸಿಮ್ ಇದ್ದರೆ ಸಾಕು, ಜಗತ್ತಿನ ಬಹುತೇಕ ದೇಶಗಳಲ್ಲಿ ಬೇರೆ ಸಿಮ್ ಪಡೆಯದೇ ಸಂಚರಿಸಬಹುದು ಎನ್ನಲಾಗಿದೆ.
ಇದೊಂಥರ ಡಿಜಿಟಲ್ ಸಿಮ್ ಕಾರ್ಡ್. ಇದರ ಮೂಲಕ ಡೇಟಾ ಮತ್ತು ಇಂಟರ್ನೆಟ್ ಪ್ಯಾಕೇಜ್ಗಳಿಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಬಹುದು. ಜಗತ್ತಿನ ಯಾವುದೇ ದೇಶದ ಇಲ್ಲವೇ ಯಾವುದೇ ಖಂಡದಲ್ಲೂ ಪಬ್ಲಿಕ್ ವೈ-ಫೈ ಇತ್ಯಾದಿಗೆ ಸಂಪರ್ಕ ಹೊಂದಬಹುದು.
ಇ-ಸಿಮ್ ಬಳಕೆಯಿಂದ ಪ್ರಯಾಸವಿಲ್ಲದೆ ಇಂಟರ್ನೆಟ್ ಸಂಪರ್ಕ ಪಡೆಯಬಹುದು. ಪ್ರತ್ಯೇಕ ಅಥವಾ ಹೊಸ ಸಿಮ್ ಪಡೆಯದೇ ಬೇಕಾದ ಪ್ಲ್ಯಾನ್ನ ಡೇಟಾ ಪಡೆಯಬಹುದು. ಸೆನ್ಸರೈಸ್ ಆ್ಯಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಇ-ಸಿಮ್ ಪಡೆಯಬಹುದು.