

ಹೈದರಾಬಾದ್: ಐಎಎಸ್ ಅಧಿಕಾರಿ ವಿರುದ್ಧ ಅವರ ಪತ್ನಿ ದೂರು ದಾಖಲಿಸಿರುವುದು ತೆಲಂಗಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ವರದಕ್ಷಿಣ ಕಿರುಕುಳ ಮಾತ್ರವಲ್ಲದೆ, ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಐಎಎಸ್ ಅಧಿಕಾರಿ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದು, ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಆದೇಶಿಸಿದೆ.
ಪ್ರಕರಣದ ವಿವರಣೆಗೆ ಬರುವುದಾದರೆ, ತೆಲಂಗಾಣ ಕೇಡರ್ನ 2014ರ ಬ್ಯಾಚಿನ ಐಎಎಸ್ ಅಧಿಕಾರಿ ಸಂದೀಪ್ ಕುಮಾರ್ ಝಾ ವಿರುದ್ಧ ಈ ಆರೋಪ ಕೇಳಿಬಂದಿದೆ. ಇವರು ಬಿಹಾರದ ದರ್ಭಾಂಗ ಜಿಲ್ಲೆಯ ನಿವಾಸಿ. 2021ರಲ್ಲಿ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಮಹಿಳೆಯನ್ನು ಮದುವೆಯಾಗಿದ್ದಾರೆ.
ಆ ಸಮಯದಲ್ಲೇ ಹುಡುಗಿಯ ಪಾಲಕರು ವರದಕ್ಷಿಣೆಗಾಗಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ. ಇತ್ತೀಚೆಗಷ್ಟೇ ಪತಿಯ ವಿರುದ್ಧ ಸಂತ್ರಸ್ತ ಪತ್ನಿ ಹಲವು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಕೊರ್ಬಾ ಎಸ್ಪಿಗೆ ದೂರು ನೀಡಿದ್ದು, ಮದುವೆಯ ನಂತರ ಹೆಚ್ಚುವರಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾರೆ, ಕೌಟುಂಬಿಕ ಹಿಂಸಾಚಾರ ಮತ್ತು ಅಸ್ವಾಭಾವಿಕ ಲೈಂಗಿಕತೆಯನ್ನು ಹೊಂದಲು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ವರದಕ್ಷಿಣೆಯಾಗಿ ಬ್ರ್ಯಾಂಡೆಡ್ ಬಟ್ಟೆಗಳು, ಫ್ರಿಡ್ಜ್, ವಾಷಿಂಗ್ ಮೆಷಿನ್, ಟೆಲಿವಿಷನ್ ಮತ್ತು ಪೀಠೋಪಕರಣಗಳನ್ನು ತೆಗೆದುಕೊಂಡಿದ್ದಾರೆ ಎಂದು ಸಂತ್ರಸ್ತ ಪತ್ನಿ ಆರೋಪಿಸಿದ್ದಾರೆ. ವರದಕ್ಷಿಣೆ ಹೊರತುಪಡಿಸಿ, ಕುಟುಂಬವು ಮದುವೆಗೆ 1 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿದೆ.
ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ಛತ್ತೀಸ್‌ಗಢದ ಕೊರ್ಬಾ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂದೀಪ್ ಕುಮಾರ್ ಝಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಹೊಸದಾಗಿ ಆದೇಶ ಹೊರಡಿಸಿದೆ. ಸಂದೀಪ್ ಕುಮಾರ್ ಪ್ರಸ್ತುತ ತೆಲಂಗಾಣ ಐಟಿ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)