More

    ವಯಸ್ಸಾಗಿದ್ದರೂ ಯಂಗ್​ಲುಕ್!; ಚಿಕ್ಕವರಾಗೇ ಕಾಣಲು ಇಲ್ಲಿದೆ ಟ್ರಿಕ್

    ಯಂಗ್ ಆಂಡ್ ಎನರ್ಜೆಟಿಕ್ ಆಗಿ ಇರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಶಕ್ತಿ ಕಡಿಮೆ ಆಗಿ ದೇಹದ ಲುಕ್ ಬದಲಾಗುತ್ತದೆ. 35-40ರ ವಯಸ್ಸಲ್ಲಿ 25 ವರ್ಷದವರಂತೆ ಕಾಣಬೇಕು ಎಂಬ ಆಸೆ ಇರುತ್ತದೆ. ಇದನ್ನು ಸಾಧಿಸುವುದು ಹೇಗೆ? ದೇಹಕ್ಕೆ ಹೇಗೆ ವಯಸ್ಸಾಗುತ್ತದೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಸುವ ಪ್ರಯತ್ನವೇ ಈ ಲೇಖನ.

    | ಎನ್. ಗುರುನಾಗನಂದನ, ಬೆಂಗಳೂರು

    ರಸ್ತೆಯಲ್ಲಿ ಹೋಗುವಾಗ ಚಿಕ್ಕ ಹುಡುಗರು ‘ಅಂಕಲ್’ ಎಂದು ಕರೆದರೆ ಮುಜುಗರವಾಗುತ್ತದೆ. ಆದರೆ ಯಾಕೆ ಹಾಗೆಂದರು ಎಂದು ಯೋಚಿಸಿದಾಗ ಹಲವಾರು ಕಾರಣಗಳು ತಿಳಿಯುತ್ತವೆ. ಒಂದು ಮಕ್ಕಳ ತಲೆಹರಟೆ ಇರಬಹುದು. ಎರಡನೆಯದು, ಹೇಗೆ ಕಾಣಿಸುತ್ತಿದ್ದೇವೆ ಎಂಬುದು ಪ್ರಮುಖ ಕಾರಣ. ಹೊಟ್ಟೆಯ ಗಾತ್ರ, ತಲೆಗೂದಲು, ಚರ್ಮದ ಕಾಂತಿ ಮುಂತಾದವುಗಳು ವಯಸ್ಸನ್ನು ಅಂದಾಜು ಮಾಡಲು ಸಹಾಯ ಮಾಡುತ್ತವೆ. ಕಣ್ಣಿಗೆ ಕಾಣುವ ಈ ಅಂಶಗಳು ಪ್ರಾಯವನ್ನು ನಿರ್ಧರಿಸುತ್ತವೆ. ಈ ಲಕ್ಷಣಗಳಿಗೆ ಮೂಲ ಕಾರಣ ದೇಹದ ವಯಸ್ಸು. ‘ನಿಮ್ಮ ವಯಸ್ಸೆಷ್ಟು?’ ಎಂದು ಯಾರಾದರೂ ಕೇಳಿದರೆ ತಾಯಿಯ ದೇಹದಿಂದ ಹೊರಗೆ ಬಂದ ದಿನದಿಂದ ಲೆಕ್ಕ ಹಾಕಿ ಕಾಲಾನುಕ್ರಮದ (ಕ್ರೋನೋಲಾಜಿಕಲ್) ವಯಸ್ಸನ್ನು ಹೇಳುತ್ತೇವೆ. ಆದರೆ ದೇಹಕ್ಕೂ ಅಷ್ಟೇ ವಯಸ್ಸಾಗಿದೆಯೇ ಎಂಬುದು ಪ್ರಶ್ನೆ. ಒಬ್ಬ ಆರೋಗ್ಯವಂತ ವ್ಯಕ್ತಿಗೆ ಕಾಲಾನುಕ್ರಮದ ವಯಸ್ಸು ಮತ್ತು ದೇಹದ ವಯಸ್ಸು ಎರಡು ಕೂಡ ಒಂದೇ ಆಗಿರುತ್ತದೆ. ಆದರೆ ಜೀವನಶೈಲಿ, ಸೇವಿಸುವ ಆಹಾರ, ಉಸಿರಾಡುವ ಗಾಳಿ ಮುಂತಾದವು ಶುದ್ಧವಾಗಿಲ್ಲದ ಕಾರಣ ಅವೆರಡೂ ಹೊಂದಾಣಿಕೆ ಆಗುವುದಿಲ್ಲ. ಇದರೊಂದಿಗೆ ಕೆಟ್ಟ ಅಭ್ಯಾಸಗಳು ಹಾನಿ ಉಂಟು ಮಾಡಿ ದೇಹದ ಪ್ರಾಯವನ್ನು ಕಾಲಾನುಕ್ರಮದ ವಯಸ್ಸಿಗಿಂತ ಹೆಚ್ಚಾಗಿಸುತ್ತವೆ. ಅದೇ ಕಾರಣಕ್ಕೆ 30 ವರ್ಷದ ವ್ಯಕ್ತಿ 40 ವರ್ಷದವರಂತೆ ಕಾಣಿಸುತ್ತಾರೆ. ಆದರೆ 35ರ ವಯಸ್ಸಲ್ಲೂ 25 ವರ್ಷದವರಂತೆ ಕಾಣಿಸುವುದು ಹೇಗೆ? ಕಾಲಾನುಕ್ರಮ ಮತ್ತು ದೇಹದ ವಯಸ್ಸನ್ನು ಸರಿಹೊಂದಿಸುವ ಕ್ರಮ ಏನು? ಹೆಚ್ಚಿನಕಾಲ ಆರೋಗ್ಯವಾಗಿ ಬದುಕುವುದು ಹೇಗೆ? ಎಂಬ ಸಂಗತಿಗಳ ಕುರಿತು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ.

    ಆಯುಷ್ಯ ಏಕೆ ಕಡಿಮೆ ಆಗುತ್ತದೆ?

    ಕಾಲಾನುಕ್ರಮದ ವಯಸ್ಸು ಮತ್ತು ದೇಹದ ಪ್ರಾಯಕ್ಕೆ ಬಹಳ ವ್ಯತ್ಯಾಸವಿದ್ದರೆ ಆಯುಷ್ಯ ಕಡಿಮೆ ಆಗುತ್ತದೆ. ಅಂದರೆ ದೇಹ ಹೆಚ್ಚಿನ ಕಾಲ ಜೀವಿಸುವ ಶಕ್ತಿ ಕಳೆದುಕೊಳ್ಳುತ್ತದೆ. ಮನುಷ್ಯನ ದೇಹ ಜೀವಕೋಶಗಳಿಂದ ತುಂಬಿದೆ. ಪ್ರತಿ ಜೀವಕೋಶದಲ್ಲಿ ಡಿಎನ್​ಎ ಇದ್ದು ಅದರೊಳಗೆ ಜೀನ್ಸ್ ಇವೆ. ಈ ಡಿಎನ್​ಎಗಳಿಗೆ ಹಾನಿಯಾದರೆ ಆಯುಷ್ಯ ಕಡಿಮೆ ಆಗುತ್ತದೆ. ಜೀನ್ಸ್ ದೀರ್ಘಾಯುಷ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ ಎಂದು ಯುಸಿಎಲ್ (ಯುನಿವರ್ಸಿಟಿ ಕಾಲೇಜ್ ಲಂಡನ್) ಅಧ್ಯಯನ ತಿಳಿಸುತ್ತದೆ. ಡಿಎನ್​ಎಗೆ ಬಾಹ್ಯವಾಗಿ ಮತ್ತು ಆಂತರಿಕವಾಗಿ ಹಾನಿ ಉಂಟಾಗುತ್ತದೆ. ಉದಾಹರಣೆಗೆ ದಿನಕ್ಕೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಡಿಎನ್​ಎಗಳು ತಂತಾನೇ ಹಾಳಾಗುತ್ತವೆ. ಇದರಿಂದ ಗಾಬರಿಯಾಗುವ ಅವಶ್ಯಕತೆ ಇಲ್ಲ. ಏಕೆಂದರೆ, ದೇಹದಲ್ಲಿ ಸುಮಾರು 30 ಟ್ರಿಲಿಯನ್ ಜೀವಕೋಶಗಳಿವೆ. ಒಂದು ಜೀವಕೋಶದಲ್ಲಿ 3 ಬಿಲಿಯನ್ ಬೇಸ್ ಪೇರ್ ಡಿಎನ್​ಎಗಳಿವೆ. ಆದ್ದರಿಂದ ಕೇವಲ ಶೇ. 0.003ನಷ್ಟು ಡಿಎನ್​ಎಗಳಿಗೆ ಮಾತ್ರ ಹಾನಿಯಾಗುತ್ತದೆ. ಅದಕ್ಕೆ ಬೇಕಾದ ಚಿಕಿತ್ಸೆ ಕೂಡ ಸ್ವಯಂಚಾಲಿತವಾಗಿ ಆಗುತ್ತದೆ. ಆದರೆ ಹೊರಗಿನಿಂದ ಹಾನಿ ಆಗದಂತೆ ನೋಡಿಕೊಳ್ಳಬೇಕು. ದೀರ್ಘಾಯುಷ್ಯ ಬಯಸುವವರು ದೇಹದ ವಯಸ್ಸು ಹೆಚ್ಚು ಮಾಡುವ ಹಾನಿಗಳನ್ನು ತಡೆಯಬೇಕು, ಮೊದಲೇ ಆಗಿರುವ ಹಾನಿಗಳಿಗೆ ಚಿಕಿತ್ಸೆ ನೀಡಬೇಕು, ಮುಂದೆ ಆಗುವ ಹಾನಿಗಳನ್ನು ರಿವರ್ಸ್ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.

    ದೇಹದ ವಯಸ್ಸು ತಿಳಿಯುವುದು ಹೇಗೆ?

    ಬಹಳಷ್ಟು ಸಿನಿಮಾ ನಟ-ನಟಿಯರು ತಮ್ಮ ವಯಸ್ಸಿಗಿಂತ ಹೆಚ್ಚು ಯಂಗ್ ಆಗಿ ಕಾಣುತ್ತಾರೆ. 50ರ ವಯಸ್ಸಲ್ಲೂ ಕಾಲೇಜು ಹುಡುಗ/ಹುಡುಗಿಯ ಪಾತ್ರ ಮಾಡಿರುವ ನಟ-ನಟಿಯರನ್ನು ನೋಡಿದ್ದೇವೆ. ಆನ್​ಸ್ಕ್ರೀನ್ ಅಲ್ಲದೆ ಆಫ್​ಸ್ಕ್ರೀನ್​ನಲ್ಲಿ ಕೂಡ ಯಂಗ್ ಆಗಿ ಕಾಣುತ್ತಾರೆ. ಅವರ ದೇಹದ ವಯಸ್ಸು ಕಾಲಾನುಕ್ರಮದ ವಯಸ್ಸಿಗಿಂತ ಕಡಿಮೆ ಇರುವುದೇ ಇದಕ್ಕೆ ಮುಖ್ಯ ಕಾರಣ. ಜೀವಕೋಶಗಳ ಸಾಮರ್ಥ್ಯದ ಮೇಲೆ ದೇಹದ ವಯಸ್ಸು ನಿರ್ಧಾರವಾಗುತ್ತದೆ. ಇದು ಚೆನ್ನಾಗಿದ್ದರೆ ಹೃದಯ, ಮೂತ್ರಪಿಂಡ, ಪಿತ್ತಜನಕಾಂಗ ಮುಂತಾದ ಅಂಗಗಳ ಗುಣಮಟ್ಟ ಚೆನ್ನಾಗಿದ್ದು ಯಂಗ್ ಆಗಿ ಕಾಣುವಂತೆ ಮಾಡುತ್ತವೆ. ಆದರೆ ಜೀವಕೋಶಗಳ ಗುಣಮಟ್ಟ ತಿಳಿಯುವುದು ಹೇಗೆ? ಜೈವಿಕ ತಂತ್ರಜ್ಞಾನದ ಮೂಲಕ ದೇಹದ ವಯಸ್ಸನ್ನು ಪತ್ತೆ ಹಚ್ಚುವುದು ಬಹಳ ಸುಲಭ. ದೇಹದ ವಯಸ್ಸು ತಿಳಿಯಲು ಹಲವಾರು ಪರೀಕ್ಷೆಗಳಿವೆ. ಸಾಮಾನ್ಯವಾದ ರಕ್ತ ಪರೀಕ್ಷೆಯಂತೆಯೇ ದೇಹದ ವಯಸ್ಸನ್ನು ಕಂಡುಹಿಡಿಯಬಹುದು. ಬಹಳ ಜನಪ್ರಿಯ ಪರೀಕ್ಷೆ ಎಂದರೆ ಎಪಿಜೆನೆಟಿಕ್ಸ್ ಆಧಾರಿತ ಪರೀಕ್ಷೆ. ಉದಾಹರಣೆಗೆ, ಧೂಮಪಾನ ಮಾಡಿ ಜಂಕ್​ಫುಡ್ ತಿಂದು ಮಲಗುವುದರಿಂದ ಕೆಟ್ಟ ರಾಸಾಯನಿಕಗಳು ಡಿಎನ್​ಎಯಲ್ಲಿ ಸೇರಿಕೊಳ್ಳುತ್ತವೆ. ಇವು ದೇಹದಲ್ಲಿ ನಕಾರಾತ್ಮಕ ಅಂಶಗಳಾಗಿ ಸಂಗ್ರಹಗೊಳ್ಳುತ್ತವೆ. ಮರುದಿನ ಬೆಳಗ್ಗೆ ಎದ್ದು ಜಾಗಿಂಗ್ ಮಾಡಿ, ಪೌಷ್ಟಿಕ ಆಹಾರ ತಿಂದಾಗ ಇಂಥ ಕೆಟ್ಟ ರಾಸಾಯನಿಕಗಳು ನಿವಾರಣೆ ಆಗಿ ದೇಹದಲ್ಲಿ ಸಕಾರಾತ್ಮಕ ಅಂಶಗಳಾಗಿ ಶೇಖರವಾಗುತ್ತವೆ. ಇದರ ಆಧಾರದ ಮೇಲೆ ಪರೀಕ್ಷೆ ಮಾಡುವುದೇ ಎಪಿಜೆನೆಟಿಕ್ ಆಧಾರಿತ ಟೆಸ್ಟ್. ರಕ್ತದ ಸ್ಯಾಂಪಲ್ ತೆಗೆದುಕೊಂಡು ಈ ಪರೀಕ್ಷೆ ಮಾಡಲಾಗುತ್ತದೆ. ಉಗುಳು ಅಥವಾ ಮೂತ್ರದ ಮಾದರಿಯ ಮೂಲಕವೂ ಇದನ್ನು ಪರೀಕ್ಷಿಸಬಹುದು. ಜೀವಕೋಶಗಳು ಎಷ್ಟರಮಟ್ಟಿಗೆ ಹಾನಿಗೊಂಡಿವೆ ಎಂಬುದರ ಮೇಲೆ ದೇಹದ ವಯಸ್ಸು ನಿರ್ಧಾರವಾಗುತ್ತದೆ. ಜೀವಕೋಶಗಳು ಹೆಚ್ಚಾಗಿ ಹಾನಿಯಾಗಲು ಆರೋಗ್ಯಕರ ಬಾಡಿ ಮಾಸ್ ಇಂಡೆಕ್ಸ್ (ಬಿಎಮ್) ಇಲ್ಲದಿರುವುದು ಕೂಡ ಒಂದು ಪ್ರಮುಖ ಕಾರಣ. ಬಿಎಮ್ ಅಂದರೆ ಎತ್ತರ ಮತ್ತು ತೂಕಕ್ಕೆ ಅನುಗುಣವಾಗಿ ದೇಹದಲ್ಲಿ ಕೊಬ್ಬಿನ ಅಂಶ ಇರಬೇಕು. ಇದರ ಮಟ್ಟ ಹೆಚ್ಚು ಅಥವಾ ಕಡಿಮೆ ಇದ್ದರೆ ಡಿಎನ್​ಎ ಗುಣಮಟ್ಟ ಕಡಿಮೆ ಆಗುತ್ತದೆ. ಇದರಿಂದ ದೇಹದ ಪ್ರಾಯ ಹೆಚ್ಚಾಗಿ ವಯಸ್ಸಾದಂತೆ ಕಾಣಲು ಶುರುವಾಗುತ್ತದೆ. ಟೆಲೊಮಿರ್ ಎಂಬ ಡಿಎನ್​ಎ ಪ್ರೊಟೀನ್ ಪ್ರತಿ ಕ್ರೊಮೋಸೋಮ್ ತುದಿಯಲ್ಲಿ ಇರುತ್ತದೆ. ವಯಸ್ಸಾದಂತೆ ಇದರ ಅಳತೆ ಕಡಿಮೆ ಆಗುತ್ತದೆ. ಇದು ವೇಗವಾಗಿ ಕಡಿಮೆಯಾದರೆ ದೇಹದ ವಯಸ್ಸು ಕಾಲಾನುಕ್ರಮದ ಪ್ರಾಯಕ್ಕಿಂತ ಹೆಚ್ಚಾಗುತ್ತದೆ.

    ರಿವರ್ಸ್ ಏಜಿಂಗ್ ಸಾಧ್ಯ!

    ವಯಸ್ಸನ್ನು ಹಿಂದಿರುಗಿಸುವುದು ಅಸಾಧ್ಯ ಎಂದು ಕೇಳಿರುತ್ತೇವೆ. ಆದರೆ ರಿವರ್ಸ್ ಏಜಿಂಗ್ ಸಾಧ್ಯವಿದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ. ಕೇಂಬ್ರಿಡ್ಜ್​ನ ಬಾಬ್ರಹಾಂ ಸಂಸ್ಥೆ ನಡೆಸಿದ ಪ್ರಯೋಗದಲ್ಲಿ ಚರ್ಮದ ಗಾಯದಲ್ಲಿನ ಹಳೆಯ ಜೀವಕೋಶಗಳನ್ನು ರಾಸಾಯನಿಕಗಳ ಮೂಲಕ ರೀ-ಪೊ›ಗ್ರಾಮ್ ಮಾಡಿ ಯಂಗ್ ಜೀವಕೋಶಗಳಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಪ್ರಯೋಗ ಜೈವಿಕ ವಯಸ್ಸನ್ನು ಕಡಿಮೆ ಮಾಡುವ ಸಂಶೋಧನೆಗೆ ಶಕ್ತಿ ನೀಡುತ್ತದೆ. ವೃದ್ಧಾಪ್ಯದ ಕಾಯಿಲೆಗಳನ್ನು ದೂರವಿಡುವ ತಂತ್ರದ ಅಭಿವೃದ್ಧಿಗೆ ಕಾರಣವಾಗಬಹುದು ಎಂದು ಪರಿಣತರು ಹೇಳುತ್ತಾರೆ.

    ಈ ಅಂಶವೇ ಯಂಗ್ ಆಗಿ ಕಾಣದಂತೆ ಮಾಡುವುದು!

    ವಯಸ್ಸಾಗಿದ್ದರೂ ಯಂಗ್​ಲುಕ್!; ಚಿಕ್ಕವರಾಗೇ ಕಾಣಲು ಇಲ್ಲಿದೆ ಟ್ರಿಕ್ವಯಸ್ಸಾದ ಮೇಲೆ ಯಂಗ್ ಆಗಿ ಕಾಣಲು ದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯ ಕೂಡ ಮುಖ್ಯ. ಹತ್ತು ವರ್ಷದವರಾಗಿದ್ದಾಗ ಇರುವ ಉತ್ಸಾಹ-ಶಕ್ತಿ 20ನೇ ವಯಸ್ಸಿನಲ್ಲಿ ಕಡಿಮೆ ಆಗುತ್ತದೆ. 35ರ ವಯಸ್ಸಲ್ಲಿ 25 ವರ್ಷದವರಂತೆ ಕಾಣಿಸಬೇಕೆಂದರೆ 25ರ ವಯಸ್ಸಿನವರಂತೆ ಫೀಲ್ ಆಗಬೇಕು. ಆ ವಯಸ್ಸಲ್ಲಿರುವ ಉತ್ಸಾಹ ಇರಬೇಕು. ಕಾಲಾನುಕ್ರಮದ ಪ್ರಾಯಕ್ಕಿಂತ ವಯಸ್ಸಾದ ಭಾವನೆ ಯಂಗ್ ಆಗಿ ಕಾಣದಂತೆ ಮಾಡುತ್ತದೆ. ಚಿಕ್ಕ ವಯಸ್ಸಿನಲ್ಲಿ ಮೊದಲ ಬಾರಿಗೆ ಒಂದು ವಿಷಯವನ್ನು ತಿಳಿದುಕೊಳ್ಳುವ ಕುತೂಹಲ-ಹುಮ್ಮಸ್ಸು ವಯಸ್ಸಾದ ನಂತರವೂ ಇರುವಂತೆ ಕಾಪಾಡಿಕೊಳ್ಳಬೇಕು. ಇದು ದಿನನಿತ್ಯದ ಒತ್ತಡದಿಂದ ಕಡಿಮೆ ಆಗಬಹುದು. ಅದನ್ನು ರೀ-ಬೂಸ್ಟ್ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಂಡಾಗ ಮಾತ್ರ ಯಂಗ್ ಆಗಿರಬಹುದು. ಫುಲ್ ಆಫ್ ಎನರ್ಜಿಯಿಂದ ನಗುತ್ತಿದ್ದಾಗ ಮಾತ್ರ ಯಂಗ್ ಆಗಿದ್ದೇವೆ ಎಂದು ಅನಿಸುತ್ತದೆ. ಅದು ದೇಹದಲ್ಲಿ ಕಾಣಲು ಶುರುವಾಗುತ್ತದೆ. ಇದನ್ನು ಸಾಧಿಸಲು ಆರೋಗ್ಯಕರ ಜೀವನಶೈಲಿಯ ಪಾಲನೆ, ದುಶ್ಚಟಗಳಿಂದ ದೂರ ಇರುವುದು, ಒಳ್ಳೆಯ ಅಭ್ಯಾಸಗಳು ಮುಖ್ಯ. ಇದರೊಂದಿಗೆ ದೇಹದಲ್ಲಿರುವ ಕೆಟ್ಟ ರಾಸಾಯನಿಕಗಳನ್ನು ಹೊರ ಹಾಕಬೇಕು. ಡಿಟಾಕ್ಸ್ ಮಾಡಿದಾಗ ದೇಹ ಮತ್ತು ಮನಸ್ಸು ಯಂಗ್ ಆಗುತ್ತದೆ ಎಂದು ಪ್ರಾಗ್ನ್ಯಾ ಬ್ರೇನ್ ಆಂಡ್ ಮೈಂಡ್ ಸೆಂಟರ್​ನ ನ್ಯೂರೋ ಸೈಕಿಯಾಟ್ರಿಸ್ಟ್ ಕಾರ್ತಿಕ್ ಕಶ್ಯಪ್ ಹೇಳುತ್ತಾರೆ.

    ದೀರ್ಘಾಯುಷ್ಯಕ್ಕೆ ಇದೇ ಸೂತ್ರ

    ವಯಸ್ಸಾಗಿದ್ದರೂ ಯಂಗ್​ಲುಕ್!; ಚಿಕ್ಕವರಾಗೇ ಕಾಣಲು ಇಲ್ಲಿದೆ ಟ್ರಿಕ್ಜಗತ್ತಿನಲ್ಲಿ ಒಂದು ಔಷಧ ಅಥವಾ ಟೆಕ್ನಿಕ್​ನಿಂದ ಯಂಗ್ ಆಗಿ ಕಾಣಲು ಸಾಧ್ಯವಿಲ್ಲ. ದೇಹಕ್ಕೆ ಬೇಕಾದ ಆರೈಕೆ ನೀಡಬೇಕು. ‘ನನಗೆ 40 ವರ್ಷ, ಸೊಂಟ ನೋವು.. ಈ ವಯಸ್ಸಿಗೆ ಸಾಮಾನ್ಯ’ ಎಂಬ ಮನಸ್ಥಿತಿ ಬದಲಾಗಬೇಕು. 40ರ ವಯಸ್ಸಲ್ಲೂ 30 ವರ್ಷದವರಂತೆ ಇರಬಹುದು ಎಂಬ ಆತ್ಮವಿಶ್ವಾಸ ಬರಬೇಕು. ದೇಹಕ್ಕೆ ತೊಂದರೆ ಆದಾಗ ಚಿಕಿತ್ಸೆ ನೀಡುತ್ತೇನೆ ಎನ್ನದೆ ತೊಂದರೆಯೇ ಬಾರದಂತೆ ನೋಡಿಕೊಳ್ಳುವುದು ಉತ್ತಮ. ಬೆಳಗ್ಗೆ ಎದ್ದಾಗ ಇರುವ ಉತ್ಸಾಹ-ಶಕ್ತಿ ರಾತ್ರಿ ಮಲಗುವಾಗ ಕೂಡ ಹಾಗೇ ಇರಬೇಕು. ಆಗ ಮಾತ್ರ ದೇಹದ ವಯಸ್ಸನ್ನು ಕಡಿಮೆ ಮಾಡಬಹುದು. ನಗರ ಪ್ರದೇಶದ ಜನರಿಗೆ ದೇಹದ ವಯಸ್ಸಿನ ಬಗ್ಗೆ ತಿಳಿಯಲು ಪ್ರಾರಂಭವಾಗಿದೆ. ಇದು ಗ್ರಾಮೀಣ ಪ್ರದೇಶಕ್ಕೆ ತಲುಪಬೇಕು. ಆಗ ಪ್ರತಿಯೊಬ್ಬರೂ ದೀರ್ಘವಾದ ಜೀವನ ನಡೆಸಬಹುದು. ಅಮೆರಿಕದಲ್ಲಿ ವಿಮೆ ಪಾಲಿಸಿಯಲ್ಲೇ ಬಯೊಲಾಜಿಕಲ್ ಟೆಸ್ಟಿಂಗ್ ಸೇರಿಸಿದ್ದಾರೆ. ಈ ರೀತಿಯ ಬೆಳವಣಿಗೆಗಳು ಭಾರತದಲ್ಲಿ ಕೂಡ ಆಗಬೇಕು. ಆಗ ಮಾತ್ರ ಆರೋಗ್ಯವಾಗಿ ದೀರ್ಘಾಯುಷ್ಯದ ಜೀವನ ನಡೆಸಬಹುದು ಎನ್ನುತ್ತಾರೆ ಭಾರತದ ಮೊದಲ ದೀರ್ಘಾಯುಷ್ಯ ಸಂಶೋಧನಾ ಕಂಪನಿ ಡಿಕೋಡ್ ಏಜ್ ಸಂಸ್ಥಾಪಕ ದರ್ಶಿತ್ ಪಟೇಲ್.

    ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?

    ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts