ಸೀಮಾ ಹೈದರ್​ ರೀತಿ ನೇಪಾಳದ ಮೂಲಕ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ ಉಜ್ಬೇಕಿಸ್ತಾನದ ಮಹಿಳೆ ಅರೆಸ್ಟ್​

Uzbekistan woman
Published on

ನವದೆಹಲಿ: ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್​ ಮಾದರಿಯಲ್ಲೇ ಉಜ್ಬೇಕಿಸ್ತಾನ ಮೂಲದ ಮಹಿಳೆಯೊಬ್ಬಳು ನೇಪಾಳದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದು, ಉತ್ತರ ಪ್ರದೇಶದ ಮಹಾರಾಜಗಂಜ್​ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಪಬ್​ಜಿ ಆಡುವಾಗ ಭಾರತೀಯ ಮೂಲದ ಸಚಿನ್​ ಮೀನ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿದ ಬಳಿಕ ಆತನನ್ನು ಭೇಟಿಯಾಗಲು ತನ್ನ ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನದಿಂದ ನೇಪಾಳಕ್ಕೆ ಆಗಮಿಸಿ, ಅಲ್ಲಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸೀಮಾ ಹೈದರ್ ಇಂದಿಗೂ ಉತ್ತರ ಪ್ರದೇಶದ ನೋಯ್ಡಾದಲ್ಲಿ ನೆಲೆಸಿದ್ದಾಳೆ. ಈ​ ಪ್ರಕರಣ ಇಡೀ ದೇಶದಲ್ಲಿ ಚರ್ಚೆಯಾಯಿತು ಮತ್ತು ಇಂದಿಗೂ ಚರ್ಚೆ ಆಗುತ್ತಲೇ ಇದೆ. ಈ ಪ್ರಕರಣ ಜೀವಂತವಾಗಿ ಇರುವಾಗಲೇ ಅದೇ ರೀತಿಯ ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ನೇಪಾಳದ ಸೋನೌಲಿ ಗಡಿಯಿಂದ ಉಜ್ಬೇಕಿಸ್ತಾನ ಮೂಲದ ಮಹಿಳೆಯೊಬ್ಬಳು ಅಕ್ರಮವಾಗಿ ಭಾರತವನ್ನು ಪ್ರವೇಶ ಮಾಡಿದ್ದು, ಆಕೆಯನ್ನು ಸಸಶ್ತ್ರ ಸೀಮಾ ಬಲ (ಎಸ್​ಎಸ್​ಬಿ) ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಗುರುತಿಗೆ ಆಧಾರ್​ ಕಾರ್ಡ್​ ತೋರಿಸಿದ್ದು, ಅನುಮಾನಗೊಂಡ ಪೊಲೀಸರು ಪರಿಶೀಲಿಸಿದಾಗ ಅದು ನಕಲಿ ಎಂದು ಗೊತ್ತಾಗಿ ಆಕೆಯನ್ನು ಬಂಧಿಸಲಾಗಿದೆ.

ಬಂಧಿತಳನ್ನು ದಿಲ್ಬರ್ ರಾಖಿಮೋವಾ ಎಂದು ಗುರುತಿಸಲಾಗಿದೆ. ವಿಚಾರಣೆಯಲ್ಲಿ ಮಹಿಳೆ ತಾನು ಉಜ್ಬೇಕಿಸ್ತಾನದಿಂದ ಬಂದಿರುವುದಾಗಿ ತಿಳಿಸಿದ್ದಾಳೆ. ಕೂಲಂಕುಷವಾಗಿ ತನಿಖೆ ನಡೆಸಿದಾಗ ಆಕೆಯ ಪಾಸ್‌ಪೋರ್ಟ್ ಮತ್ತು ವೀಸಾ ಮಾನ್ಯವಾಗಿದ್ದರೂ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿ ಹೊಂದಿಕೆಯಾಗುತ್ತಿಲ್ಲ ಎಂದು ತಿಳಿದುಬಂದಿದೆ. ಸೋನೌಲಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದು ಏಕೆ ಎಂಬುದು ತಿಳಿದುಬಂದಿಲ್ಲ. ಈ ಕುರಿತು ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net