

ವಿಜಯಪುರ: ಇಲ್ಲೊಬ್ಬ ವ್ಯಕ್ತಿ ಅಪ್ರಾಪ್ತಳನ್ನು ಮದುವೆಯಾಗಿದ್ದು, ಆತನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಕಾರಣದಿಂದ ನೊಂದಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಕಾಟನಪೇಟೆ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣದ ಪ್ರಮುಖ ಆರೋಪಿ, ಯುವಕ ಶಶಿಧರ ಭಜಂತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಆತನ ಯುವಕ ಶಿವಾನಂದ (ಶಶಿಧರ) ಭಜಂತ್ರಿ ಮೃತದೇಹ ವಿಜಯಪುರಕ್ಕೆ ಆಗಮಿಸಿದ್ದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ತಮ್ಮ ಮನೆ ಮಗನಿಗೆ ಅನ್ಯಾಯ ಆಗಿದೆ ಎನ್ನುತ್ತಿರುವ ಕುಟುಂಬಸ್ಥರು ಬಸವನ ಬಾಗೇವಾಡಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮೃತದೇಹ ಇಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಸಂದರ್ಭ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ವಡವಡಗಿ ಗ್ರಾಮಸ್ಥರು ಹಾಗೂ ಸಂಬಂಧಿಕರು ಯುವಕನ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭ ಕುಟುಂಬಸ್ಥರನ್ನು ಪೊಲೀಸರು ತಡೆದಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ ಅರಿವು ಅಗತ್ಯ
ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ತನ್ನ ಸಾವಿಗೆ ಕಾರಣರಾದವರ ಹೆಸರು ಹೇಳಿದ್ದು, ಅವರನ್ನು ಬಂಧಿಸಬೇಕು ಯುವಕನ ಸಾವಿಗೆ ನ್ಯಾಯ ಕೊಡಬೇಕು ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಯುವಕ, “ಆಕೆ ನನ್ನನ್ನು ಆರು ವರ್ಷ ಲವ್ ಮಾಡಿ ಮದುವೆ ಮಾಡಿಕೊಂಡಿದ್ದಾಳೆ. ಇವಾಗ ಜಾತಿ ಸಲುವಾಗಿ ಅವರ ಅಪ್ಪ ಅವ್ವ ಮತ್ತೆ ಅವರ ಕಾಕಾ ಅವರಜ್ಜಿ ಮತ್ತೆ ಅವರು ಸಮಾಜದವ್ರು ಮತ್ತೆ ಡೆಂಗಿ ಬಸವರಾಜ ಇವೆಲ್ಲಾ ನನ್ನ ಸಾವಿಗೆ ಕಾರಣರಾಗಿದ್ದಾರೆ.
ಆಕೆ ಇವಾಗ ನನಗೆ ಉಲ್ಟಾ ಮಾತಾಡ್ತಾ ಇದ್ದಾಳೆ. ನನ್ನ ಹೆಂಡತಿ ನನ್ನ ಜೊತೆ ಆರು ವರ್ಷದಿಂದ ಮಕ್ಕೊಂಡು ಸಂಸಾರ ಮಾಡಿದ್ದಾಳೆ. ನನ್ನತ್ರ ಫೋಟೋ ವಿಡಿಯೋ ಇದೆ. ಅದರ ಜೊತೆ ಮದುವೆ ಪೋಟೋ ವಿಡಿಯೋ ಕೂಡ ಇದೆ. ಇದನ್ನೆಲ್ಲಾ ಪೊಲೀಸರಿಗೆ ಹೇಳಿದ್ರೆ ಕಂಪ್ಲೇಟ್ ತೊಗೋತಾ ಇಲ್ಲ. ನನಗೆ ಮೇಲಧಿಕಾರಿಗಳು ಎನ್‍ಕ್ವೈರಿ ಮಾಡಬೇಕು ಅಂತ ವಿನಂತಿ. ನನ್ನ ಸಾವಿಗೆ ಇವರೆಲ್ಲ ಕಾರಣ” ಎಂದು ಬರೆದುಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಶಿವಾನಂದನಿಗೆ ಹುಡುಗಿಯನ್ನು ಮದುವೆಯಾಗಿದ್ದಕ್ಕೆ ಹೊಡೆಯುವುದಾಗಿ ಯುವತಿಯ ಮನೆಯವರು ಧಮ್ಕಿ ಹಾಕಿದ್ದರು ಎನ್ನಲಾಗಿದೆ. ಇದಲ್ಲದೇ ಆತನ ಮೇಲೆ ಬಾಲ್ಯವಿವಾಹ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣವೂ ದಾಖಲಾಗಿತ್ತು ಎಂದು ವಿಜಯಪುರ ಜಿಲ್ಲಾ ಎಸ್‍ಪಿ, ಅನಂತ್ ಕುಮಾರ್ ಮಾಹಿತಿ ನೀಡಿದ್ದಾರೆ. ಇದರಿಂದ ಯುವಕ ಶಿವಾನಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಯಾರ ಮೇಲೆ ಆರೋಪ ಮಾಡಿದ್ದಾನೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾನೆ.