ಮಕ್ಕಳಿಗೆ ಸ್ಮಾರ್ಟ್​ ಫೋನ್​ ಕೊಡಿಸಿದ್ದರೆ ಅವರ ಮೇಲೊಂದು ಕಣ್ಣಿಟ್ಟಿರಿ; ಏಕೆಂದರೆ, ಇಲ್ಲಿ ನಡೆದದ್ದು ಮಕ್ಕಳಾಟವಲ್ಲ...!

mobile
Published on

ಕೊಯಮತ್ತೂರು: ಆಕೆ 7ನೇ ತರಗತಿ ಓದುತ್ತಿದ್ದ ಬಾಲಕಿ. ಅಮ್ಮ ಇರಲಿಲ್ಲ. ಅಪ್ಪ ಹಾಗೂ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಳು. ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಒಬ್ಬಳೇ ಮನೆಯಲ್ಲಿರುತ್ತಿದ್ದಳು. ಬಾಡಿಗೆಗಿದ್ದ ಮನೆಯ ಕೆಳ ಅಂತಸ್ತಿನಲ್ಲಿಯೇ ಮಾಲೀಕ ವಾಸಿಸುತ್ತಿದ್ದ. ಅವರ ಮನೆಗೆ ಆಗಾಗ ಟಿ.ವಿ. ನೋಡಲು ಹೋಗುತ್ತಿದ್ದ ಬಾಲಕಿ ತನಗೆ ಮುಂದೊಂದು ಇಂಥ ಪರಿಸ್ಥಿತಿ ಎದುರಾಗಬಹುದೆಂದು ಎಣಿಸಿಯೇ ಇರಲಿಲ್ಲ.

ಮನೆ ಮಾಲೀಕನ ಮಗ 10ನೇ ತರಗತಿಯಲ್ಲಿ ಓದುತ್ತಿದ್ದ. ಈತನ ಪಾಲಕರೂ ಕೂಡ ಕೆಲಸಕ್ಕೆ ಹೋಗುತ್ತಿದ್ದರು. ಆನ್​ಲೈನ್​ ಕ್ಲಾಸ್​ಗಳನ್ನು ಅಟೆಂಡ್​ ಮಾಡೋಕೆ ಆತನಿಗೊಂದು ಮೊಬೈಲ್​ ಕೊಡಿಸಿದ್ದರು.

ಅದೊಂದು ದಿನ ಟಿ.ವಿ. ನೋಡಲೆಂದು ಬಾಲಕಿ ಕೆಳಗಿನ ಮನೆಗೆ ಹೋದಾಗ ಆತ ಮೊಬೈಲ್​ನಲ್ಲಿ ಆಶ್ಲೀಲ ದೃಶ್ಯಗಳನ್ನು ವೀಕ್ಷಿಸುತ್ತಿದ್ದ. ಜತೆಗೆ ಇನ್ನೊಬ್ಬ ಬಾಲಕ ಕೂಡ ಇದ್ದ. ಈತನೂ 10ನೇ ತರಗತಿ ವಿದ್ಯಾರ್ಥಿ. ಬಾಲಕಿಗೆ ಇಷ್ಟವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಅಶ್ಲೀಲ ಚಿತ್ರಗಳನ್ನು ತೋರಿಸಿದ್ದರು.

ಇದಾಗುತ್ತಿದ್ದಂತೆ ಬಾಲಕಿ ಮನೆಗೆ ತೆರಳಿದ್ದಾಳೆ. ಹಿಂದೆಯೇ ಆಕೆಯ ಮನೆಗೆ ನುಗ್ಗಿದ ಇಬ್ಬರು ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ. ಈ ಕೃತ್ಯ ಹಲವು ದಿನಗಳವರೆಗೆ ನಡೆದಿದೆ. ಇದಷ್ಟೇ ಅಲ್ಲ, ಇನ್ನೊಬ್ಬ ಗೆಳೆಯನನ್ನು ಕರೆಯಿಸಿಕೊಂಡಿದ್ದಾರೆ. ಒಟ್ಟಾಗಿ ಅಶ್ಲೀಲ ಚಿತ್ರಗಳನ್ನು ತೋರಿಸಿ ಮತ್ತೆ ಅತ್ಯಾಚಾರ ಎಸಗಿದ್ದಾರೆ. ಜತೆಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ.

ಇದಾದ ಕೆಲ ದಿನಗಳ ಬಳಿಕ ಬಾಲಕಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಕೆಯನ್ನು ಪಾಲಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಬಾಲಕಿ ವೈದ್ಯರಿಗೆ ತಿಳಿಸಿದ್ದಾಳೆ. ಕೂಡಲೇ ವೈದ್ಯರು ಮಹಿಳಾ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪೋಕ್ಸೋ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮನೆ ಮಾಲೀಕನ ಮಗ ಹಾಗೂ ಇನ್ನೊಬ್ಬನನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಶೋಧ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net