ಕನಕಪುರದಲ್ಲಿ ಜುಲೈ 1ರವರೆಗೆ ಸ್ವಯಂಪ್ರೇರಿತ ಲಾಕ್​ಡೌನ್​; ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಯಲ್ಲಿ ನಿರ್ಣಯ

DKS- kanakapura
Published on

ಕನಕಪುರ: ಕರೊನಾ ಸೋಂಕು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದ ನಾಗರಿಕರು ಜುಲೈ 1 ರವರೆಗೆ ಸ್ವಯಂ ಪ್ರೇರಿತ ಲಾಕ್​ಡೌನ್​ ಗೆ ಸ್ಥಳೀಯ ಶಾಸಕರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಭಾನುವಾರ ನಡೆದ ತುರ್ತು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

ನಗರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ರಾಮನಗರ ಜಿಲ್ಲಾಧಿಕಾರಿ ಅರ್ಚನಾ, ಎಸ್ಪಿ ಅನೂಪ್ ಶೆಟ್ಟಿ, ಕನಕಪುರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್ ಭಾಗವಹಿಸಿದ್ದರು.

ಜನರ ಆರೋಗ್ಯ ರಕ್ಷಣೆ, ಕನಕಪುರ ಕ್ಷೇತ್ರದ ಗೌರವ ಕಾಪಾಡಿಕೊಳ್ಳಲು ಇದು ಅನಿವಾರ್ಯ. ಜುಲೈ 1 ರ ನಂತರ ಪರಿಸ್ಥಿತಿ ಅವಲೋಕಿಸಿ, ಮುಂದಿನ ತೀರ್ಮಾನ ಕೈಗೊಳ್ಳೋಣ. ರಾಜ್ಯ ಸರ್ಕಾರದ ಆದೇಶಕ್ಕೂ ಇದಕ್ಕೂ ಸಂಬಂಧವಿಲ್ಲ. ನಾವೆಲ್ಲರೂ ಒಟ್ಟಿಗೆ ಸ್ವಇಚ್ಛೆಯಿಂದ ತೆಗೆದುಕೊಂಡಿರುವ ನಿರ್ಣಯ ಇದು ತಿಳಿಸಲಾಗಿದೆ.

ಈ ಲೌಕ್​ಡೌನ್​ ಕನಕಪುರ ಜನತೆ ಮುನ್ನೆಚ್ಚರಿಕೆ ಕ್ರಮವಾಗಿ ತೆಗೆದುಕೊಂಡಿರುವ ಪ್ರಜ್ಞಾಪೂರ್ವಕ ಸ್ವಂತ ನಿರ್ಣಯ. ಜೀವವಿದ್ದರೆ ಜೀವನ ಎಂಬ ನಂಬುಗೆಯ ಆಧಾರದಲ್ಲಿ ಕೈಗೊಂಡಿರುವ ಮಾದರಿ ನಿರ್ಧಾರ. ಅದಕ್ಕಾಗಿ ಸ್ಥಳೀಯರನ್ನು ನಾನು ಅಭಿನಂದಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

ಬೆಳಗ್ಗೆ 7 ರಿಂದ 11 ಗಂಟೆವರೆಗೆ ಮಾತ್ರ ದಿನಸಿ ವಸ್ತುಗಳು, ಹಣ್ಣು, ತರಕಾರಿ, ಸೊಪ್ಪು, ಮಾಂಸ ಮತ್ತಿತರ ದಿನಬಳಕೆ ಆಹಾರ ವಸ್ತುಗಳ ಮಾರಾಟಕ್ಕೆ ವರ್ತಕರು ಸಮ್ಮತಿಸಿದ್ದಾರೆ. ಕ್ಲಿನಿಕ್, ಔಷಧ ಅಂಗಡಿಗಳ ಅವಧಿ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಡಿಸಿ, ಎಸ್ಪಿ, ಆಸ್ಪತ್ರೆ ಪ್ರತಿನಿಧಿಗಳು ನಿರ್ಣಯ ಮಾಡುತ್ತಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಅಸೋಸಿಯೇಷನ್ ನವರು ಮದ್ಯದಂಗಡಿಗಳ ಸಮಯ ನಿಗದಿ ಮಾಡುತ್ತಾರೆ. ಆದರೆ ಎಲ್ಲ ಬಗೆಯ ವರ್ತಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ವ್ಯಾಪಾರ ಸ್ಥಳದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಇದರ ಬಗ್ಗೆ ಪೊಲೀಸ್ ಇಲಾಖೆ ಸಿಬ್ಬಂದಿ ನಿಗಾ ವಹಿಸಲಿದ್ದಾರೆ. ಜತೆಗೆ, ರೇಷ್ಮೆ ಮಾರುಕಟ್ಟೆ ತೆರೆದಿರುತ್ತಿದೆ. ಅದಕ್ಕೂ ನಿಗದಿತ ಸಮಯ ಇರುತ್ತದೆ.

ಕರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ರಾಮನಗರ ಜಿಲ್ಲೆಯ ಆಸ್ಪತ್ರೆಗಳು ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಅವರ ಊಟೋಪಾಚಾರಗಳಿಗೆ ನಿತ್ಯ ಕೇವಲ 60 ರೂಪಾಯಿ ಮಾತ್ರ ಸರ್ಕಾರ ನೀಡುತ್ತಿದೆ. ಇದರಿಂದ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂಬ ದೂರು ಬಂದಿದೆ. ಹೀಗಾಗಿ ಡಿ.ಕೆ.ಎಸ್. ಚಾರಿಟಬಲ್ ಟ್ರಸ್ಟ್​ನಿಂದ ಹೆಚ್ಚುವರಿಯಾಗಿ ತಲಾ 100 ರೂ. ನೀಡಲಾಗುವುದು. ಜತೆಗೆ ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರು ಮನೆಯಿಂದ ಹಾಸಿಗೆ, ಹೊದಿಕೆ, ಬಟ್ಟೆ ಮತ್ತಿತರ ವಸ್ತುಗಳನ್ನು ತರಿಸಿಕೊಳ್ಳಬಹುದು. ಇಲ್ಲದಿದ್ದರೆ ನಾನೇ ಟ್ರಸ್ಟ್​ ಮೂಲಕ ಅದನ್ನು ಒದಗಿಸಲು ಸಿದ್ಧನಿದ್ದೇನೆ ಎಂದು ಡಿ.ಕೆ. ಶಿವಕುಮಾರ್​ ತಿಳಿಸಿದರು.

ಎಸ್ಸೆಸ್ಸೆಲ್ಸಿ, ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಧಾರವೇ ಅಂತಿಮ. ಇದರಲ್ಲಿ ನಾವ್ಯಾರೂ ತಲೆ ಹಾಕುವುದಿಲ್ಲ. ಈ ವಿದ್ಯಾರ್ಥಿಗಳಿಗೆ 1 ಲಕ್ಷ ಮಾಸ್ಕ್​ಗಳನ್ನು ವಿತರಿಸಲಾಗುವುದು. ಈಗಾಗಲೇ ಅದನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ. ಈ ಸ್ವಯಂ ಪ್ರೇರಿತ ಲಾಕ್​ಡೌನ್ ಸಂದರ್ಭದಲ್ಲಿ ಅನಗತ್ಯ ಓಡಾಟ ವಾಹನ ಸಙಚಾರಕ್ಕೆ ಕಡಿವಾಣ ಹಾಕಿಕೊಳ್ಳಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಯಾರೂ ಯಾರ ಮೇಲೂ ದಬ್ಬಾಳಿಕೆ ಮಾಡಬಾರದು ಎಂದು ಸೂಚನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net