ಬೆಂಗಳೂರು: ಒಡವೆ ಕಳ್ಳರು, ದುಬಾರಿ ಮೌಲ್ಯದ ಮೊಬೈಲ್, ವಸ್ತುಗಳು ಸೇರಿದಂತೆ ಇನ್ನಿತರ ಬೆಲೆ ಬಾಳುವ ಐಟಂಗಳನ್ನು ಕದ್ದು ಪರಾರಿಯಾಗುವ ಕಿಡಿಗೇಡಿಗಳ ಗ್ಯಾಂಗ್ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಆದ್ರೆ, ಇಲ್ಲೊಂದು ಸೀರೆ ಗ್ಯಾಂಗ್ ಸದ್ಯ ಪೊಲೀಸರ ಬಲೆಗೆ ಸಿಲುಕಿದ್ದು, ಕದ್ದ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ಮಾರಾಟ ಮಾಡಲಾಗದೆ, ತಮ್ಮಲ್ಲಿಯೇ ಇಟ್ಟುಕೊಳ್ಳಲಾಗದೆ ಎಲ್ಲವನ್ನೂ ಪೊಲೀಸರಿಗೆ ಒಪ್ಪಿಸುವಂತ ಪರಿಸ್ಥಿತಿ ಎದುರಾಗಿದ್ದು ತೀರ ಹಾಸ್ಪಸ್ಪದ ಸಂಗತಿ. ನಗರದ ವಿವಿಧೆಡೆ ಪ್ರೀಮಿಯಂ ರೇಷ್ಮೆ ಸೀರೆಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರಿದ್ದ ಮಹಿಳಾ ತಂಡವನ್ನು ಇದೀಗ ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಪತ್ರಿಕಾ ವಿತರಕರಿಗೆ ಸೂಕ್ತ ಜಾಗ ನೀಡಲು ಆಗ್ರಹ
ಆ.25ರಂದು ಜೆಪಿ ನಗರದ ಅಂಗಡಿಯೊಂದರಲ್ಲಿ ಸೀರೆ ಕಳ್ಳತನ ಮಾಡುತ್ತಿದ್ದ ಈ ಗ್ಯಾಂಗ್ ಪೊಲೀಸರ ಹದ್ದಿನ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಕಳ್ಳತನ ಮಾಡಿದ್ದ 17.5 ಲಕ್ಷ ರೂ. ಮೌಲ್ಯದ 38 ಸೀರೆಗಳನ್ನು ಇದೀಗ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಖದೀಮರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತ ಕಳ್ಳರನ್ನು ಜಾನಕಿ, ಪೊನ್ನೂರು ವಲ್ಲಿ, ಮೇಧಾ ರಜನಿ ಮತ್ತು ವೆಂಕಟೇಶ್ವರಮ್ಮ ಎಂದು ಗುರುತಿಸಲಾಗಿದೆ.
ಗ್ಯಾಂಗ್‌ನ ಭಾಗವಾಗಿದ್ದ ಇತರ ಇಬ್ಬರು ಮಹಿಳೆಯರು ಪ್ರಸ್ತುತ ಪರಾರಿಯಾಗಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕದ್ದ ಸೀರೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದಕ್ಕಾಗಿ ದುಬಾರಿ ಮೌಲ್ಯದ ಸೀರೆಗಳನ್ನು ಅವರು ಟಾರ್ಗೆಟ್ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಪೊಲೀಸರ ವರದಿ ಪ್ರಕಾರ, ಆರು ಮಹಿಳೆಯರು ಸೀರೆಯನ್ನು ಧರಿಸಿ ಜೆಪಿ ನಗರದ ರೇಷ್ಮೆ ಅಂಗಡಿಗೆ ಭೇಟಿ ಕೊಟ್ಟಿದ್ದರು. ಗ್ರಾಹಕರಂತೆಯೇ ವರ್ತಿಸಿದ್ದಾರೆ. ಅವರಲ್ಲಿ ನಾಲ್ವರು ಬಟ್ಟೆಗಳನ್ನು ನೋಡುವಂತೆ ಹೇಳಿ ಅಂಗಡಿಯವರ ದಿಕ್ಕು ತಪ್ಪಿಸಿದರೆ, ಇತರರು ಬೇಗನೆ ಟೇಬಲ್‌ನಿಂದ ಎಂಟು ಸೀರೆಗಳನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಓಬಳಾಪುರಂ ಗಣಿಗಾರಿಕೆಗೆ ಆಂಧ್ರ ಆಕ್ಷೇಪ: ವೈಎಸ್ಸಾರ್ ಸರ್ಕಾರದ ಅನಮೋದನೆ ಮರುಪರಿಶೀಲನೆ
ಇಬ್ಬರು ಪರಾರಿಯಾದ ತಕ್ಷಣವೇ ಎಚ್ಚೆತ್ತುಕೊಂಡ ಅಂಗಡಿಯ ಸಿಬ್ಬಂದಿ ಏನೋ ಎಡವಟ್ಟಾಗಿದೆ ಎಂದು ಅನುಮಾನಿಸಿ, ಉಳಿದ ನಾಲ್ವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ತಮ್ಮ ಬಟ್ಟೆ ಅಡಿಯಲ್ಲಿ 10ಕ್ಕೂ ಹೆಚ್ಚು ಸೀರೆಗಳನ್ನು ತುಂಬಿಕೊಂಡು ಅಂಗಡಿಯಿಂದ ಹೊರಬರಲು ಯತ್ನಿಸಿದ ಗ್ಯಾಂಗ್ ಅನ್ನು ತಡೆದು ಪರಿಶೀಲಿಸಿದಾಗ ಸೀರೆಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಸೀರೆ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ,(ಏಜೆನ್ಸೀಸ್).