

ನವದೆಹಲಿ: ಪ್ಯಾರಿಸ್ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಪದಕದಾಟದಲ್ಲಿ ಭಾರತಕ್ಕೆ 16ನೇ ಪದಕ ತಂದುಕೊಟ್ ದೀಪ್ತಿ ಜೀವನಜಿ, ಮಹಿಳೆಯರ 400 ಮೀಟರ್ ಟಿ20 ಫೈನಲ್‌ನಲ್ಲಿ ಮಂಗಳವಾರ (ಸೆ.03) ಕಂಚು ಗೆದ್ದು ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದರು. ತಮ್ಮಿ ಮಿಂಚಿನ ಓಟವನ್ನು 55.82 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ಪ್ಯಾರಾ-ಅಥ್ಲೀಟ್ಗೆ ಅಪಾರ ಗೌರವ, ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಒಂದು ಪುಟ್ಟ ಹಳ್ಳಿಯಿಂದ ಬಂದ ದೀಪ್ತಿಯ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಶೇಷ ಅಭಿನಂದನೆ ಕೂಡ ದೊರಕಿತು.
ಇದನ್ನೂ ಓದಿ: ಶಿಕ್ಷಕ ವೃತ್ತಿ, ಪರಂಪರೆ ಮತ್ತು ಪ್ರಸಕ್ತ ಸ್ಥಿತಿ
ದೃಢ ಮನಸ್ಸು, ಇಚ್ಛಾಶಕ್ತಿ, ಗುರಿ ಇದ್ದರೆ ನಾವು ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು. ಯಾರ ಕೊಂಕು ಮಾತುಗಳಿಗೆ ಕುಗ್ಗದೆ, ಆ ಮಾತುಗಳನ್ನೇ ಸಾಧನೆಯ ಅಡಿಪಾಯವಾಗಿಸಿಕೊಂಡು ಗೆಲುವು ಕಾಣುವುದೇ ಅದ್ಭುತ ಯಶಸ್ಸು ಎಂಬುದನ್ನು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಕಂಚು ಗೆದ್ದ ದೀಪ್ತಿ ಇಡೀ ಜಗತ್ತಿಗೆ ಸಾರಿದ್ದಾರೆ. ಹುಟ್ಟಿದ್ದೇ ತಪ್ಪಾಯ್ತು ಎನ್ನುವ ಕಷ್ಟದಲ್ಲಿ ಬೆಳೆದ ದೀಪ್ತಿಯ ಹಾದಿ ಅಂದುಕೊಂಡಷ್ಟು ಸುಲಭ ಇರಲಿಲ್ಲ. ಹುಟ್ಟಿನಿಂದಲೇ ಅಪಸ್ವರ, ನೋಡಲು ವಿಕಾರ, ವಿಚಿತ್ರ, ಕೋತಿ, ಹುಚ್ಚಿ ಎಂಬ ಚುಚ್ಚು ಮಾತುಗಳನ್ನೇ ಕೇಳುತ ಬೆಳೆದ ಪದಕ ಸಾಧಕಿ, ಅವಮಾನ, ಅಪಮಾನ ಬಿಟ್ಟರೇ ಬೇರೇನೂ ಕೇಳಲೇ ಇಲ್ವಂತೆ. ಈ ಬಗ್ಗೆ ಸ್ವತಃ ದೀಪ್ತಿ ಅವರ ಪೋಷಕರೇ ಮಾತನಾಡಿದ್ದು, ಮಗಳ ಬಾಲ್ಯದ ಪರಿಸ್ಥಿತಿ, ಎದುರಿಸಿದ ಕಠಿಣ ಸವಾಲುಗಳ ಕುರಿತು ಮನಬಿಚ್ಚಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಜಪಾನ್‌ನ ಕೋಬೆಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಪ್ಯಾರಾ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದಿದ್ದ ದೀಪ್ತಿ ಜೀವನಜಿ, ಈ ಬಾರಿ ನಡೆದ ಪ್ಯಾರಾಲಿಂಪಿಕ್ಸ್ನಲ್ಲಿ ಕಂಚು ಗೆದ್ದು ದೇಶಕ್ಕೆ ಕೀರ್ತಿ ತಂದದ್ದು ಪ್ರತಿಯೊಬ್ಬ ಭಾರತೀಯ ಖುಷಿ ಪಡುವ ಸಂಗತಿ. "ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯ ಕಲ್ಲೆಡ ಗ್ರಾಮದಲ್ಲಿ ದೀಪ್ತಿ ಜನಿಸಿದಳು. ಆಕೆ ಹುಟ್ಟಿದ್ದು ಸೂರ್ಯಗ್ರಹಣದ ಸಮಯದಲ್ಲಿ. ಆಗ ಮಗಳ ತಲೆಯು ಹುಟ್ಟುವಾಗಲೇ ತುಂಬಾ ಕಿರಿದಾಗಿತ್ತು ಮತ್ತು ತುಟಿಗಳು ಹಾಗೂ ಮೂಗು ಸ್ವಲ್ಪ ಭಿನ್ನವಾಗಿತ್ತು. ನಮ್ಮ ಪುತ್ರಿಯ ಮುಖ ನೋಡಿದ ಊರಿನವರು ಮತ್ತು ನಮ್ಮ ಕೆಲ ಸಂಬಂಧಿಕರು ಆಕೆ ಮಾನಸಿಕ, ಹುಚ್ಚಿ, ಕೋತಿ ಎಂದು ಕರೆದು ಆಕೆಯನ್ನು ಅವಮಾನಿಸಲು ಪ್ರಾರಂಭಿಸಿದರು" ಎಂದು ದೀಪ್ತಿ ಪೋಷಕರಾದ ಜೀವನಜಿ ಯಾದಗಿರಿ ಮತ್ತು ಜೀವನಜಿ ಧನಲಕ್ಷ್ಮಿ ಹೇಳಿದರು.
"ಮಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಬೇಡ, ಅನಾಥಾಶ್ರಮಕ್ಕೆ ಕಳುಹಿಸಿ ಎಂದು ಒತ್ತಾಯಿಸುತ್ತಿದ್ದರು. ಇಂತಹ ಅವಮಾನಗಳನ್ನು ಲೆಕ್ಕಿಸದೆ, ಸಾಧನೆ ಹಾದಿ ಹಿಡಿದ ನನ್ನ ಮಗಳು, ಇಂದು ಯಾವುದೋ ದೂರದ ದೇಶದಲ್ಲಿ ವಿಶ್ವ ಚಾಂಪಿಯನ್ ಆಗಿರುವುದನ್ನು ನೋಡಿದಾಗ ನಿಜವಾಗಿಯೂ ವಿಶೇಷ ಹುಡುಗಿ, ಅವಳ ಜೀವನ, ಗೆಲುವು ಇತರರಿಗೆ ಸ್ಪೂರ್ತಿದಾಯಕವಾಗಿದೆ ಎಂಬುದನ್ನು ಸಾಬೀತುಪಡಿಸಿದೆ ”ಎಂದು ಹೇಳಿದ ದೀಪ್ತಿ ಅವರ ತಾಯಿ ಭಾವುಕರಾದರು,(ಏಜೆನ್ಸೀಸ್).