ಸುಟ್ಟು ಬೂದಿಯಾಗಿ ಹೋಗಿದ್ದ ಜಪಾನನ್ನು ಕೇವಲ ಇಪ್ಪತೆôದು ವರ್ಷಗಳಲ್ಲಿ ಸೂಪರ್ ಪವರ್ ಆಗಿ ಪರಿವರ್ತಿಸಿದವರು ಅಲ್ಲಿಯ ಶಿಕ್ಷಕರು. ಜಪಾನ್ ಇದನ್ನು ಸಾಧಿಸಿದ್ದು ಕೇವಲ ಇಪ್ಪತೆôದು ವರ್ಷಗಳಲ್ಲಿ ಸಮಾಜದ ಶ್ರೇಷ್ಠ ಯುವಕ-ಯುವತಿಯರನ್ನು ಶಿಕ್ಷಕರನ್ನಾಗಿಸುವುದರ ಮೂಲಕ. ಜಪಾನ್ ಒತ್ತು ಕೊಟ್ಟಿದ್ದು ರಾಷ್ಟ್ರಪ್ರೇಮ, ಕಾರ್ವಿುಕವಲಯದಲ್ಲಿ ಶಿಸ್ತು, ರಾಷ್ಟೀಯ ಸಂಪತ್ತುಗಳ ರಕ್ಷಣೆಯ ಕಡೆಗೆ.
ಭಾರತೀಯ ಇತಿಹಾಸವನ್ನು ಆಮೂಲಾಗ್ರವಾಗಿ ತಿಳಿಯಲೆತ್ನಿಸುವುದಕ್ಕೆ ಪ್ರಯತ್ನಪಟ್ಟವರು ಸಮಾಧಾನ ಮನಸ್ಸಿನಿಂದ ಉಳಿಯುವುದು ಕಷ್ಟವಾದೀತು. ಮನಸ್ಸಿನ ತುಂಬ ತಳಮಳ, ಕಳವಳಗಳೇ ಜಿನುಗಲಾರಂಭಿಸಿತು. ಕಾರಣ ಇಷ್ಟೇ ಮನುಷ್ಯನೊಬ್ಬನಿಗೆ ವರವೆನಿಸಬಹುದಾದ ಅತ್ಯವಶ್ಯ ಅನಿವಾರ್ಯ ಉದ್ಧಾರಕ ಅಂಶಗಳು ಏನೇನೀವೆಯೋ ಅವುಗಳೆಲ್ಲವನ್ನೂ ಸಂಪೂರ್ಣವಾಗಿ ಮತ್ತು ಬೇರೆಲ್ಲ ಜನಾಂಗಗಳು ಮತ್ತು ರಾಷ್ಟ್ರಗಳಿಗಿಂತ ಮೊಟ್ಟಮೊದಲು ಸಂಶೋಧಿಸಿದ್ದು ಭಾರತ. ಈ ಸಂಶೋಧನೆಯ ಸಾರರೂಪವೇ ಮನಸ್ಸಿನ ಶಕ್ತಿಗಳು ಎಷ್ಟು? ಅವೆಷ್ಟು ಅದ್ಭುತ! ಅವುಗಳು ಕೈಗೆಟಕುವಂತೆ ಮಾಡುವುದು ಹೇಗೆ? ಇತ್ಯಾದಿಗಳನ್ನು ತಾನು ಕಂಡುಹಿಡಿದು ಪ್ರಯೋಜನ ಪಡೆದುಕೊಂಡಿದ್ದಷ್ಟೇ ಅಲ್ಲ; ಅವೆಲ್ಲವೂ ವಿಶ್ವದಾದ್ಯಂತ ಪಸರಿಸುರುವಂತೆಯೂ ನೋಡಿಕೊಂಡಿತು ಭಾರತ. ಎಷ್ಟೋ ಹಿಂದೆಯೇ ಇವನ್ನೆಲ್ಲ ಸಾಧಿಸಿದ ದೇಶ ಅನುಸರಿಸಿದ ತತ್ವಗಳಾವುವು; ಆ ತತ್ವಗಳು ಇಂದೇಕೆ ಮೂಲೆಗುಂಪಾಗಿವೆ ಎನ್ನುವುದು ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳನ್ನು ತಳಮಳಕ್ಕೆ ತಳ್ಳದಿರಲಾರದು.
ತಾನಿರುವ ಸ್ಥಿತಿಯನ್ನು ಬದಲಾಯಿಸಿಕೊಳ್ಳದೆ ಯಾವ ಮನುಷ್ಯನೂ ಉದ್ಧಾರವಾಗಲ್ಲ. ಅನಂತದಲ್ಲಿ ಮಾತ್ರ ಬದಲಾವಣೆ ಅನವಶ್ಯಕ. ಈ ಬದಲಾವಣೆಯೂ ಸಕಾರಾತ್ಮಕವಾಗಿರಬೇಕು. ಯಾವುದು ಸಕಾರಾತ್ಮಕ, ಯಾವುದು ನಕಾರಾತ್ಮಕ ಎಂದು ತಿಳಿಯುವುದೂ ಎಲ್ಲರಿಗೂ ಅರ್ಥವಾಗುವಷ್ಟು ಸುಲಭವೇನಲ್ಲ. ಯಾವುದು ಪ್ರಗತಿಕಾರಕ ಬೆಳವಣಿಗೆಯನ್ನು ತರುತ್ತದೋ ಅದು ಮಾತ್ರ ಸಕಾರಾತ್ಮಕ. ಈ ಜಗತ್ತಿನ ಪ್ರತಿ ಮನುಷ್ಯನಿಗೂ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳು ಕೆಲವಿವೆ. ಅವೇ ಅವನಿಗೊಂದು ಶರೀರ, ಮನಸ್ಸು, ಬುದ್ಧಿ, ಆತ್ಮ ಇವುಗಳಿವೆ ಎನ್ನುವುದು. ಯಾವುದೇ ಸಜೀವ ವಸ್ತುವಿಗೂ ಇವೆಲ್ಲ ಇದೆ ಎಂದರೆ ಏನೂ ತಪ್ಪಿಲ್ಲ. ವ್ಯತ್ಯಾಸ ಅವುಗಳ ಪರಿಮಾಣ(degree)ದಲ್ಲಿ ಮಾತ್ರ. ಹುಟ್ಟಿದ ಮಾಂಸದ ಮುದ್ದೆಯಂತಿರುವ ಮಗುವೊಂದು ಬೆಳೆಯಬೇಕು. ಎಲ್ಲಿಯವರೆಗೆ? ಭಾರತೀಯ ಜೀವನ ಸಂಹಿತೆ ಹೇಳುತ್ತದೆ ಇನ್ನು ಮುಂದೆ ಬೆಳವಣಿಗೆಯೇ ಇಲ್ಲ, ಇದೇ ಚರಮ ಸ್ಥಿತಿ ಅನ್ನುವವರೆಗೆ.
ಶರೀರ, ಮನಸ್ಸು, ಬುದ್ಧಿಗಳ ಬೆಳವಣಿಗೆಗೆ ಮಿತಿ ಇದೆ. ಆದರೆ ಆತ್ಮದ ಬೆಳವಣಿಗೆಗೆ ಅರ್ಥಾತ್ ಆತ್ಮದ ಲಕ್ಷಣಗಳ ವ್ಯಕ್ತತೆಗೆ ಮಿತಿಯೇ ಇಲ್ಲ. ಏಕೆಂದರೆ ಅಸ್ತಿತ್ವ, ಜ್ಞಾನ, ಆನಂದಗಳ ಪರಾಕಾಷ್ಠೆಯನ್ನು ಮುಟ್ಟಿದ ಮೇಲೂ ಆತ್ಮದ ಭವ್ಯತೆ ಉಳಿದಿರುತ್ತದೆ. ಅದನ್ನು ಹಾಗೆಯೇ ಇಟ್ಟುಕೊಳ್ಳಬೇಕಷ್ಟೆ. ಆದರೆ ಈ ಸ್ಥಿತಿಯನ್ನು ತಲುಪುವವರೆಗೂ ಪ್ರತಿಜೀವಿಯೂ ಬೆಳೆಯಬೇಕು. ಇದನ್ನರಿತು ಮನುಷ್ಯ ಪ್ರಜ್ಞಾಪೂರ್ವಕವಾಗಿ ಬೆಳೆಯಲು ಪ್ರಯತ್ನಿಸಬೇಕು. ಹಾಗೇನಾದರೂ ಸ್ವಇಚ್ಛೆಯಿಂದ ಬೆಳೆಯಲು ಪ್ರಯತ್ನಿಸದೆ ‘ಸಾಕು ಇಲ್ಲೇ ನಿಲ್ಲೋಣ’ ಎಂದೇನಾದರೂ ಭಾವಿಸಿದರೆ ಪ್ರಕೃತಿ ಮನಸ್ಸಿನಲ್ಲಿ ತಳಮಳಗಳನ್ನು, ಜಿಗುಪ್ಸೆಗಳನ್ನು ಸೃಷ್ಟಿ ಮಾಡಲು ಉಪಕ್ರಮಿಸುತ್ತದೆ. ಇಂದು ಎಷ್ಟೋ ಜನ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದು ಈ ಪ್ರಗತಿಯನ್ನು ನಿಲ್ಲಿಸಿಬಿಟ್ಟಿರುವುದರಿಂದ. ಊಟ, ಬಟ್ಟೆ, ಮನೆ, ಮಕ್ಕಳು ಎಲ್ಲ ಆಯಿತಲ್ಲ ಇನ್ನೇನು ಬೇಕು ಎಂದು ಪೂರ್ಣವಿರಾಮ ಇಟ್ಟಿರುವುದರಿಂದ.
ವಯಸ್ಸಾದ ವ್ಯಕ್ತಿಯಲ್ಲಿ ಶರೀರ ಮಾತ್ರ ತಾನು ಬೆಳೆಯಬಲ್ಲಷ್ಟು ಬೆಳೆದಿದೆ. ಮನಸ್ಸು, ಬುದ್ಧಿ, ಇತ್ಯಾದಿಗಳು?! ಅವು ಬೆಳವಣಿಗೆಯನ್ನು ಪ್ರಾರಂಭಿಸಿಯೇ ಇಲ್ಲವೇನೋ ಎನ್ನುವ ಹಂತದಲ್ಲೇ ಇದೆ. ಮನಸ್ಸು ಎಷ್ಟು ಬೆಳೆಯಬಲ್ಲದು, ಬೆಳೆದ ಮನಸ್ಸಿನ ಶಕ್ತಿಗಳೆಷ್ಟು ಎಂಬುದನ್ನು ಅರಿಯಲು ಇಂದು ಜಗತ್ತಿನಲ್ಲಿರುವ ಏಕೈತ ಅಧಿಕೃತ ಮೂಲ ಎಂದರೆ ಮಹರ್ಷಿ ಪತಂಜಲಿ ಪ್ರಣೀತ ರಾಜಯೋಗ. ಪಾಶ್ಚಿಮಾತ್ಯ ಪ್ರಪಂಚ ಅದರ ಬಗ್ಗೆ ಇನ್ನೂ ಕಣ್ಣೇ ತೆರೆದಿಲ್ಲವೆನ್ನುವಷ್ಟು ಕೆಳಮಟ್ಟದಲ್ಲಿದೆ. ಕಷ್ಟಪಟ್ಟು ಮನೋವೈದ್ಯ ಶಾಸ್ತ್ರವನ್ನು ತಿಳಿಯುವುದೇ ಸಾಕಾಯಿತು ಅದಕ್ಕೆ. ಮನೋವಿಜ್ಞಾನ (Psycology) ದೂರವೇ ಉಳಿಯಿತು. ಇದನ್ನು ಅರ್ಥ ಮಾಡಿಕೊಂಡ ಕಾರ್ಲ್ ಯೂಂಗ್ ಮತ್ತು ವಿಲಿಯಂ ಜೇಮ್ಸ್ ಭಾರತಕ್ಕೆ ಸಾಷ್ಟಾಂಗವೆರಗಿ ಅದರದ್ದೇ ಕೆಲ ಭಾಗಗಳನ್ನು ಪ್ರತಿಧ್ವನಿಸಿದ್ದಾರೆ. ಕಾರ್ಲ್ ಯೂಂಗ್ ಈ ವಿಷಯದಲ್ಲಿ ಪಾಶ್ಚಿಮಾತ್ಯರಿಗೆ ಇತಿಮಿತಿಯ ನಡುವೆಯೂ ಅವರ ಅಹಂಕಾರದ ಬಗ್ಗೆ ವಾರ್ನ್ ಹೇಸ್ಟಿಂಗ್, ಎಮರ್ಸನ್ನರಂತೆ ಛೀಮಾರಿಯನ್ನು ಹಾಕಿದ್ದಾರೆ. ಇನ್ನು ಬುದ್ಧಿಯ ಬೆಳವಣಿಗೆಯಂತೂ ಕೇವಲ ಗಣಿತ, ವಿಜ್ಞಾನ, ಚರಿತ್ರೆಗಳಿಗೆ ಸೀಮಿತ. ಮುಂಡಕೋಪನಿಷತ್ತಿನ ವಿದ್ಯಾರ್ಥಿ ಯಾವ ಒಂದನ್ನು ಅರಿತರೆ ಎಲ್ಲವನ್ನೂ ಅರಿಯಬಲ್ಲೆವೋ ಅಂಥಾದ್ದೇನಾದರೂ ಇದೆಯೋ? ಇದ್ದರೆ ಅರಿಯುವುದು ಹೇಗೆ? ಎನ್ನುವ ಪ್ರಶ್ನೆ ಕೇಳಬಲ್ಲಷ್ಟು ಬುದ್ಧಿಯ ವಾಂಛೆ ಮತ್ತು ಅಂಥ ಪ್ರಶ್ನೆ ಅಪ್ರಸ್ತುತವಲ್ಲ ಎಂದು ಭರವಸೆ ನೀಡಬಲ್ಲ ಶಿಕ್ಷಕ ಇಂದು ನಮ್ಮ ನಡುವೆ ಇದ್ದಾರೆಯೇ? ಇಷ್ಟೆಲ್ಲ ಇತಿಮಿತಿಗಳ ನಡುವೆ ‘ಈಗಿರುವ ಬೆಳವಣಿಗೆ ಸಾಕು’ ಎನ್ನುವ ಸಮಾಧಾನ ತರವೇ? ಮನಸ್ಸನ್ನಾಗಲಿ, ಬುದ್ಧಿಯನ್ನಾಗಲಿ ಅದರ ಬೆಳವಣಿಗೆಯ ಅಂತಿಮ ಹಂತಕ್ಕೆ, ಚರಮ ಸ್ಥಿತಿಗೆ ತಲುಪಿಸಿದ್ದಿದ್ದರೆ ಪ್ರತಿ ಮನುಷ್ಯನೂ ಆಶ್ಚರ್ಯಕರನಾಗಿರುತ್ತಿದ್ದ; ಅನಂತ (Infinity )ವನ್ನೇ ಪಡೆದುಕೊಳ್ಳುತ್ತಿದ್ದ. ಒಂದು ಜನ್ಮದಲ್ಲಿ ಇದು ಸಾಧ್ಯವಾಗುವಂಥದ್ದೇನೂ ಅಲ್ಲ! ಚಿಂತೆಯಿಲ್ಲ. ಅಂಶಿಕ ಪ್ರಗತಿಯೇ ಸಾಕು. ಇದೇ ಬೇಕೆಂಬಷ್ಟು ತೃಪ್ತಿ, ಸಮಾಧಾನಗಳನ್ನು ನೀಡಬಲ್ಲದು. ಅನಂತತೆಯನ್ನು ಸಾಧಿಸುವ ನಿಟ್ಟಿನಲ್ಲಿ ಬರುವ ಅಂಶಿಕ ಪ್ರಗತಿಗೂ ‘ಎಷ್ಟು ಸಾಧ್ಯವೋ ಅಷ್ಟೇ ಸಾಕು’ ಎಂಬ ಮನೋಭಾವದಿಂದ ಬರುವ ಅಂಶಿಕ ಪ್ರಗತಿಗೂ ಬಹಳಷ್ಟು ವ್ಯತ್ಯಾಸವಿದೆ ಎನ್ನುವುದು ಬೆರಳೆಣಿಸುವಷ್ಟು ಜನರಿಗೆ ಮಾತ್ರ ಗೊತ್ತಿರುವುದು ಆಧುನಿಕ ಶಿಕ್ಷಣದ ಬಹುದೊಡ್ಡ ಕೊರತೆ. ಇದೊಂದು ಮಹಾದುರಂತವೇ ಸರಿ. ಸಮೃದ್ಧಿಯ ನಡುವೆಯೂ ಮನುಷ್ಯ ಬಳಲುತ್ತಿರುವುದು, (Starvation in the midst of plenty) ಗುರಿ ಮಾತ್ರ ಮುಖ್ಯ ದಾರಿಯಲ್ಲ ಎಂದು ಭಾವಿಸಿ ಅನ್ಯಾಯ, ಅಧರ್ಮಗಳು ಇಂದು ತಾಂಡವವಾಡುತ್ತಿರುವ ಸ್ಥಿತಿಗೂ, ಸಾಧಕರ ಕೊರತೆಗೂ, ಬಹುಷಃ ನಮ್ಮ ಎಲ್ಲ ದುರವಸ್ಥೆ, ದುಃಸ್ಥಿತಿಗಳಿಗೂ ನಮ್ಮ ಗುರಿಯ ಬಗ್ಗೆ ಸರಿಯಾದ ವ್ಯಾಖ್ಯೆ ಇಲ್ಲದಿರುವುದೇ ಕಾರಣ.
ರಾಷ್ಟ್ರಕವಿ ಕುವೆಂಪು ಒಂದೆಡೆ ಹಾಡುತ್ತಾರೆ, ‘ಹಿಂದೆ ಒಂದು ಕಾಲವಿತ್ತು ಮುಂದೆ ಗುರಿ ಇತ್ತು, ಹಿಂದೆ ಗುರು ಇದ್ದ; ಸಾಗಿತ್ತು ರಣಧೀರರ ದಂಡು. ಇಂದು ಮುಂದೆ ಗುರಿ ಇಲ್ಲ, ಹಿಂದೆ ಗುರು ಇಲ್ಲ; ಸಾಗುತಿದೆ ರಣಹೇಡಿಗಳ ಹಿಂಡು.’ ಈ ಮಾತಿನ ಅರ್ಥವನ್ನೇ ನಾನು ಇಲ್ಲಿಯವರೆಗೆ ವಿವರಿಸಿರುವುದು. ಗುರು ಸರಿಯಾಗಿಲ್ಲದಿದ್ದಲ್ಲಿ ಗುರಿಯೂ ಇಲ್ಲ ಮಾರ್ಗವೂ ಇಲ್ಲ. ಯಾವಾಗ ಶಿಕ್ಷಕ Teacher by choice BWܨæ Teacher by chance ಅರ್ಥಾತ್ ತಾನೇ ಇಷ್ಟಪಟ್ಟು ಆಗದೆ ವಿಧಿ ಇಲ್ಲದೆ ಆಗಿರುತ್ತಾನೆಯೋ ಅಂಥವನಿಂದ ಬಹಳಷ್ಟು ನಿರೀಕ್ಷಿಸುವುದಕ್ಕಾಗುವುದಿಲ್ಲ.
ಭಾರತೀಯ ಪರಂಪರೆ ಅನಾದಿ ಕಾಲಕ್ಕೆ ‘ವೇದ’ ಎಂಬ ರತ್ನಗರ್ಭಳ ಆಂತರ್ಯದಲ್ಲೇ ಇದನ್ನೆಲ್ಲ ಹುದುಗಿಸಿಟ್ಟಿದೆ. ಇದನ್ನು ಷಡ್ದರ್ಶನಗಳು, ಗೀತೆ, ಉಪನಿಷತ್ತುಗಳು, ಸಂಬಂಧಿತ ಪುರಾಣ, ಶಾಸ್ತ್ರಗಳು ವಿವರಿಸಿವೆ. ಅದರ ಪರಿಣಾಮವಾಗಿ ಜರ್ಮನ್ ತತ್ವಶಾಸ್ತ್ರಜ್ಞ ಹೆಗೆಲ್ಲರ ಮಾತಿನಲ್ಲಿ ಹೇಳಬೇಕೆಂದರೆ “this has helped India to be more creative in history than any other Nation. Hence the effervescence of myths and legends, religions and philosophies, music and dances and the different styles of architecture’’ ಅರ್ಥಾತ್ ‘ಈ ಕಾರಣದಿಂದಾಗಿ ಇಡೀ ಮಾನವ ಇತಿಹಾಸದಲ್ಲೇ ಭಾರತ ಬೇರೆಲ್ಲ ರಾಷ್ಟ್ರಗಳಿಗಿಂತ, ಧರ್ಮ, ತತ್ವಶಾಸ್ತ್ರ, ವಿವಿಧ ರೀತಿಯ ನೃತ್ಯ ಹಾಗೂ ಸಂಗೀತ ಪ್ರಾಕಾರಗಳು, ಶಿಲ್ಪಕಲೆ, ವಿಜ್ಞಾನ ಇನ್ನಿತರ ಸೃಜನಾತ್ಮಕ ಕ್ಷೇತ್ರಗಳಲ್ಲಿ ಮಹಾನ್ ಪರಂಪರೆಯನ್ನೇ ನಿರ್ವಿುಸಲು ಸಾಧ್ಯವಾಯಿತು’.
ಇಂಥ ಭಾರತವನ್ನು ನಿರ್ವಿುಸಿದ್ದು ಅಂದಿನ ಗುರುಕುಲಗಳು. ಒಂದೇ ಜನ್ಮದಲ್ಲಿ ಅನಂತಸ್ಥಿತಿಯನ್ನು ತಲುಪಬೇಕೆನ್ನುವ ತುಡಿತ ರಾಷ್ಟ್ರೀಯ ಶಿಕ್ಷಣ ನೀತಿಯಾಗಿದ್ದ ಕಾಲಘಟ್ಟವದು. ಸಾರ್ವಜನಿಕ ಸೇವಾವಲಯದ ಅಡಿಯಿಂದ ಮುಡಿಯವರೆಗೂ ಕೇವಲ ಭ್ರಷ್ಟರನ್ನು, ಗುಮಾಸ್ತರನ್ನಷ್ಟೇ ನಿರ್ಮಾಣ ಮಾಡುತ್ತಿರುವ; ಕಾಮಕಾಂಚನಗಳಲ್ಲೇ ಮುಳುಗಿ ತೇಲುತ್ತಿರುವ Burden to the state exchequer? ವ್ಯಾಸ, ವಾಲ್ಮೀಕಿ, ಕಪಿಲ, ಕಾಳಿದಾಸ, ಬ್ರಹ್ಮಗುಪ್ತ, ಆರ್ಯಭಟ, ನಾಗಾರ್ಜುನ, ಶಂಕರಾದಿ ಆಚಾರ್ಯತ್ರಯರು ಗಾರ್ಗಿ, ಗಂಗಾದೇವಿ, ಅಲ್ಲಮರಂಥ ಸರಸ್ವತೀಪುತ್ರರನ್ನು ನಿರ್ವಿುಸಿದ ವ್ಯವಸ್ಥೆ ಎಲ್ಲಿ? ಚಿಂತನಶೀಲ ಮನಸ್ಸುಗಳು ಈ ಕುರಿತು ಯೋಚಿಸಲೆತ್ನಿಸಿದಾಗ ಸಹಜವಾಗಿಯೇ ಹೊಳೆಯುವ ಉತ್ತರವಿಷ್ಟು. ‘ದೇಶ ಸಂಸ್ಕಾರರಹಿತ ಮನಸ್ಸುಗಳಿಂದ ತುಂಬಿದೆ. ತರಬೇತಿರಹಿತ, ಸಂಸ್ಕಾರರಹಿತ, ಸಾಮರ್ಥ್ಯರಹಿತ, ಸದ್ಗುಣರಹಿತ ಕೇವಲ ಒಂದಷ್ಟು ಪರೀಕ್ಷೆಗಳನ್ನು ಪಾಸುಮಾಡಿದ, ಬೇಜವಾಬ್ದಾರಿ, ಭ್ರಷ್ಟ, ಆಲಸಿ ಸ್ವಾರ್ಥಿಗಳೇ ಹಳ್ಳಿಯಿಂದ ದಿಲ್ಲಿಯವರೆಗೂ ಆಯಕಟ್ಟಾದ ಜಾಗಗಳಲ್ಲಿ ಕುಳಿತಿರುವುದೇ ಇದಕ್ಕೆ ಕಾರಣ’.
ಇದಕ್ಕೆ ಹಲವು ಕಾರಣಗಳನ್ನು ಕೊಡಬಹುದಾದರೂ ಪ್ರಧಾನವಾಗಿ ಕಾಣುವುದು ನಮ್ಮ ‘ಶಿಕ್ಷಕ’ ಎನ್ನುವ ಪದ ತನ್ನ ಅರ್ಥವನ್ನು ಬದಲಾಯಿಸಿಕೊಂಡಿರುವುದೇ. ಸುಟ್ಟು ಬೂದಿಯಾಗಿ ಹೋಗಿದ್ದ ಜಪಾನನ್ನು ಕೇವಲ ಇಪ್ಪತೆôದು ವರ್ಷಗಳಲ್ಲಿ ಸೂಪರ್ ಪವರ್ ಆಗಿ ಪರಿವರ್ತಿಸಿದವರು ಅಲ್ಲಿಯ ಶಿಕ್ಷಕರು. ಜಪಾನ್ ಇದನ್ನು ಸಾಧಿಸಿದ್ದು ಕೇವಲ ಇಪ್ಪತೆôದು ವರ್ಷಗಳಲ್ಲಿ ಸಮಾಜದ ಶ್ರೇಷ್ಠ ಯುವಕ-ಯುವತಿಯರನ್ನು ಶಿಕ್ಷಕರನ್ನಾಗಿಸುವುದರ ಮೂಲಕ. ಇದು ಆರ್ಯಭಾರತ ಹೇಳಿಕೊಟ್ಟ ಪಾಠವೇ. ಆದರೆ ಆಧುನಿಕ ಭಾರತ ಇದನ್ನು ಅನುಸರಿಸಿತೆ? ಜಪಾನ್ ಒತ್ತು ಕೊಟ್ಟಿದ್ದು ರಾಷ್ಟ್ರಪ್ರೇಮ, ಕಾರ್ವಿುಕವಲಯದಲ್ಲಿ ಶಿಸ್ತು, ರಾಷ್ಟೀಯ ಸಂಪತ್ತುಗಳ ರಕ್ಷಣೆ ಇತ್ಯಾದಿಗಳ ಕಡೆಗೆ. ಯಾವ ವ್ಯಕ್ತಿಯ ಸಾಮರ್ಥ್ಯ, ಸದ್ಗುಣಗಳನ್ನು ಆಂಶಿಕವಾಗಿ ನಮ್ಮ ಮಗು ಪಡೆದುಕೊಂಡರೂ ಅದರ ಜನ್ಮ ಸಾರ್ಥಕವಾದಂತೆ ಎಂದು ಪಾಲಕರು ಭಾವಿಸುವರೋ ಅವರೇ ಶಿಕ್ಷಕರಾಗಬೇಕಾದವರು, ಭಾರತೀಯ ಪರಂಪರೆಯಲ್ಲಿ ಇಂಥ ಮಹಾತ್ಮರ ಪಡೆಯೇ ಇತ್ತು. ಇವರೆಲ್ಲರ ಪ್ರತಿನಿಧಿಯಾಗಿ ನಮ್ಮ ಮುಂದೆ ನಿಲ್ಲುವವರೇ ಶ್ರೀರಾಮಕೃಷ್ಣರು, ಶ್ರೀರಾಧಾಕೃಷ್ಣನ್ ಮುಂತಾದವರು. ಸರ್ವಪಲ್ಲಿ ರಾಧಾಕೃಷ್ಣನ್ನರ ಜೀವನ ವಿವರಗಳನ್ನು ನಾನು ಇಲ್ಲಿ ಕೊಡಲೆತ್ನಿಸುವುದಿಲ್ಲ. ಐ.ಸಿ.ಎಸ್ ಕೂಡಬೇಕೆಂದಿದ್ದ ಅವರನ್ನು ತತ್ವಶಾಸ್ತ್ರದೆಡೆಗೆ ಎಳೆದಿದ್ದೇ ವಿವೇಕಾನಂದರ ಸ್ಪೂರ್ತಿಯುತ ವ್ಯಕ್ತಿತ್ವ. ತಾನೇ ಸ್ಪೂರ್ತಿಗೊಳ್ಳದೆ ಯಾವ ವ್ಯಕ್ತಿಯೂ ಇನ್ನೊಬ್ಬರನ್ನು ಸ್ಪೂರ್ತಿಗೊಳಿಸಲಾರ. ಮಹಾನ್ ಚಿಂತಕ ಹೊರಾಷ್ವುನ್ರ ಮಾತಿನಂತೆ, ‘ಸ್ಪೂರ್ತಿಗೊಳಿಸದ ಶಿಕ್ಷಕನ ಬೋಧನೆ ಹಸಿ ಕಬ್ಬಿಣವನ್ನು ಸುತ್ತಿಗೆಯಿಂದ ಬಡಿದಂತೆ’. ಇಂಗ್ಲಿಷ್ ಭಾಷೆಯ ಮೇಲಿನ ಪ್ರಭುತ್ವ, ಅವರ ವಿಷಯ ವಿಶ್ಲೇಷಣಾ ರೀತಿ, ಮಂಡನಾ ಸಾಮರ್ಥ್ಯ ಇವುಗಳು ಕಬ್ಬಿಣದ ಹೃದಯದವನು ಎಂಬ ಬಿರುದು ಹೊತ್ತಿದ್ದ ಸ್ಟಾಲಿನ್ ರೂ ಕೂಡ ರಾಧಾಕೃಷ್ಣನ್ ಮಾಸ್ಕೋ ಬಿಟ್ಟು ದಿಲ್ಲಿಗೆ ಹೊರಡುವಾಗ ಕಣ್ಣೀರು ಸುರಿಸುವಂತೆ ಮಾಡಿತ್ತು. ಮೈಸೂರಿನಿಂದ ರಾಧಾಕೃಷ್ಣನ್ ಕಲ್ಕತ್ತೆಗೆ ಹೊರಟಾಗ ರೈಲ್ವೇ ಸ್ಟೇಷನ್ವರೆಗೆ ಅವರನ್ನು ಹೊತ್ತ ವಾಹನವನ್ನು ವಿದ್ಯಾರ್ಥಿಗಳು ತಾವೇ ಎಳೆದುಕೊಂಡು ಹೋಗಿದ್ದರು. ರಥದಲ್ಲಿ ದೇವರನ್ನು ಕುಳ್ಳಿರಿಸಿ ಭಕ್ತರು ಎಳೆಯುವಂತೆ. ದೇವರ ತೇರಿನಂತೆಯೇ ಸಿಂಗಾರಗೊಂಡಿತ್ತು ಅವರ ವಾಹನ. ಮುಂದೆ ಅವರ ಶಿಷ್ಯ ಎ.ಎನ್.ಮೂರ್ತಿರಾಯರು ದೆಹಲಿಯಲ್ಲಿ ತಮ್ಮ ಗುರು ಮತ್ತು ರಾಷ್ಟ್ರಾಧ್ಯಕ್ಷ ರಾಧಾಕೃಷ್ಣನ್ರನ್ನು ಭೇಟಿಯಾದಾಗ ಈ ಘಟನೆಯನ್ನು ಸ್ಮರಿಸುತ್ತ ರಾಧಾಕೃಷ್ಣನ್ ಹೇಳಿದ್ದರಂತೆ. ‘ಅಂದು ನನ್ನ ಮನಸ್ಸಿಗೆ ಬಂದ ಸಾರ್ಥಕಭಾವನೆ ಭಾರತದ ರಾಷ್ಟ್ರಾಧ್ಯಕ್ಷನಾದಾಗಲೂ ಬಂದಿರಲಿಲ್ಲ’ ಎಂದು.
ಹೌದು! ವ್ಯಕ್ತಿಯೂಬ್ಬ ಶಿಕ್ಷಕನಾದಾಗ, ಆದರ್ಶ ಶಿಕ್ಷಕನಾದಾಗ ತನ್ನ ಬೋಧನಾಕೌಶಲದಿಂದ ವಿದ್ಯಾರ್ಥಿಗಳ ಮನಗೆದ್ದು, ತನ್ನ ಪ್ರೀತಿಯಿಂದ ವಿದ್ಯಾರ್ಥಿಗಳ ಹೃದಯಗೆದ್ದು, ತನ್ನ ನಿವೃತ್ತಿಯಂದೋ ಇಲ್ಲವೆ ವರ್ಗಾವಣೆಗೊಂಡಾಗಲೋ ತನ್ನ ಪ್ರಿಯ ಶಿಷ್ಯರು ಕಣ್ಣೀರು ಹಾಕಿ ಭಾರವಾದ ಹೃದಯದಿಂದ ಬೀಳ್ಕೊಟ್ಟರೆ ಅಂಥ ಶಿಕ್ಷಕ ಮನುಷ್ಯನಾಗಿರುವುದಿಲ್ಲ. ಅವನು ನಡೆದಾಡುವ ದೇವತೆ. ಅವನಷ್ಟು ಸುಖಿ, ವಿಜಯಿ, ರಾಷ್ಟ್ರನಿರ್ವಪಕ, ಮನುಕುಲದ ದೀಪ, ಬೇರಾರೂ ಇರಲಾರರು. ಅಂಥ ಗುರುವನ್ನು ಪಡೆದವರು ಧನ್ಯರು. ಅಂಥ ಧನ್ಯರಲ್ಲಿ ನಾನೊಬ್ಬನೆಂದು ಹೆಮ್ಮೆ ಪಡುವುದೇ ಶಿಕ್ಷಕ ದಿನಾಚರಣೆಯಂದು ನಾನು ನನ್ನ ಗುರುವೃಂದಕ್ಕೆ ಸಲ್ಲಿಸುವ ಹೃತ್ಪೂರ್ವಕ ಕಾಣಿಕೆ.
ಕುಲಂ ಪವಿತ್ರಂ ಜನನೀ ಕೃತಾರ್ಥಾ |
ವಿಶ್ವಂಭರಾ ಪುಣ್ಯವತೀ ಚ ಯೇನ ||
ಎಂದು ಆರ್ಯಭಾರತ ಹಾಡಿದ್ದು ಇಂಥ ಮಹಾನ್ ವ್ಯಕ್ತಿಗಳನ್ನು ಕುರಿತೇ!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)
ಆಂಧ್ರದಲ್ಲಿ ಭೀಕರ ಪ್ರವಾಹ: ಭಾದಿತರ ಸಂಖ್ಯೆ 6.44 ಲಕ್ಷಕ್ಕೆ ಏರಿಕೆ, ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ.ಪರಿಹಾರ!