ವಿಜಯವಾಣಿ ಸುದ್ದಿಜಾಲ ಬಳ್ಳಾರಿ
ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಯಲ್ಲಿರುವ ಓಬಳಾಪುರಂನಲ್ಲಿ ಗಣಿಗಾರಿಕೆ ಪುನಾರಂಭಿಸಲು ಆಂಧ್ರದ ತೆಲುಗು ದೇಶಂ ನೇತೃತ್ವದ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಆಂಧ್ರದಲ್ಲಿ ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ವೈಎಸ್ಸಾರ್ ಕಾಂಗ್ರೆಸ್ನ ಸಿಎಂ ಜಗನ್ ಮೋಹನ್ ರೆಡ್ಡಿ ಗಣಿಗಾರಿಕೆಗೆ ನೀಡಿದ್ದ ಅನುಮೋದನೆಗೆ ತೆಲುಗುದೇಶಂ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಮತ್ತೆ ಪ್ರಮಾಣಪತ್ರ ಸಲ್ಲಿಸಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟಿಗೆ ಮಂಗಳವಾರ ಮನವಿ ಮಾಡಿದೆ.
ಓಬಳಾಪುರಂ ಮೈನಿಂಗ್ ಕಾರ್ಪೆರೇಷನ್ (ಒಎಂಸಿ) ಮತ್ತು ಇತರ ಕೆಲವು ಕಂಪನಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿವೆ. ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಂಗ್ರಹಣೆ ಮಾಡಿದ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಗಣಿಗಾರಿಕೆಯಲ್ಲಿ ತೊಡಗಿದ್ದವರು ಉಭಯ ರಾಜ್ಯಗಳ ಗಡಿಯನ್ನು ಅಳಿಸಿ ಹಾಕಿ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವ ಆರೋಪ ಕೂಡ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಆಂಧ್ರದ ಗಡಿಗಳನ್ನು ಗುರುತಿಸಲು ಆಂಧ್ರ ಸರ್ಕಾರ 2010 ರಲ್ಲಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅದರಂತೆ ಸಮೀಕ್ಷೆ ಕೈಗೊಂಡ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದವರು 2018ರಲ್ಲಿ ಸವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ನ್ಯಾಯಮೂರ್ತಿ ಹೃಷಿಕೇಷ್ ರಾಯ್ ಮತ್ತು ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಮಂಗಳವಾರ ಓಬಳಾಪುರಂನಲ್ಲಿ ಗಣಿಗಾರಿಕೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ಗಣಿ ಕಂಪನಿಗಳ ಪರ ವಾದ ಮಂಡಿಸಿದ ವಕೀಲರು, ಸರ್ವೆ ಆಫ್ ಇಂಡಿಯಾ ವರದಿಯಂತೆ ಗಾಲಿ ಜನಾರ್ದನರೆಡ್ಡಿ ಕಂಪನಿಗೆ ಗಣಿಗಾರಿಕೆಗೆ ಅನುಮತಿ ನೀಡಲು ಅಭ್ಯಂತರವಿಲ್ಲ ಎಂದು ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿರುವ ಬಗ್ಗೆ ಗಮನ ಸೆಳೆದರು.
ಕಳೆದ ಸರ್ಕಾರ ಅನುಮೋದಿಸಿದ ವರದಿಯನ್ನು ಮರು ಪರಿಶೀಲಿಸಿ, ಅಧ್ಯಯನಕ್ಕೊಳಪಡಿಸಬೇಕಿದೆ. ಅಮಿಕಸ್ ಕ್ಯೂರಿ ವರದಿಯನ್ನೂ ಪರಿಶೀಲಿಸಬೇಕಿದೆ ಎಂದು ಈಗಿನ ಆಂಧ್ರ ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ ಆಕ್ಷೇಪ ವ್ಯಕ್ತಪಡಿಸಿ ಸಂಪೂರ್ಣ ಅಧ್ಯಯನಕ್ಕೆ ಕಾಲಾವಕಾಶ ಕೋರಿದರು.
ಎರಡೂ ಕಡೆಯ ವಾದ ಆಲಿಸಿದ ನ್ಯಾಯಪೀಠ, ಆಂಧ್ರ ಸರ್ಕಾರಕ್ಕೆ ಈ ಬಗ್ಗೆ ತನ್ನ ನಿರ್ಧಾರ ತಿಳಿಸಲು 4 ವಾರ ಅವಕಾಶ ನೀಡಿ ವಿಚಾರಣೆ ಮುಂದೂಡಿತು.
ಆಂಧ್ರದಲ್ಲಿ ಭೀಕರ ಪ್ರವಾಹ: ಭಾದಿತರ ಸಂಖ್ಯೆ 6.44 ಲಕ್ಷಕ್ಕೆ ಏರಿಕೆ, ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ.ಪರಿಹಾರ!