

ಬೆಂಗಳೂರು: ಹೇಮಂತ್ ರಾವ್ ನಿರ್ದೇಶನದ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ ‘ಸಪ್ತ ಸಾಗರದಾಚೆ ಎಲ್ಲೋ : ಸೈಡ್ ಎ’ ಕಳೆದ ಸೆ. 1ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಅದಾಗಿ ಮೂರು ವಾರಗಳ ನಂತರ ತೆಲುಗುನಲ್ಲಿ ‘ಸಪ್ತ ಸಾಗರಲು ದಾಟಿ’ ಶೀರ್ಷಿಕೆಯಲ್ಲಿ ಸೆ. 22ರಂದು ತೆರೆಗೆ ಬಂದಿತ್ತು.
ಇದೊಂದು ರೊಮ್ಯಾಂಟಿಕ್ ಡ್ರಾಮಾ ಆದ ಕಾರಣ ಕೊಂಚ ಮಂದಗತಿಯ ಚಿತ್ರ ಎಂಬುದನ್ನು ಬಿಟ್ಟರೆ, ಉಳಿದೆಲ್ಲ ವಿಷಯಗಳಲ್ಲಿ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಇದರ ಸೈಡ್ ಬಿ ಟ್ರೇಲರ್ ಇಂದು ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ರಕ್ಷಿತ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.
ಕಳೆದ ಹಲವು ದಿನಗಳಿಂದ 'ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ' ರಿಲೀಸ್ ದಿನಾಂಕದಲ್ಲಿ ಸಾಕಷ್ಟು ಗೊಂದಲಗಳು ಮೂಡಿತ್ತು. ಎರಡು ಬಾರಿ ಚಿತ್ರದ ಬಿಡುಗಡೆ ದಿನಾಂಕ ಬದಲಾವಣೆಯಾಗುವ ಮುಖೇನ ಅಂತಿಮವಾಗಿ ನವೆಂಬರ್ 17 ರಂದು ಸಿನಿಪ್ರೇಕ್ಷಕರ ಎದುರು ಹಾಜರಾಗಲು ಸಿದ್ಧವಾಗಿದೆ. ಸದ್ಯ ಸೈಡ್ ಬಿ ಟ್ರೇಲರ್ಗಾಗಿ ಭಾರೀ ನಿರೀಕ್ಷೆಯಿಂದ ಕಾಯುತ್ತಿದ್ದ ರಕ್ಷಿತ್ ಅಭಿಮಾನಿಗಳಿಗೆ ಇಂದು ಟ್ರೇಲರ್ ನೋಡುವ ಭಾಗ್ಯ ಸಿಕ್ಕಿತು.
ಕಡೆಗೂ ಮನುಗೆ ಜೈಲಿನಿಂದ ಬಿಡುಗಡೆ ಸಿಕ್ತಾ? ಪ್ರಿಯಾ-ಮನು ಕಥೆ ಮುಂದುವರೆಯಲಿದ್ಯಾ? ಚಿತ್ರದ ಎರಡನೇ ನಾಯಕಿ ಚೈತ್ರಾ ಪಾತ್ರ ಮಾಡುವ ಮೋಡಿಯೇನು? ಈ ಎಲ್ಲಾ ಪ್ರಶ್ನೆಗಳಿಗೆ ಟ್ರೇಲರ್ ಮೊದಲ ಹಂತದ ಉತ್ತರವನ್ನು ನೀಡಿದೆ. ಆದರೂ ಸಂಪೂರ್ಣ ಸಿನಿಮಾವನ್ನು ನೋಡುವವರೆಗೂ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಲಭಿಸುವುದಿಲ್ಲ.
ಚಿತ್ರದಲ್ಲಿ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಜೆ.ಆಚಾರ್ ಮುಖ್ಯಭೂಮಿಕೆಯಲ್ಲಿದ್ದು, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಅವಿನಾಶ್, ರಮೇಶ್ ಇಂದಿರ, ಶರತ್ ಲೋಹಿತಾಶ್ವ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.