

ಮೈಸೂರು: ರೋಗಿಗಳನ್ನು ಗುಣಮುಖರನ್ನಾಗಿಸುವಲ್ಲಿ ಶುಶ್ರೂಷಕರ ಸೇವೆ ಪ್ರಮುಖವಾದುದು. ಅವರು ನಗುಮುಖದಿಂದ ಮಾತನಾಡಿಸಿದರೆ ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಭಿಪ್ರಾಯಪಟ್ಟರು.
ರಾಮಕೃಷ್ಣನಗರದ ಸುಯೋಗ್ ನರ್ಸಿಂಗ್ ಕಾಲೇಜು ಹಾಗೂ ಸುಯೋಗ್ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಗಳಿಂದ ಶುಕ್ರವಾರ ಆಯೋಜಿಸಿದ್ದ ಮೊದಲನೇ ವರ್ಷದ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗುವಿಕೆ ಹಾಗೂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನರ್ಸಿಂಗ್ ಸೇವೆಗೆ ದೇಶ, ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ರೋಗಿಗಳ ಮನೆಗೇ ಹೋಗಿ ಸ್ವಯಂಸೇವೆ ಸಲ್ಲಿಸುವ ಶುಶ್ರೂಷಕರ ಸಂಖ್ಯೆಯೂ ಹೆಚ್ಚಿದ್ದು, ವೈದ್ಯರಿಗೆ ಸರಿಸಮಾನ ಪಾತ್ರ ವಹಿಸುವ ಶುಶ್ರೂಷಕರ ಸೇವೆ ಅನನ್ಯವಾದುದು ಎಂದು ಬಣ್ಣಿಸಿದರು.
ಇದೇ ಸಂದರ್ಭ ಉತ್ತಮ ಅಂಕ ಗಳಿಸಿ ಸಾಧನೆ ಮಾಡಿದ ಹಿರಿಯ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಕೊಡ ಮಾಡುವ 5 ಸಾವಿರ ರೂ. ನಗದು ಬಹುಮಾನವುಳ್ಳ ಯೋಗ ಸುಧಾ ವಿದ್ಯಾರ್ಥಿ ವೇತನವನ್ನು ದೃಷ್ಟಿ ಅವರು ಪಡೆದುಕೊಂಡರು.
ಸುಯೋಗ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಕುಲಪತಿ, ಸುಯೋಗ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ರಾಮೇಗೌಡ, ಮುಖ್ಯ ಕಾರ್ಯನಿರ್ವಾಹಕ ಡಾ.ರಾಜೇಂದ್ರಪ್ರಸಾದ್, ಉಪಾಧ್ಯಕ್ಷೆ ಡಾ.ಸೀಮಾ ಯೋಗಣ್ಣ, ಟ್ರಸ್ಟಿ ಸುಧಾ ಯೋಗಣ್ಣ, ಡಾ.ಶ್ಯಾಂಸುಂದರ್, ಕಾಲೇಜಿನ ಪ್ರಾಂಶುಪಾಲೆ ನಾಗಮಣಿ, ಉಪ ಪ್ರಾಂಶುಪಾಲ ಪುನೀತ್ ಇತರರು ಇದ್ದರು.