

ಜೈಪುರ: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರ ಮುಗಿಲು ಮುಟ್ಟಿದೆ. ಇನ್ನು ಚುನಾವಣೆಯ ಹೊಸ್ತಿಲಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ.
ರಾಜಸ್ಥಾನದ ಜಲಾವರ್ಪಟನ್ನಲ್ಲಿ ನಾಮಪತ್ರ ಸಲ್ಲಿಸಿ ಸಾರ್ವಜನಿಕರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ವಸುಂಧರಾ ರಾಜೇ, ನನ್ನ ಮಗ ಮಾಡಿದ ಭಾಷಣ ಕೇಳಿ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದು ಸೂಕ್ತ ಎನ್ನಿಸುತ್ತಿದೆ. ನನ್ನ ಮಗ ಅನೇಕ ವರ್ಷಗಳಿಂದ ಸಂಸತ್ ಪ್ರತಿನಿಧಿಯಾಗಿದ್ದು, ಆತ ನನ್ನ ಬಗ್ಗೆ ಆಡಿದ ಮಾತುಗಳನ್ನು ಕೇಳಿ ನಿವೃತ್ತಿಯಾಗುವುದು ಸೂಕ್ತ ಎಂದೆನ್ನಿಸಿದೆ.
ಹಿಂದೆ ಜನ ಜಲಾವರ್ ಬರನ್ನಲ್ಲಿ ಬಂದು ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ನಾ ಮುಂದು ತಾ ಮುಂದು ಎಂಬಂತೆ ಇಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ರಾಜ್ಯವನ್ನು ಅಭಿವೃದ್ದಿ ವಿಚಾರದಲ್ಲಿ ಮತ್ತೊಮ್ಮೆ ನಂಬರ್ ಒನ್ ಮಾಡಬೇಕಿದ್ದರೆ ಜನತೆ ಬಿಜೆಪಿಗೆ ಮತ ಹಾಕಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಬೇಕು ಎಂದು ಹೇಳಿದ್ದಾರೆ.
ಇತ್ತ ಮಾಜಿ ಸಿಎಂ ವಸುಂಧರಾ ರಾಜೇ ಹಾಗೂ ಅವರ ಆಪ್ತರನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಈ ಹೇಳಿಕೆ ಹೊರಬಂದಿದ್ದು, ಬಿಜೆಪಿ ಪಾಲಿಗೆ ವರವಾಗಲಿದೆಯೋ ಅಥವಾ ಮಗ್ಗಲಮುಳ್ಳಾಗಿ ಪರಿಣಮಿಸಲಿದೆಯೋ ಕಾದು ನೋಡಬೇಕಿದೆ.