More

    ಕೆ.ಆರ್.ನಗರದಲ್ಲಿ ಶಾಸಕ ರೇವಣ್ಣ ವಿರುದ್ಧ ಎಫ್‌ಐಆರ್

    ಕೆ.ಆರ್.ನಗರ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ತಡರಾತ್ರಿ ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ಕಿಡ್ನಾೃಪ್ ಕೇಸ್ ದಾಖಲಾಗಿದೆ. ಅಲ್ಲದೇ, ರೇವಣ್ಣ ಸಂಬಂಧಿ ಸತೀಶ್‌ಬಾಬು ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಸಂಸದ ಪ್ರಜ್ವಲ್ ರೇವಣ್ಣನಿಂದ ನನ್ನ ತಾಯಿ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದಾರೆ ಎನ್ನಲಾದ ಫೋಟೋಗಳು ಬಹಿರಂಗವಾದ ಬಳಿಕ ನನ್ನ ತಾಯಿ ನಾಪತ್ತೆಯಾಗಿದ್ದು, ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ, ರೇವಣ್ಣನ ಸಂಬಂಧಿ ಸತೀಶ್‌ಬಾಬು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ತಾಲೂಕಿನ ಸಂತ್ರಸ್ತೆಯೊಬ್ಬರ ಪುತ್ರ ಕೆ.ಆರ್.ನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಗುರುವಾರ ತಡರಾತ್ರಿ ದೂರು ದಾಖಲಿಸಿದ್ದಾರೆ.

    ನನ್ನ ತಾಯಿ ಈ ಹಿಂದೆ ಹೊಳೇನರಸಿಪುರದ ಚೆನ್ನಾಂಬಿಕ ಥಿಯೇಟರ್ ಪಕ್ಕ ಇರುವ ಶಾಸಕ ಎಚ್.ಡಿ.ರೇವಣ್ಣ ಅವರ ಮನೆಯಲ್ಲಿ ಸುಮಾರು 6 ವರ್ಷ ಮನೆ ಕೆಲಸ ಮಾಡಿದ್ದರು. ಅವರ ತೋಟದಲ್ಲಿಯೂ ಕೆಲಸ ಮಾಡಿದ್ದರು. 3 ವರ್ಷಗಳ ಹಿಂದೆ ಎಚ್.ಡಿ.ರೇವಣ್ಣ ಅವರ ಮನೆಯಿಂದ ಕೆಲಸ ಬಿಟ್ಟು ಬಂದು ನಮ್ಮೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.

    ಎಂಪಿ ಚುನಾವಣಾ ಸಮಯದಲ್ಲಿ ಚುನಾವಣೆಗೆ 3-4 ದಿನಗಳ ಮುಂಚೆ ಮತ್ತೆ ಹೊಳೆನರಸಿಪುರಕ್ಕೆ ನಮ್ಮ ಊರಿನವರೇ ಆದ ನಮಗೆ ಪರಿಚಯವಿರುವ ಸತೀಶ್ ಬಾಬಣ್ಣ ಎಂಬುವವರು ನಮ್ಮ ಮನೆಗೆ ಬಂದು ಭವಾನಿ ಅಕ್ಕ ಕರೆಯುತ್ತಿದ್ದಾರೆ ಬನ್ನಿ ಎಂದು ಹೇಳಿ ನನ್ನ ತಾಯಿ ಅವರನ್ನು ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗಿ ಚುನಾವಣೆಯ ದಿನ ಬೆಳಗ್ಗೆ ವಾಪಸ್ ಕರೆತಂದು ಬಿಟ್ಟರು ಎಂದು ದೂರಿನಲ್ಲಿ ತಿಳಿಸಿದ್ದಾನೆ.

    ಪೊಲೀಸ್‌ನವರು ಬಂದರೆ ಏನು ಹೇಳಬೇಡಿ, ಅವರಿಗೆ ಸಿಗಬೇಡಿ, ನಿಮ್ಮ ಮೇಲೆ ಕೇಸ್ ಆಗುತ್ತದೆ. ಪೊಲೀಸರು ಬಂದರೆ ನನಗೆ ತಿಳಿಸಿ. ನಾನು ಬಂದು ಕರೆದುಕೊಂಡು ಹೋಗುತ್ತೇನೆ ಎಂದು ನನ್ನ ತಂದೆ-ತಾಯಿಗೆ ಹೇಳಿ ಹೋದ ಸತೀಶ್ ಬಾಬಣ್ಣ, ಏ.29ರ ರಾತ್ರಿ 9 ಗಂಟೆಗೆ ನಾವು ಮನೆಯಲ್ಲಿದ್ದಾಗ ಬಂದು ನಿಮ್ಮ ತಾಯಿ ಪೊಲೀಸಿನವರಿಗೆ ಸಿಕ್ಕಿ ಹಾಕಿಕೊಂಡರೆ ಕೇಸು ಆಗುತ್ತದೆ. ಮತ್ತೆ ನೀವು ಸಹ ಜೈಲಿಗೆ ಹೋಗಬೇಕಾಗುತ್ತದೆ. ರೇವಣ್ಣ ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ನನ್ನ ತಾಯಿಯನ್ನು ಒತ್ತಾಯ ಮಾಡಿಕೊಂಡು ಅವರ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಯಾವುದೋ ಗೊತ್ತಿಲ್ಲದ ಜಾಗದಲ್ಲಿ ಕೂಡಿಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾನೆ.

    ನನ್ನ ತಾಯಿಯನ್ನು ಎಲ್ಲಿಗೆ ಕರೆದುಕೊಂಡು ಹೋದರು ಎಂಬುದು ನಮಗೆ ಗೊತ್ತಿಲ್ಲ. ಮೇ 1ರಂದು ನಮ್ಮ ಊರಿನ ಸ್ನೇಹಿತರು ಹಾಗೂ ಕೆಲವು ಸಂಬಂಧಿಗಳು ನಮ್ಮ ಮನೆಗೆ ಬಂದು ನಿಮ್ಮ ತಾಯಿಯ ವಿಡಿಯೋಗಳು ಮೊಬೈಲ್‌ನಲ್ಲಿ ಬಂದಿವೆ. ಈ ಬಗ್ಗೆ ದೊಡ್ಡ ಕೇಸಾಗಿರುವುದಾಗಿ ತಿಳಿಸಿದರು. ನಂತರ ನಾನು ರಾತ್ರಿ ಬಾಬಣ್ಣ ಅವರಿಗೆ ಫೋನ್ ಮಾಡಿ ನನ್ನ ತಾಯಿ ಎಲ್ಲಿದ್ದಾರೆ? ನನ್ನ ತಾಯಿಯನ್ನು ವಾಪಸ್ ಕರೆದುಕೊಂಡು ಬನ್ನಿ ಎಂದು ನಾನು ಹೇಳಿದರೆ ಅವರು ಕೇಳಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ನನ್ನ ತಾಯಿಯನ್ನು ನಮ್ಮ ಮನೆಯಿಂದ ಒತ್ತಾಯ ಮಾಡಿ ಕರೆದುಕೊಂಡು ಹೋಗಿರುವ ಸತೀಶ್ ಬಾಬಣ್ಣ ಮತ್ತು ನನ್ನ ತಾಯಿಯನ್ನು ಕರೆದುಕೊಂಡು ಹೋಗಲು ಬಾಬಣ್ಣನಿಗೆ ಹೇಳಿರುವ ಎಚ್.ಡಿ.ರೇವಣ್ಣ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ನನ್ನ ತಾಯಿಯನ್ನು ಪತ್ತೆ ಮಾಡಿಕೊಡಬೇಕಾಗಿ ದೂರಿನಲ್ಲಿ ಕೋರಿದ್ದಾರೆ.

    ದೂರಿನ ಹಿನ್ನೆಲೆಯಲ್ಲಿ ಎಸ್‌ಐಟಿ ಸೂಚನೆಯಂತೆ ತನಿಖೆಗಿಳಿದ ಕೆ.ಆರ್.ನಗರ ಠಾಣೆ ಪೊಲೀಸರು ಶಾಸಕ ಎಚ್.ಡಿ.ರೇವಣ್ಣ ಅವರ ವಿರುದ್ಧ ಸೆಕ್ಷನ್ 364(ಎ) 365 ಹಾಗೂ 34ರ ಅಡಿ ಪ್ರಕರಣ ದಾಖಲಿಸಿಕೊಂಡು, ಸತೀಶ್‌ಬಾಬು ಎಂಬಾತನನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದರು., ನಂತರ ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts