

ಬೆಂಗಳೂರು: ಚಂದನವನದ ಮೋಹಕ ತಾರೆ ರಮ್ಯಾ(Actress Ramya) ಅವರು ಚಿತ್ರರಂಗ ಮತ್ತು ರಾಜಕಾರಣ ಎಂದು ಬ್ಯುಸಿಯಾಗಿದ್ದರು. ಸದ್ಯ ರಾಜಕಾರಣದಿಂದ ದೂರ ಉಳಿದು ಮತ್ತು ನಟನೆಯಿಂದ ಅಂತರ ಕಾಯ್ದುಕೊಂಡಿರುವ ರಮ್ಯಾ ಮೇಡಂ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದಾರೆ. ಇನ್ನು ಮುಂದೆ ನಟನೆಯಲ್ಲಿ ಕಾಣದಿದ್ದರು ಸಿನಿಮಾ ನಿರ್ಮಿಸುವುದಂತ ಪಕ್ಕಾ ಎನ್ನಲಾಗಿದೆ. ರಮ್ಯಾ ಪ್ರಸ್ತುತ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೋ ಸಣ್ಣ ಕ್ಲ್ಯೂ ಕೂಡ ನಟಿ ಬಿಟ್ಟುಕೊಡುವುದಿಲ್ಲ.
ಇದೀಗ ದಿಢೀರನೇ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಕ್ಕೆ ಬಂದು ನ್ಯಾಯಾಧೀಶರ ಮುಂದೆ ರಮ್ಯಾ ಮೇಡಂ ಹಾಜರಾಗಿದ್ದಾರೆ. ಅಂದ್ಹಾಗೆ 2023ರ ಜುಲೈ 21ರಂದು ಬಿಡುಗಡೆಯಾಗಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ತಮ್ಮ ಅನುಮತಿ ಇಲ್ಲದೆ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ ಎನ್ನುವ ಆರೋಪದ ಕುರಿತಾದ ವಿಚಾರಣೆಗೆ ಕೋರ್ಟ್‌ಗೆ ನಟಿ ಆಗಮಿಸಿದ್ದಾರೆ.
ರಮ್ಯಾ ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಟ್ರೇಲರ್‌ನಲ್ಲಿ ರಮ್ಯಾ ಅವರ ದೃಶ್ಯವನ್ನು ಬಳಸಿಕೊಳ್ಳಲಾಗಿತ್ತು. ರಮ್ಯಾ ಅವರು ಸುದೀರ್ಘ ಗ್ಯಾಪ್ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಆಗಲಿದ್ದಾರೆ ಎನ್ನುವ ಮಾತು ಆ ಸಮಯದಲ್ಲಿ ವೈರಲ್ ಆಗಿತ್ತು. ಇದು ಹಾಸ್ಟೆಲ್ ಹುಡುಗರ ಬೇಕಾಗಿದ್ದಾರೆ ಚಿತ್ರಕ್ಕೆ ಪ್ರಚಾರವಾಗಿಯೂ ಪರಿಣಮಿಸಿತ್ತು.
ಆದರೆ ಟ್ರೇಲರ್ ರಿಲೀಸ್ ಬಳಿಕ ರಮ್ಯಾ ಅವರು ಅನುಮತಿ ಇಲ್ಲದೆ ತಮ್ಮ ದೃಶ್ಯವನ್ನು ಬಳಿಸಿದ್ದಾರೆ ಎಂದು ಆರೋಪಿಸಿ ಲೀಗಲ್ ನೋಟಿಸ್ ಕಳುಹಿಸಿ 1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು ಅನುಮತಿ ಇಲ್ಲದೇ ಟ್ರೇಲರ್‌ನಲ್ಲಿ ರಮ್ಯಾ ಅವರ ದೃಶ್ಯಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಈ ಬಗ್ಗೆ ಯಾವುದೇ ಒಪ್ಪಂದ, ಅಗ್ರಿಮೆಂಟ್ ಆಗಿರಲಿಲ್ಲ ಎಂದು ಅವರು ಕೋರ್ಟ್‌ಗೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ರಮ್ಯಾ ಅವರು ಚಿತ್ರದಲ್ಲಿನ ತಮ್ಮ ದೃಶ್ಯವನ್ನು ತೆಗೆದುಹಾಕುವಂತೆ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳಿಸಿದ್ದರು. ಇದಲ್ಲದೆ ಚಿತ್ರದ ರಿಲೀಸ್ ಆಗದಂತೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಕೋರ್ಟ್ ತುರ್ತು ವಿಚಾರಣೆಯನ್ನು ಮಾಡಿ ರಮ್ಯಾ ಅವರ ಅರ್ಜಿಯನ್ನು ವಜಾ ಮಾಡಿತ್ತು. ಇದರಿಂದ ಸಿನಿಮಾ ಸರಾಗವಾಗಿ ಬಿಡುಗಡೆ ಆಗಿತ್ತು. ಇದೀಗ ಈ ಪ್ರಕರಣದ ವಿಚಾರಣೆಗೆ ನಟಿ ರಮ್ಯಾ ಅವರು ವಾಣಿಜ್ಯ ಕೋರ್ಟ್‌ಗೆ ಆಗಮಿಸಿದ್ದಾರೆ. ಸೂಕ್ತ ದಾಖಲೆಗಳೊಂದಿಗೆ ತಮ್ಮ ವಕೀಲರ ಜತೆ ರಮ್ಯಾ ಕೋರ್ಟ್ ಆಗಮಿಸಿದ್ದಾರೆ ಎಂದು ವರದಿಯಾಗಿದೆ.