

ಇತ್ತೀಚೆಗೆ ನಟಿ ಸಮಂತಾ ಚಿತ್ರರಂಗದಿಂದ ಬ್ರೇಕ್ ಪಡೆದು ಸ್ನಾಯು ಸಂಬಂಧಿ ಮಯೋಸಿಟಿಸ್ಗೆ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳುವುದಾಗಿ ಹೇಳಿಕೊಂಡಿದ್ದರು. ಸಮಂತಾ ಹಾಗೂ ವಿಜಯ್ ದೇವರಕೊಂಡ ಮುಖ್ಯಭೂಮಿಕೆಯಲ್ಲಿರುವ "ಖುಷಿ' ಸಿನಿಮಾದ ಚಿತ್ರೀಕರಣದ ಬಳಿಕ ನಟಿ ಚಿತ್ರರಂಗದಿಂದ ದೂರವಿದ್ದರು. ಆ ನಂತರ ಸ್ವಲ್ಪ ಸಮಯ ಸದ್ಗುರು ಅವರ ಇಶಾ ಫೌಂಡೇಷನ್ನಲ್ಲಿ ಧ್ಯಾನ ಮಾಡುತ್ತಿರುವ ಹಾಗೂ ಬಾಲಿಯಲ್ಲಿ ಟ್ರಿಪ್ ಹೋಗಿರುವ ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.
ಇತ್ತೀಚೆಗಷ್ಟೆ "ಖುಷಿ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲೂ ಸಮಂತಾ ಕಾಣಿಸಿಕೊಂಡಿರಲಿಲ್ಲ. ಆದರೆ, ಈಗ "ಖುಷಿ' ಸಿನಿಮಾದ ಮ್ಯೂಸಿಕಲ್ ಕಾನ್ಸರ್ಟ್ನಲ್ಲಿ ಭಾಗಿಯಾಗುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈ ಹಿಂದೆ "ಯಶೋದಾ' ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಸಮಂತಾ ಅನಾರೋಗ್ಯದ ನಡುವೆ ಭಾಗಿಯಾಗಿ ಚಿತ್ರತಂಡದ ಜತೆ ನಿಂತಿದ್ದರು. ಇದೀಗ "ಖುಷಿ' ಚಿತ್ರದ ಸಂಗೀತ ಕಾರ್ಯಕ್ರಮದಲ್ಲೂ ಭಾಗಿಯಾಗಿ ನಾಯಕ ವಿಜಯ್ ಜತೆ ಕುಣಿದು ಸಂಭ್ರಮಿಸಿದ್ದಾರೆ. ಸದ್ಯ ಈ ಜೋಡಿಯ ಡಾನ್ಸ್ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರ ಕೆಮಿಸ್ಟ್ರಿ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಹಾಗೂ ಗಾಯಕ ಸಿಡ್ ಶ್ರೀರಾಮ್ ಕೂಡ ಹಾಡಿ ಮನರಂಜಿಸಿದರು. ಇನ್ನು, ಶಿವ ನಿರ್ವಾಣ ನಿರ್ದೇಶನದ "ಖುಷಿ' ಸಿನಿಮಾ ಸೆಪ್ಟೆಂಬರ್ 1ಕ್ಕೆ ಪ್ಯಾನ್ ಇಂಡಿಯಾ ರಿಲೀಸ್ ಆಗಲು ರೆಡಿಯಾಗಿದೆ. ಇನ್ನೊಂದೆಡೆ ನಟಿ ಸಮಂತಾ "ಖುಷಿ' ಪ್ರಚಾರ ಕಾರ್ಯಗಳು ಮುಗಿದ ಬಳಿಕ ಚಿಕಿತ್ಸೆ ಪಡೆಯಲು ತೆರಳಲಿದ್ದಾರೆ ಎನ್ನಲಾಗಿದೆ.
-ಏಜೆನ್ಸೀಸ್