ಟೋಬಿಯ ಮೂಗುತಿ ಕಥೆ ; ಪಾತ್ರಕ್ಕಾಗಿ ಮೂಗು ಚುಚ್ಚಿಸಿಕೊಂಡ ರಾಜ್​ ಬಿ. ಶೆಟ್ಟಿ

Toby-3
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬಾಸಿಲ್​ ನಿರ್ದೇಶಿಸಿರುವ, ರಾಜ್​ ಬಿ.ಶೆಟ್ಟಿ ಅಭಿನಯದ ಸಿನಿಮಾ "ಟೋಬಿ', ಕೆಲವೇ ದಿನಗಳಲ್ಲಿ ರಿಲೀಸ್​ಗೆ ರೆಡಿಯಿದೆ. ಈಗಾಗಲೇ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು "ಟೋಬಿ' ಎಂಬ ಅಪರೂಪದ, ಅತಿರೇಕದ, ವಿಲಕ್ಷಣ ಪಾತ್ರದ ಪರಿಚಯವೂ ಆಗಿದೆ. ಅಷ್ಟರ ಮಟ್ಟಿಗೆ "ಟೋಬಿ' ಟ್ರೇಲರ್​ ಮೂಲಕವೇ ಜನರನ್ನು ಹಿಡಿದಿಟ್ಟಿದ್ದಾನೆ. ನಾಯಕ ರಾಜ್​ ಬಿ. ಶೆಟ್ಟಿ ಈ ಪಾತ್ರಕ್ಕಾಗಿ ಮಾನಸಿಕವಾಗಿ, ದೈಹಿಕವಾಗಿ ದಂಡಿಸಿಕೊಂಡಿದ್ದಾರೆ.

ಪಾತ್ರದ ಬಗ್ಗೆ ಅವರು, "ಈ ರೀತಿಯ ಪಾತ್ರಗಳನ್ನು ನಾವು ನಿಜ ಜೀವನದಲ್ಲಿ ತುಂಬ ದೂರದಿಂದ ನೋಡುತ್ತೇವೆ. ಹತ್ತಿರದಿಂದ ನೋಡಿದರೂ, ಅವರು ನಮ್ಮೊಂದಿಗೆ ಅಂತರಂಗದಿಂದ ಮಾತನಾಡುವುದಿಲ್ಲ. ಸೈಕಲಾಜಿಕಲಿ ಅವರು ಯಾವ ರೀತಿ ಮಾತನಾಡಬಹುದು, ನಿಲ್ಲಬಹುದು, ಓಡಾಡಬಹುದು… ಬರೆಯುವಾಗಲೇ ಇದನ್ನೆಲ್ಲ ಸಿದ್ಧತೆ ಮಾಡಿಕೊಳ್ಳುತ್ತೇನೆ. ಪಾತ್ರದ ಬಗ್ಗೆ ಡೌಟ್​ಗಳಿದ್ದರೆ ಬರವಣಿಗೆಯಲ್ಲೇ ಗೊತ್ತಾಗುತ್ತದೆ. "ಟೋಬಿ' ತುಂಬ ತೀಕ್ಷ್ಣ ಮತ್ತು ಭಿನ್ನ ಪಾತ್ರ. ಅದು ಹೇಗೆ ಅಂತ ಸಿನಿಮಾದಲ್ಲಿ ನೋಡಬೇಕು' ಎಂದು ಮಾಹಿತಿ ನೀಡುತ್ತಾರೆ ರಾಜ್​.

ಅಂದಹಾಗೆ "ಟೋಬಿ'ಗಾಗಿ ಮೂಗು ಚುಚ್ಚಿಸಿಕೊಂಡಿರುವ ರಾಜ್​, "ಚಿತ್ರದಲ್ಲಿ ಮೂಗುತಿಯೇ ಒಂದು ಪಾತ್ರ. ದೊಡ್ಡ ಪಾತ್ರವಾದ ಕಾರಣ ಗೌರವ ನೀಡಬೇಕಿತ್ತು. ಆರ್ಟಿಫಿಶಿಯಲ್​ ಅಂಟಿಸಿದ್ದರೆ ಬೀಳುವ ಆತಂಕವಿತ್ತು. ಜತೆಗೆ ಭಾವನಾತ್ಮಕವಾಗಿ ನನಗೂ ಪಾತ್ರಕ್ಕೂ ಸಂಬಂಧವಿರುತ್ತಿರಲಿಲ್ಲ. ಹೀಗಾಗಿಯೇ ಮೂಗು ಚುಚ್ಚಿಸಿಕೊಂಡೆ. ಬಾಯಿ ಅಳ್ಳಾಡಿಸಿದರೆ ಸಾಕು ಮೂಗು ನೋಯುತ್ತಿತ್ತು. ಆ್ಯಕ್ಷನ್​ ಸಮಯದಲ್ಲಂತೂ ಸಾಕಷ್ಟು ನೋವು ತಿಂದಿದ್ದೇನೆ. ಮೂಗು ಚುಚ್ಚಿಸಿಕೊಂಡ ಗಾಯ ಮೂರು ದಿನಗಳಲ್ಲಿ ಒಣಗುತ್ತೆ ಅಂತಂದುಕೊಂಡರೆ, ಧೂಳಿನ ನಡುವೆ, ಆಗಾಗ ಮೂಗುತಿ ತೆಗೆಯುವುದು ಹಾಕುವುದು ಮಾಡುತ್ತಾ ಗಾಯವಾಗಿತ್ತು. ಸುಲಭವಾಗಬೇಕಿತ್ತು, ಆದರೆ ಕಷ್ಟವಾಯಿತು' ಎಂದು ನಗುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net