

ಮುಂಬೈ: ದೀಪಾವಳಿ ಸಂಭ್ರಮವಾದ್ದರಿಂದ ಈಗೆರಡು ದಿನಗಳಿಂದ ದೇಶದ ಹಲವೆಡೆ ಎಲ್ಲೆಂದರಲ್ಲಿ ಪಟಾಕಿ ಸದ್ದು ಕೇಳಿಸುತ್ತಿರುತ್ತದೆ. ಆದರೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಸಲ್ಮಾನ್ ಖಾನ್, ಇದು ಅಪಾಯಕಾರಿ ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಿದ ನಟ, ಇದು ಅಪಾಯಕಾರಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಕಿವಿಮಾತನ್ನೂ ಹೇಳಿದ್ದಾರೆ.
ಮಹಾರಾಷ್ಟ್ರದ ಮುಂಬೈನ ಮಾಲೇಗಾಂವ್ನ ಥಿಯೇಟರ್ವೊಂದರಲ್ಲಿ ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಸಿನಿಮಾ ವೀಕ್ಷಣೆ ವೇಳೆ ಅವರ ಅಭಿಮಾನಿಗಳು ಪಟಾಕಿಯನ್ನು ಸಿಡಿಸಿದ್ದರು. ಅಷ್ಟಕ್ಕೂ ಟಾಕೀಸ್ ಒಳಗೇ ಈ ಪಟಾಕಿಗಳನ್ನು ಸಿಡಿಸಿದ್ದರಿಂದ ಸಲ್ಮಾನ್ ಖಾನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಟೈಗರ್ 3 ಪ್ರದರ್ಶನ ವೇಳೆ ಥಿಯೇಟರ್ ಒಳಗೇ ಪಟಾಕಿ ಸಿಡಿಸಿದ್ದು ತಿಳಿಯಿತು. ಇದು ಅಪಾಯಕಾರಿ, ನಮ್ಮನ್ನು ಹಾಗೂ ಇತರರನ್ನೂ ಅಪಾಯಕ್ಕೆ ಒಡ್ಡದೆ ಸುರಕ್ಷಿತವಾಗಿ ಸಿನಿಮಾ ವೀಕ್ಷಿಸೋಣ ಎಂಬುದಾಗಿ ಅವರು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.
ನಿರ್ದೇಶಕ ರಾಮ್ಗೋಪಾಲ್ ವರ್ಮಾ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾವು ಹುಚ್ಚರಲ್ಲ ಅಂದುಕೊಂಡಿದ್ದೇನೆ. ಇದು ಸುರಕ್ಷಿತ ಅಲ್ಲವೇ ಅಲ್ಲ. ಇನ್ನೊಬ್ಬರನ್ನು ಅಪಾಯಕ್ಕೀಡಾಗಿಸುವ ಇಂಥವರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.