ಸುಶಾಂತ್​ ಆತ್ಮಹತ್ಯೆ: ಸಲ್ಮಾನ್​ ಖಾನ್​ ವಿಚಾರಣೆ ಇಲ್ಲ

Salman - Sushant - Final
Published on

ಸುಶಾಂತ್​ ಸಿಂಗ್​ ನಿಧನರಾಗಿ ಒಂದು ತಿಂಗಳಾಗಿದೆ. ಈ ಒಂದು ತಿಂಗಳಲ್ಲಿ ಸುಶಾಂತ್​ ಸಾವಿಗೆ ಕಾರಣವೇನಿರಬಹುದು ಎಂದು ಮುಂಬೈ ಪೊಲೀಸ್​, ಎಲ್ಲಾ ಆಂಗಲ್​ಗಳಿಂದಲೂ ತನಿಖೆ ನಡೆಸುತ್ತಲೇ ಬಂದಿದ್ದಾರೆ. ಇದುವರೆಗೂ 30ಕ್ಕೂ ಹೆಚ್ಚು ಜನರ ವಿಚಾರಣೆಯಾಗಿದೆ. ಈ ಪೈಕಿ ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ, ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ, ಟ್ಯಾಲೆಂಟ್​ ಮ್ಯಾನೇಜರ್​ ರೇಶ್ಮಾ ಶೆಟ್ಟಿ ಮುಂತಾದವರು ಸೇರಿದ್ದಾರೆ.

ಈ ಮಧ್ಯೆ, ಸಲ್ಮಾನ್​ ಖಾನ್​ ಅವರ ಹೆಸರು ಸಹ ಈ ಕೇಸ್​ನಲ್ಲಿ ಥಳುಕು ಹಾಕಿಕೊಂಡಿದ್ದರಿಂದ, ಅವರ ವಿಚಾರಣೆಯನ್ನೂ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ಸುದ್ದಿ ಸುಳ್ಳಾಗಿದೆ. ಸಲ್ಮಾನ್​ ಖಾನ್​ ಅವರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸುಶಾಂತ್​ ಆತ್ಮಹತ್ಯೆಯಲ್ಲಿ ಸಲ್ಮಾನ್​ ಅವರ ನೇರ ಪಾತ್ರ ಇಲ್ಲಿದಿದ್ದರೂ, ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಕಳೆದ ಒಂದು ತಿಂಗಳನಿಂದ ಸಾಕಷ್ಟು ಚರ್ಚೆಯಾಗಿದೆ. ಪ್ರಮುಖವಾಗಿ ಸುಶಾಂತ್​ ಮತ್ತು ಸೂರಜ್​ ಪಂಚೋಲಿ ನಡುವೆ ಒಂದು ಪಾರ್ಟಿಯಲ್ಲಿ ಕಿತ್ತಾಟವಾಗಿತ್ತಂತೆ. ಈ ವಿಷಯದಲ್ಲಿ ಸೂರಜ್​ ಪರವಾಗಿ ನಿಂತ ಸಲ್ಮಾನ್​, ತಮ್ಮ ಪವರ್​ ಉಪಯೋಗಿಸಿ, ಸುಶಾಂತ್​ಗೆ ಕೆಲಸ ಇಲ್ಲದಂತೆ ಮಾಡಿದರು ಮತ್ತು ಇದರಿಂದ ಬೇಸರಗೊಂಡು ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ.

ಆದರೆ, ಈ ಕುರಿತಾಗಿ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳಿಲ್ಲ. ಇವೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಕೇಳಿ ಬರುತ್ತಿರುವ ವಿಷಯಗಳಾದ್ದರಿಂದ, ಇದನ್ನು ಗಂಭೀರವಾಗಿ ಪರಿಗಣಿಸುವುದು ಕಷ್ಟ ಎಂಬ ಕಾರಣಕ್ಕೆ, ಸಲ್ಮಾನ್​ ಖಾನ್​ ಅವರನ್ನು ವಿಚಾರಣೆಗೆ ಮುಂಬೈ ಪೊಲೀಸರು ಕರೆಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಪೊಲೀಸರು ಈ ವಿಷಯವಾಗಿ ಸಲ್ಮಾನ್​ ಖಾನ್​ ಅವರನ್ನು ವಿಚಾರಣೆಗೆ ಒಳಪಡಿಸದಿದ್ದರೂ, ಸಲ್ಮಾನ್​ ಅವರನ್ನು ಕಳೆದ ಒಂದು ತಿಂಗಳಿನಿಂದ ನೆಟ್ಟಿಗರು ಸಾಕಷ್ಟು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಸುಶಾಂತ್​ ಅವರ ಬಿಹಾರದ ಅಭಿಮಾನಿಗಳು, ಸಲ್ಮಾನ್​ ಅವರ ಪ್ರತಿಕೃತಿಯನ್ನು ದಹಿಸಿ, ಅವರ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net