

ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ಪನ್ವೇಲ್ನ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಪೋಸ್ಟ್ ಮಾಡಿದ್ದರು. ಈಗ ಆ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ನೆಟ್ಟಿಗರು ಇದನ್ನೊಂದು ನಾಟಕ ಎಂದು ಕರೆದಿದ್ದಾರೆ.
ಲಾಕ್ಡೌನ್ ಶುರುವಾದಾಗಿನಿಂದಲೂ ಪನ್ವೇಲ್ನ ತಮ್ಮ ಫಾರ್ಮ್ ಹೌಸ್ನಲ್ಲಿ ಬೀಡುಬಿಟ್ಟಿರುವ ಸಲ್ಮಾನ್, ಕೆಲವು ದಿನಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುವ ಮತ್ತು ಮೈಯೆಲ್ಲಾ ಕೆಸರಾಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೋಗೆ, ‘ಜೈ ಜವಾನ್ ಜೈ ಕಿಸಾನ್’ ಎಂಬ ಕ್ಯಾಪ್ಶನ್ ನೀಡಿದ್ದ ಅವರು, ಈ ಮೂಲಕ ತಾವು ಕೃಷಿಯಲ್ಲಿ ತೊಡಗಿಸಿಕೊಂಡಿರುವುದಾಗಿ ಸೂಚಿಸಿದ್ದರು.
ಸಲ್ಮಾನ್ ನಿಜಕ್ಕೂ ಕೃಷಿಯಲ್ಲಿ ಆಸಕ್ತರಾಗಿದ್ದಾರಾ ಅಥವಾ ಟೈಂಪಾಸ್ಗೆಂದು ಕೃಷಿ ಮಾಡಿದರಾ ಎಂಬ ವಿಷಯ ಗೊತ್ತಿಲ್ಲ. ಆದರೆ, ಈ ಫೋಟೋಗಳನ್ನು ನೋಡಿರುವ ನೆಟ್ಟಿಗರು ಮಾತ್ರ ಸುಮ್ಮನೆ ಇಲ್ಲ. ಫೋಟೋವೊಂದರಲ್ಲಿ ಸಲ್ಮಾನ್ ಮೈ ಮೇಲೆ ಕೆಸರನ್ನು ನೋಡಿರುವ ಕೆಲವರು, ಇದನ್ನು ಯಾರೋ ಫೋಟೋಗಾಗಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ಕೆಲವರು, ಯಾವ ರೈತ ತನ್ನ ಹೊಲದಲ್ಲಿ ಕುಳಿತುಕೊಂಡು ಈ ತರಹ ಫೋಟೋ ಶೂಟ್ ಮಾಡಿಸ್ಕೋತಾನೆ ಹೇಳಿ ಎಂದು ಪ್ರಶ್ನೆ ಕೇಳಿದರೆ, ಇನ್ನೊಬ್ಬರು, ತಾನು ಇದವುರೆಗೂ ಹಲವು ರೈತರನ್ನು ನೋಡಿದ್ದು, ಯಾರು ಸಹ ಮುಖಕ್ಕೆ ಕೆಸರು ಹೆಚ್ಚಿಕೊಳ್ಳುವುದಿಲ್ಲ, ಸಲ್ಮಾನ್ ಮಾತ್ರ ಫೋಟೋಗಾಗಿ ಮುಖಕ್ಕೆ ಕೆಸರು ಹಚ್ಚಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಇದನ್ನೂ ಓದಿ: ಲವ್ ಮಾಕ್ಟೇಲ್ ತೆಲುಗು ರೀಮೆಕ್ನಲ್ಲಿ ತಮನ್ನಾ
ಒಟ್ಟಿನಲ್ಲಿ ಸಲ್ಮಾನ್ ಖಾನ್ ಇನ್ನೊಂದು ವಿವಾದಕ್ಕೆ ಕಾರಣವಾಗಿದ್ದಾರೆ. ಇತ್ತೀಚೆಗಷ್ಟೇ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ವಿಚಾರವಾಗಿ, ಸೋಷಿಯಲ್ ಮೀಡಿಯಾದಲ್ಲಿ ಸಲ್ಮಾನ್ ಪರೋಕ್ಷ ಕಾರಣ ಎಂದು ಸುದ್ದಿಯಾಗಿ, ಆ ಕುರಿತು ಸಾಕಷ್ಟು ಛೀಮಾರಿಗೆ ಒಳಗಾಗಿದ್ದರು. ಈಗ ಮತ್ತೊಮ್ಮೆ ಫೋಟೋವೊಂದರ ಕಾರಣ, ಮತ್ತೊಮ್ಮೆ ವಿಲನ್ ಆಗಿದ್ದಾರೆ. ಈ ತರಹ ಅದೆಷ್ಟು ವಿವಾದಗಳನ್ನು ಸಲ್ಮಾನ್ ಮೈಮೇಲೆ ಎಳೆದುಕೊಂಡಿದ್ದಾರೋ ಲೆಕ್ಕ ಇಟ್ಟವರಿಲ್ಲ.