ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸಿದ ರೇಖಾ!

Rekha - Final
Published on

ತಮಗೆ ಕರೊನಾದಿಂದ ಯಾವುದೇ ಸಮಸ್ಯೆ ಆಗದಿದ್ದರೆ ಸಾಕು, ಆದಷ್ಟು ಬೇಗ ಒಂದು ಪರೀಕ್ಷೆ ಮಾಡಿಸಿಕೊಂಡು ಖಾತ್ರಿ ಮಾಡಿಕೊಳ್ಳಬೇಕು ಎಂದು ಜನ ಕಾಯುತ್ತಿರುವಾಗ, ಬಾಲಿವುಡ್ ನಟಿ ರೇಖಾ ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ಪರೀಕ್ಷೆ ಮಾಡುವುದಕ್ಕೆ ಬಂದ ಅಧಿಕಾರಿಗಳನ್ನು ವಾಪಸ್ಸು ಕಳಿಸಿದ್ದಾರೆ.

ರೇಖಾ ಅವರ ಮನೆಯ ಸೆಕ್ಯುರಿಟಿಯವರಿಗೆ ಸಿಬ್ಬಂದಿಯವರಿಗೆ ಕರೊನಾ ಕಾಣಿಸಿಕೊಂಡಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಅಷ್ಟೇ ಅಲ್ಲ, ರೇಖಾ ಅವರ ಮನೆಯನ್ನೂ ಸೀಲ್‍ಡೌನ್ ಮಾಡಲಾಗಿದೆ. ಈ ಮಧ್ಯೆ, ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ನಿಯಮಗಳ ಪ್ರಕಾರ, ಸೀಲ್‍ಡೌನ್ ಆಗಿರುವ ಮನೆಯವವರು ಸಹ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆದರೆ, ರೇಖಾ ಮಾತ್ರ ತಾವು ಮನೆಯಲ್ಲೇ ಕ್ವಾರಂಟೈನಲ್ಲಿ ಇರುವುದರಿಂದ, ಪರೀಕ್ಷೆಯ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ಬಿಎಂಸಿ ಅಧಿಕಾರಿಗಳು, ಪರೀಕ್ಷೆ ಮಾಡುವುದಕ್ಕೆ ಮನೆಗೆ ಬರುವುದಾಗಿ ರೇಖಾ ಅವರಿಗೆ ತಿಳಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿರುವ ಅವರ ಮ್ಯಾನೇಜರ್ ಫರ್ಜಾನಾ, ಬರುವುದಕ್ಕಿಂತ ಮುಂಚೆ ಒಮ್ಮೆ ಕಾಲ್ ಮಾಡಿಕೊಂಡು ಬನ್ನಿ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಅದಕ್ಕೆ ಪ್ರತಿಯಾಗಿ ಅಧಿಕಾರಿಗಳು ಫೋನ್ ಮಾಡಿದಾಗ, ರೇಖಾ ಅವರು ಹೋಂ ಕ್ವಾರಂಟೈನ್‍ನಲ್ಲಿ ಇರುವುದರಿಂದ, ಅವರಿಗೆ ಕೋವಿಡ್ ಟೆಸ್ಟ್‍ನ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಇದನ್ನು ಲೆಕ್ಕಿಸದೆ, ಅಧಿಕಾರಿಗಳು ನೇರವಾಗಿ ಅವರ `ಸೀ ಸ್ಪ್ರಿಂಗ್ಸ್' ಮನೆಗೆ ಹೋದ ಸಂದರ್ಭದಲ್ಲಿ, ರೇಖಾ ಮಾತ್ರ ತಾವು ಪರೀಕ್ಷೆಗೆ ಒಳಗಾಗುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಅಷ್ಟೇ ಅಲ್ಲ, ಅಧಿಕಾರಿಗಳಿಗೆ ಬಾಗಿಲು ತೆಗೆಯದೆ, ಅವರನ್ನು ವಾಪಸ್ಸು ಕಳುಹಿಸಲಾಗಿದೆ. ರೇಖಾ ಅವರು ಯಾರ ಜತೆಯೂ ಸಂಪರ್ಕದಲ್ಲಿ ಇಲ್ಲದೇ ಇರುವುದರಿಂದ, ಅವರಿಗೆ ಏನೂ ಆಗಿಲ್ಲ ಮತ್ತು ಕೋವಿಡ್‍ನ ಯಾವುದೇ ಸಿಂಪ್ಟಮ್‍ಗಳು ಇಲ್ಲ ಎಂದು ಅವರ ಮ್ಯಾನೇಜರ್ ಫರ್ಜಾನಾ ಹೇಳಿ ಕಳುಹಿಸಿದ್ದಾರೆನ್ನಲಾಗಿದೆ.

ಆದರೂ ನಿಯಮಗಳ ಪ್ರಕಾರ ರೇಖಾ ಅವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು ಎಂದು ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಒಪ್ಪಿರುವ ರೇಖಾ, ಆದಷ್ಟು ಬೇಗ ತಮ್ಮ ಸಿಬ್ಬಂದಿಯೊಂದಿಗೆ ಬೇರೆಡೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ನಂತರ ವರದಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net