ನೋ ಎಂದಿದ್ದ ಅನೂಷ್ಕಾ, ಈಗ ಎಸ್​ ಎನ್ನುತ್ತಿರುವುದೇಕೆ? ಇಲ್ಲಿದೆ ಉತ್ತರ

Nishabdham - Final
Published on

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಅನೂಷ್ಕಾ ಶೆಟ್ಟಿ ಮತ್ತು ಮಾಧವನ್​ ಅಭಿನಯದ 'ನಿಶ್ಯಬ್ಧಂ' ಚಿತ್ರವು ಏಪ್ರಿಲ್​ 2ಕ್ಕೆ ಬಿಡುಗಡೆಯಾಗಬೇಕಿತ್ತು. ಈ ಬಗ್ಗೆ ಸಾಕಷ್ಟು ಪ್ರಚಾರ ಸಹ ಆಗಿತ್ತು. ಆದರೆ, ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ, ಚಿತ್ರದ ಬಿಡುಗಡೆ ಅನಿಧಿರ್ಷ್ಟಾವಧಿ ಮುಂದಕ್ಕೆ ಹೋಯಿತು.

ಈ ಮಧ್ಯೆ 'ನಿಶ್ಯಬ್ಧಂ' ಚಿತ್ರವನ್ನು ಓವರ್ ದಿ ಟಾಪ್​ (ಓಟಿಟಿ)ಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಮಾತುಕಥೆ ಇತ್ತಾದರೂ, ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಿ ಎಂದು ಅನೂಷ್ಕಾ ಸೇರಿದಂತೆ ಹಲವರು ಹೇಳಿದ್ದರಿಂದ, ಚಿತ್ರತಂಡ ಆ ಐಡಿಯಾ ಕೈಬಿಟ್ಟಿತ್ತು. ಇದೀಗ, 'ನಿಶ್ಯಬ್ಧಂ' ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡದವರ ಜತೆಗೆ ಅನೂಷ್ಕಾ ಮಾತಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಓಟಿಟಿ ಬೇಡ ಅಂದಿದ್ದ ಅನೂಷ್ಕಾ ಅವರೇ ಅದೇ ವೇದಿಕೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಹೇಳುತ್ತಿರುವುದು ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಈಗಾಗಲೇ ಚಿತ್ರದ ಬಿಡುಗಡೆ ದಿನಾಂಕದಿಂದ ಮೂರು ತಿಂಗಳುಗಳಾಗಿವೆ. ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವುದಕ್ಕೆ ಅದೆಷ್ಟು ಸಮಯ ಬೇಕಾಗುತ್ತದೋ ಎಂದು ಯಾರಿಗೂ ಗೊತ್ತಿಲ್ಲ. ಹಾಗಿರುವಾಗ, ಎಲ್ಲಾ ತಯಾರಾಗಿರುವ ಚಿತ್ರವನ್ನು ಸುಮ್ಮನೇ ಸ್ಟೇಲ್​ ಮಾಡುವ ಬದಲು, ಓಟಿಟಿಯಲ್ಲಾದರೂ ಬಿಡುಗಡೆ ಮಾಡಿದರೆ, ಆಗ ಬಹಳ ದಿನಗಳಿಂದ ಹೊಸ ಚಿತ್ರಗಳನ್ನು ನೋಡದ ತೆಲುಗು ಪ್ರೇಕ್ಷಕರಿಗೆ ಹೊಸ ಚಿತ್ರ ನೋಡಿದಂತಾಗುತ್ತದೆ ಎಂಬುದು ಅನೂಷ್ಕಾ ಅವರ ಅಭಿಪ್ರಾಯ. ಹಾಗಾಗಿಯೇ, ನಿರ್ಮಾಪಕರಿಗೆ ನಿಮಗೆ ಯಾವುದು ಅನುಕೂಲವೋ ಅದನ್ನು ಮಾಡಿ ಎಂದು ಹೇಳಿದ್ದಾರಂತೆ.

ಇದಕ್ಕೂ ಮುನ್ನವೇ ಅಮೇಜಾನ್​ ಪ್ರೈಮ್​, 'ನಿಶ್ಯಬ್ಧಂ' ಚಿತ್ರದ ಹಕ್ಕುಗಳನ್ನು ಖರೀದಿಸುವುದಕ್ಕೆ ಮುಂದೆ ಬಂದಿತ್ತು. ಆದರೆ, ಯಾವಾಗ ಚಿತ್ರತಂಡದವರು ನಿರಾಸಕ್ತಿ ತೋರಿಸಿದರೋ, ಆಗ ಮುಂದುವರೆಯಲಿಲ್ಲ. ಈಗಲೂ ಅಮೇಜಾನ್​ ಪ್ರೈಮ್​, ಚಿತ್ರದ ಹಕ್ಕುಗಳನ್ನು ಖರೀದಿಸುವುದಕ್ಕೆ ಉತ್ಸುಕವಾಗಿದೆ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಅಮೇಜಾನ್​ ಪ್ರೈಮ್​ನಲ್ಲಿ ಹಲವು ಭಾಷೆಯ ಹೊಸ ಚಿತ್ರಗಳು ಪ್ರೀಮಿಯರ್​ ಆಗಿವೆ. ಆದರೆ, ತೆಲುಗಿನಿಂದ ಯಾವೊಂದು ದೊಡ್ಡ ಚಿತ್ರದ ಪ್ರೀಮಿಯರ್​ ಸಹ ಆಗಿಲ್ಲ. ಹಾಗಾಗಿಯೇ, 'ನಿಶ್ಯಬ್ಧಂ' ಪ್ರೀಮಿಯರ್​ ಮಾಡುವುದಕ್ಕೆ ಅಮೇಜಾನ್​ ಪ್ರೈಂ ಎದುರು ನೋಡುತ್ತಿದೆ.

ಎಲ್ಲಾ ಅಂದುಕೊಂಡಂತೆ ಆದರೆ, ಆಗಸ್ಟ್​ನಲ್ಲಿ 'ನಿಶ್ಯಬ್ಧಂ' ಚಿತ್ರವು ಅಮೇಜಾನ್​ ಪ್ರೈಂನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾದರೆ ಆಶ್ಚರ್ಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net