ಅದಮ್ಯ ದೇಶಭಕ್ತಿಯ ಚಿಲುಮೆ ವೀರ ಸಾವರ್ಕರ್

vera savrkar
Published on
ರಾಮಾಯಣದಲ್ಲಿ ರಾವಣ ಸಂಹಾರದ ನಂತರ ಸಹಕರಿಸಿದ ವಿಭೀಷಣನಿಗೆ ಪಟ್ಟಾಭಿಷೇಕವಾದರೆ ವಾನರ ಯೋಧರಿಗೆಲ್ಲ ಸನ್ಮಾನಗಳಾದವು. ಮಹಾಭಾರತದಲ್ಲಿಯೂ ಅಷ್ಟೇ, ಯುದ್ಧಾನಂತರದ ದಿನಗಳಲ್ಲಿ ಅಧರ್ಮದಪರ ನಿಂತವರೆಲ್ಲರ ಸಂಹಾರಗಳಾದ ಮೇಲೆ ಧರ್ಮದ ಪರವಹಿಸಿದವರೆಲ್ಲರಿರೂ ಸನ್ಮಾನಗಳೇ ಜರುಗಿದವು. ಪ್ರಪಂಚದ ಇತಿಹಾಸವನ್ನು ಅವಲೋಕಿಸಿದಾಗ ಅರಿವಾಗುವ ಒಂದಂಶವೆಂದರೆ ಹಲವು ದೇಶಗಳು ಸ್ವಾತಂತ್ರ್ಯವನ್ನು ಪಡೆದು ಸ್ವಾವಲಂಬಿಗಳಾದರೂ ಆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರಿಗೆ ಸೂಕ್ತವಾಗಿ ಸನ್ಮಾನಿಸಿದ, ಗೌರವಿಸಿದ ಉದಾಹರಣೆಗಳಿವೆ. ಆದರೆ, ಯಾವ ದೇಶದ ಸ್ವಾತಂತ್ರ್ಯಪ್ರಾಪ್ತಿಗಾಗಿ ತ್ಯಾಗವನ್ನು ಅಥವಾ ಬಲಿದಾನವನ್ನು ಮಾಡಿರುತ್ತಾರೆಯೋ ಅವರಿಗೇ ಸ್ವದೇಶಿ ಸರ್ಕಾರ ರಚನೆಯಾದ ನಂತರ ಸನ್ಮಾನಕ್ಕೆ ಬದಲಾಗಿ ದುಃಖ, ದುಮ್ಮಾನ, ಜೈಲು, ಗಡಿಪಾರಿನಂಥ ಶಿಕ್ಷೆಗಳಿಗೆ ಗುರಿ ಮಾಡಿದಂಥ ಏಕೈಕ ದೇಶವೆಂದರೆ ಭಾರತ. ಅಂತಹ ಬಲಿಪಶುವೇ ನಮ್ಮ ಧೀರ ಕ್ರಾಂತಿಕಾರಿ, ಅವಿರತ ಹೋರಾಟಗಾರ, ಅಸಮಾನ ತ್ಯಾಗದ ಧುರೀಣ ವಿನಾಯಕ ದಾಮೋದರ ಸಾವರ್ಕರ್.

ಸ್ಥಾನ, ಸನ್ಮಾನಗಳಂತೂ ಬಿಡಿ, ಅವರ ಪಾಡಿಗೆ ಅವರು ನೆಮ್ಮದಿಯಾಗಿ ಜೀವನವನ್ನು ಸಾಗಿಸಲೂ ಬಿಡದೇ ಜೈಲಿಗಟ್ಟಿ, ಅವರ ಸೋದರನನ್ನು ಕಲ್ಲುಗಳಿಂದ ಹೊಡೆದು ಸಾಯಿಸಲಾಯಿತು. ಸಾವರ್ಕರರನ್ನು ಸ್ಮರಿಸಲು ಯೋಗ್ಯತೆ ಇಲ್ಲದ ಕೆಲ ಸ್ವಾರ್ಥ ರಾಜಕಾರಣಿಗಳು ಅಂಡಮಾನಿನ ಸ್ಮಾರಕದಲ್ಲಿ ಸಾವರ್ಕರರ ನೆನಪು ಯಾವ ರೂಪದಲ್ಲಿಯೂ ಇರಕೂಡದೆಂದು ಅದರ ನಿರ್ನಾಮಕ್ಕೂ ಕೈಹಾಕಿದ್ದರು. ಪ್ರಧಾನಿಯಾಕಾಂಕ್ಷಿ ರಾಹುಲ್ ಗಾಂಧಿ ಸಾವರ್ಕರ್​ರನ್ನು ಹೀಯಾಳಿಸಿ ವಿವಾದಕ್ಕೊಳಗಾಗಿದ್ದರು. ಸಾವರ್ಕರರಿಗೆ ‘ಭಾರತರತ್ನ’ ಗೌರವ ಸಂದಾಗ ಕಾಂಗ್ರೆಸ್ ಅದಕ್ಕೂ ವಿರೋಧಿಸಿತು.

ಇದೇಕೆ ಹೀಗೆ? ಸ್ವಾತಂತ್ರ್ಯ ದೊರೆತ ನಂತರ ನಮ್ಮ ದೇಶದಲ್ಲಿ ಅಧಿಕಾರ ಸಿಕ್ಕಿದ್ದು ಎಂಥವರಿಗೆ? ಅಧಿಕಾರದ ಸ್ವಾರ್ಥಲಾಲಸೆಗಳಿಂದ ಜನರ ಹಿತಾಸಕ್ತಿಗಳನ್ನು ತಿರಸ್ಕರಿಸಿ ಇತಿಹಾಸವನ್ನು ಕೂಡ ತಮಗೆ ಬೇಕೆನಿಸಿದ ರೀತಿ ತಿರುಚಿ ಬರೆಯಿಸಿಕೊಳ್ಳಬಲ್ಲಂತಹ ಮೇಧಾವಿಗಳಿಗೆ. ಸ್ವಾತಂತ್ರ್ಯ ದೊರೆತ ನಂತರದಲ್ಲಿ ಕೂಡ ಗಾಂಧಿ, ನೆಹರು ಪರಂಪರೆಯವರು ಸಾವರ್ಕರ್ ಬಗ್ಗೆ ತೋರಿದ ನಿರ್ಲಕ್ಷ್ಯ ಮತ್ತು ದ್ವೇಷಭಾವನೆಗಳನ್ನು ದೇಶ ಮರೆತಿಲ್ಲ.

ಗಾಂಧೀಜಿಯಂತೂ ಎಂದೆಂದೂ ಕ್ರಾಂತಿಕಾರಿ ದೇಶಭಕ್ತ ಹೋರಾಟಗಾರರ ಪರ ದನಿ ಎತ್ತಲೇ ಇಲ್ಲ. ಭಗತ್ ಸಿಂಗ್, ಸುಖದೇವ್, ರಾಜಗುರು ಅವರನ್ನು ನೇಣಿನಿಂದ ಉಳಿಸಿಕೊಳ್ಳಲು ಎಲ್ಲ ಅವಕಾಶಗಳಿದ್ದರೂ ಅವರು ಮನಸು ಮಾಡಲಿಲ್ಲ. ಅಂತೆಯೇ ಸಾವರ್ಕರ್​ರ ಬಗ್ಗೆ ಹಲವಾರು ಸಂದರ್ಭಗಳಲ್ಲಿ ನಿರ್ಲಕ್ಷ್ಯ ತೋರಿ ದೂರವಿಟ್ಟರೇ ಹೊರತು ಪ್ರಾಮಾಣಿಕವಾದ ಸಹಾಯಹಸ್ತವನ್ನೆಂದೂ ಚಾಚಲಿಲ್ಲ. ನೆಹರು ಇನ್ನೂ ಚಾಣಾಕ್ಷರು. ಗಾಂಧಿ ಹತ್ಯೆಯಾದಾಗ ಆ ಪ್ರಕರಣದಲ್ಲಿ ಸಾವರ್ಕರರನ್ನು ಸಿಲುಕಿಸಲು ಹರಸಾಹಸ ಪಟ್ಟರು. ಆದರೆ ಆ ಅವಕಾಶ ತಪ್ಪಿಹೋದಾಗ ಕೆಲಕಾಲದ ನಂತರ ಲಿಯಾಖತ್ ಅಲಿಯ ಭಾರತ ಭೇಟಿಯ ಸಂದರ್ಭವನ್ನು ಉಪಯೋಗಿಸಿಕೊಂಡು, ದೈಹಿಕವಾಗಿ ದುರ್ಬಲರಾಗಿ ನಿವೃತ್ತಿಯ ಅಂಚಿನಲ್ಲಿದ 67 ವರ್ಷದ ವೃದ್ಧ ಸಾವರ್ಕರ್​ರನ್ನು ಸಲ್ಲದ ನೆಪವೊಡ್ಡಿ ಬಂಧಿಸಿ ಜೈಲಿಗೆ ತಳ್ಳಿದರು. ಅಲ್ಲದೆ ಬ್ರಿಟಿಷರಿಂದ ಮುಟ್ಟುಗೋಲಿಗೆ ಒಳಗಾಗಿದ್ದ ಅವರ ಪಿತ್ರಾರ್ಜಿತ ನಿವಾಸವನ್ನು ಕೂಡ ಹಿಂದಿರುಗಿಸುವ ಸೌಜನ್ಯವನ್ನು ತೋರ ಲಿಲ್ಲ. ಸಾವರ್ಕರ್​ರು ತೀರಿಕೊಂಡ ನಂತರವೂ ಸಂಸತ್ತಿನಲ್ಲಿ ಗೌರವಾರ್ಪಣೆಗೆ ಅವಕಾಶ ನೀಡಲಿಲ್ಲ. ಅವರ ಸ್ಮೃತಿಯನ್ನು ಅಳಿಸಿ ಹಾಕುವ ಉದ್ದೇಶದಿಂದ ಅಂಡಮಾನಿನ ಜೈಲನ್ನೇ ನಿರ್ನಾಮ ಮಾಡಲು ಯತ್ನಿಸಿ ವಿಫಲರಾದರು. ಆದರೆ ಮರೆಯದೆ ಅಂಡಮಾನಿನ ಸ್ಮೃತಿ ಫಲಕವನ್ನು ಕಿತ್ತುಹಾಕಿ ನೆಹರು ಆಶಯವನ್ನು ಪೂರ್ಣಗೊಳಿಸಿತು ಕಾಂಗ್ರೆಸ್ ಪಕ್ಷ.

ಶಿವರಾಮು ಅವರು ರಚಿಸಿದ ಸಾವರ್ಕರ್ ಜೀವನಚರಿತ್ರೆಯ ಹೆಸರು ‘ಆತ್ಮಾಹುತಿ’. ದೇಶಕ್ಕಾಗಿ ತಮ್ಮನ್ನೇ ಆಹುತಿಯಾಗಿ ಸಮರ್ಪಿಸಿಕೊಂಡವರೊಬ್ಬರ ವೃತ್ತಾಂತ. ಚಿಕ್ಕವಯಸ್ಸಿನಿಂದಲೂ ಸಾವರ್ಕರ್ (ಜನನ 1883 ಮೇ 28, ಮಹಾರಾಷ್ಟ್ರದ ನಾಸಿಕ್​ನ ಭಗೂರು) ಭಾರತ ಸಮಾಜದ ಸ್ಥಿತಿಗತಿ ಮತ್ತು ಅದು ಸಾಗುತ್ತಿರುವ ದಿಕ್ಕುಗಳ ಬಗ್ಗೆ ನಿಖರವಾದ ಅರಿವನ್ನು ಹೊಂದಿದ್ದರು. ಸದಾ ದೇಶದ್ದೇ ಚಿಂತನೆ! ತನಗೇ ಏನಾದರಾಗಲಿ, ದೇಶವೇ ಮುಖ್ಯ! ಚಾಪೇಕರರ ವೀರಗಾಥೆಯೇ ಇವರಿಗೆ ದಾರಿದೀಪ! ಭಾಷಣ, ಸಂಘಟನೆ, ಚಳವಳಿ, ಬರಹದಿಂದ ಅರಿವು ಹಾಗೂ ಕ್ರಾಂತಿ ಮೂಡಿಸುವುದು, ಶಿವಾಜಿಯಂಥ ಧೀಮಂತರ ಕುರಿತ ಕವನ, ಕಥನಗಳನ್ನು ರಚಿಸುವುದು, ಮಲಗಿದ್ದ ಜನಾಂಗವನ್ನು ಬಡಿದೆಬ್ಬಿಸುವುದು ಇವರ ಕಾಯಕವಾಯಿತು.

ಮದನ್​ಲಾಲ್ ಧಿಂಗ್ರನಂಥ ದೇಶಭಕ್ತ ಸಾವರ್ಕರ್​ರ ಅಭಿಮಾನಿಯಾಗಿಬಿಟ್ಟಿದ್ದ, ಶಿಷ್ಯನಾಗಿಬಿಟ್ಟಿದ್ದ. ಸಾವರ್ಕರ್​ರು ‘ಅಭಿನವ ಭಾರತ’ ಎಂಬ ಸಂಘಟನೆಯ ರೂವಾರಿಯಾಗಿ ಕಟ್ಟಿಬೆಳೆಸಿ ಗೆಳೆಯರಲ್ಲಿ ಕ್ರಾಂತಿಯ ಕಿಚ್ಚೆಬ್ಬಿಸಿ ಇಂಗ್ಲೆಂಡಿಗೆ ಹೋದರು. ಬ್ರಿಟಿಷರ ದುರಾಡಳಿತದ ವಿರುದ್ಧ ದನಿಯೆತ್ತಿದರು. ಬ್ರಿಟಿಷರು ತತ್ತರಿಸಿ ಹೋಗಿದ್ದುದನ್ನು ಜಗಜ್ಜಾಹೀರು ಮಾಡಲೆಂದು ಪುಸ್ತಕವೊಂದನ್ನೇ ರಚಿಸಿಬಿಟ್ಟರು. ‘ಅದೇನಾದರೂ ಭಾರತೀಯರಿಗೆ ಸಿಕ್ಕಿಬಿಟ್ಟರೇ ಗತಿ ಏನು!’ ಎಂದು ಬೆದರಿದ ಬ್ರಿಟಿಷರು, ಅದನ್ನು ಪ್ರಕಟವಾಗಲು ಬಿಡದೆ ಎರಡೂ ದೇಶಗಳಲ್ಲಿಯೂ ನಿಷೇಧಿಸಿದರು. ಆದರೆ ಭಾರತೀಯರಲ್ಲಿ ರಣೋತ್ಸಾಹವು ಚಿಮ್ಮಿತು. ಹಲವು ದುಷ್ಟ ಬ್ರಿಟಿಷ್ ಅಧಿಕಾರಿಗಳು ಹತರಾದರು. ಹೈರಾಣಾಗಿ ಹೋದ ಬ್ರಿಟಿಷರು ಸಾವರ್ಕರ್ ಮೇಲೆ ಕೇಸುಗಳನ್ನು ಹಾಕಿ ಬಂಧಿಸಿದರು. ಭಾರತಕ್ಕೆ ಬಂಧನದಲ್ಲಿಯೇ ಕರೆತರುತ್ತಿರುವಾಗ ಹಡಗಿನಿಂದ ನೇರ ಸಾಗರಕ್ಕೆ ಹಾರಿಯೇ ಬಿಟ್ಟರು, ಹಲವಾರು ಕಿ.ಮೀ.ಗಳಷ್ಟು ದೂರ ಈಜಿದರು. ದಡ ಸೇರಿದ ಕೆಲವೇ ಕ್ಷಣಗಳಲ್ಲಿ ಮತ್ತೆ ಬಂಧಿತರಾದರು. ಭಾರತಕ್ಕೆ ತರಲ್ಪಟ್ಟರು. ಮನೆಯ ಪರಿಸ್ಥಿತಿ ಹದಗೆಟ್ಟಿತ್ತು. ಆದರೆ ಅವರಿಗೆ ಭಾರತಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸುವುದೇ ಧ್ಯೇಯವಾಯಿತು. ಅದಕ್ಕಾಗಿ, ಪುನಃ ಕ್ರಾಂತಿಕಾರಿಗಳನ್ನು ಹುರಿದುಂಬಿಸುವುದು ಸೇರಿ ಅಪೂರ್ಣವಾಗಿದ್ದ ಹಲವು ಯೋಜನೆಗಳನ್ನು ಮುಂದುವರಿಸಿದರು. ಭಾರತದಲ್ಲಿ ವಿಚಾರಣೆ ನಡೆದು ತೀರ್ಪು ಹೊರಬಿತ್ತು.

ಅಂಡಮಾನಿನ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆ, ಮತ್ತೊಂದು ವಿಚಾರಣೆ ನಡೆದು ಪುನಃ ಆಜನ್ಮಶಿಕ್ಷೆ. ಒಬ್ಬರಿಗೆ ಎರಡು ಆಜನ್ಮಶಿಕ್ಷೆ! ಆದರೆ ಕೋಗಿಲೆಯನ್ನು ಬಂಧಿಸಿದರೆ ಹಾಡನ್ನು ನಿಲ್ಲಿಸುವುದೇನು! ಜೈಲಿನಲ್ಲಿಯೇ ಎಲ್ಲರ ಗೌರವಕ್ಕೆ ಪಾತ್ರರಾಗಿ, ಗೋಡೆಗಳ ಮೇಲೆ ಕಲ್ಲಿನ ಸಹಾಯದಿಂದ ಕ್ರಾಂತಿಗೀತೆಗಳನ್ನು ಹಾಗೂ ದೇಶಭಕ್ತಿಗೀತೆಗಳನ್ನು ರಚಿಸಿದರು ಸಾವರ್ಕರ್. ಮತಾಂತರದಂಥ ಧರ್ವಘಾತವನ್ನು ತಡೆದರು. ಹಲವರನ್ನು ಮಾತೃಧರ್ಮಕ್ಕೆ ಕರೆ ತಂದರು. ಕೆಲವರ ವಿರೋಧವನ್ನೂ ಕಟ್ಟಿಕೊಂಡರು. ದೈಹಿಕವಾಗಿ ಗಾಣವನ್ನು ತಿರುಗಿಸಿ ಸೊರಗಿದರು. ಸದೇಹಿಯಾಗಿ ನರಕವನ್ನೇ ದರ್ಶಿಸಿಬಿಟ್ಟರು. ಕೈದಿಗಳ ಸ್ಥಿತಿಗತಿಗಳನ್ನು ಉತ್ತಮಗೊಳಿಸಲು ಹೆಣಗಿದರು. ಕಡೆಗೊಂದು ದಿನ 1921ರಲ್ಲಿ ಕಾರಾಗೃಹವಾಸದಿಂದ ಬಿಡುಗಡೆಯಾದರು. ಆದರೂ ಮತ್ತೆ ಹೋರಾಟವೇ ಎದುರಾಯಿತು! ಹಿಂದುಗಳ ಪರಿಸ್ಥಿತಿಯನ್ನು ಮನಗಂಡು ‘ಹಿಂದು ಮಹಾಸಭಾ’ ಕಟ್ಟಿ ಬೆಳೆಸಿದರು. ಆಗಲೂ, ಗಾಂಧಿ, ನೆಹರುರಿಂದ ತಿರಸ್ಕಾರ ಮತ್ತು ಪ್ರತಿರೋಧ. ಕಡೆಕಡೆಗೆ ಜೀವನಜ್ಯೋತಿಯ ತೈಲವು ಮುಗಿಯುತ್ತ ಬಂದು ನಿವೃತ್ತಿಯನ್ನು ಬಯಸಿದರು. ಜೀವ-ದೇಹಕ್ಕೆ ವಿರಾಮ ಅವಶ್ಯವೆನಿಸಿತು. ಭಾರತ ವಿಭಜನೆ ಆಗಿದ್ದರಿಂದ ನೊಂದು ಸ್ವಾತಂತ್ರ್ಯ ದೊರೆತ ಸಂತಸವನ್ನು ಮರೆತು ದುಃಖಿಸಿದರು. ನಂತರ ಆರೋಗ್ಯವೂ ಕ್ಷೀಣಿಸಿತು. ಎಲ್ಲವೂ ಸಾಕೆನ್ನಿಸಿ ಆತ್ಮಾರ್ಪಣೆಯನ್ನು ಯೋಚಿಸಿ ಪ್ರಾಯೋಪವೇಶಕ್ಕೆ ನಿಶ್ಚಯಿಸಿದರು. ಅದನ್ನು ತಿಳಿದ ಆತ್ಮೀಯರೆಲ್ಲ ಬಂದು ಭೇಟಿಯಾದರು. ಸಾವರ್ಕರ್ ಆಹಾರವನ್ನು ಪೂರ್ಣವಾಗಿ ನಿಲ್ಲಿಸಿಬಿಟ್ಟರು. 1966 ಫೆಬ್ರವರಿ 26ರಂದು ದೇಹ ತ್ಯಜಿಸಿದರು. ಅವರ ತ್ಯಾಗ, ಬಲಿದಾನಗಳು ಮಾತ್ರ ಅಮರವಾಗಿ ಉಳಿದವು. ಶಿವರಾಮು, ಚಕ್ರವರ್ತಿ ಸೂಲಿಬೆಲೆ ಮತ್ತು ವಿಕ್ರಂ ಸಂಪತ್​ರಂಥ ಮೇಧಾವಿಗಳು ವೀರ ಸಾವರ್ಕರ್​ರ ಜೀವನಗಾಥೆಯ ಪುಸ್ತಕಗಳನ್ನು ರಚಿಸಿ, ಸಾವರ್ಕರ್​ರು ಎಂದಿಗೂ ಜೀವಂತವಾಗಿ ಇರುವಂತಹ ಕೊಡುಗೆಯನ್ನು ನೀಡಿದ್ದಾರೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net