ಅರ್ಚಕರಿಗೆ ನೆರವು ನೀಡುವುದಕ್ಕಾಗಿ ಹುಂಡಿ ಹಣ ಬಳಸಬಹುದೇ?: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

NYK HUNDI 05
Published on

ಬೆಂಗಳೂರು: ರಾಜ್ಯದಲ್ಲಿರುವ 35 ಸಾವಿರಕ್ಕೂ ಅಧಿಕ ಮುಜರಾಯಿ ದೇವಾಲಯಗಳ ಬ್ಯಾಂಕ್ ಖಾತೆಯಲ್ಲಿರುವ ಹುಂಡಿಯ ಹಣವನ್ನು ಆಯಾ ದೇವಸ್ಥಾನಗಳ ಆರ್ಚಕರ ಆರ್ಥಿಕ ನೆರವಿಗೆ ಬಳಸಿಕೊಳ್ಳಲು ಅವಕಾಶವಿದೆಯೇ ಎಂಬ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಅರ್ಚಕರಿಗೆ ಪರಿಹಾರ ಪ್ಯಾಕೇಜ್ ೋಷಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ವಕೀಲ ಶ್ರೀಹರಿ ಕುತ್ಸಾ ಹಾಗೂ ಅರ್ಚಕ ಕೆ.ಎಸ್.ಎನ್. ದೀಕ್ಷಿತ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

ವಕೀಲ ಶ್ರೀಹರಿ ಕುತ್ಸಾ ವಾದ ಮಂಡಿಸಿ, ಸಂಕಷ್ಟದಲ್ಲಿರುವ ಅರ್ಚಕರಿಗೆ ಆರ್ಥಿಕ ನೆರವು ನೀಡುವ ವಿಚಾರದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. 35 ಸಾವಿರ ದೇವಸ್ಥಾನಗಳಿಗೆ ವಾರ್ಷಿಕ 48 ಸಾವಿರ ರೂ. ತಸ್ತಿಕ್ ನೀಡಲಾಗುತ್ತದೆ. ಆ ಪೈಕಿ ಕೇವಲ 14 ಸಾವಿರ ದೇವಸ್ಥಾನಗಳಿಗೆ ತಸ್ತಿಕ್‌ನ ತ್ರೈಮಾಸಿಕ ಕಂತು ತಲಾ 12 ಸಾವಿರ ರೂ. ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಈ ಹಣ ದೇವಸ್ಥಾನಗಳು ಮಾಡಿದ ಖರ್ಚಿಗೆ ಹಿಂಪಾವತಿ ಆಗಿರುತ್ತದೆಯೇ ಹೊರತು ಆರ್ಚಕರಿಗೆ ಅದರಿಂದ ಯಾವುದೇ ಅನುಕೂಲವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

35 ಸಾವಿರ ಅರ್ಚಕರಲ್ಲಿ 14 ಸಾವಿರ ಅರ್ಚಕರಿಗೆ ಮಾತ್ರ ಆಹಾರ ಕಿಟ್ ವಿತರಿಸಲಾಗಿದೆ. ಇನ್ನುಳಿದವರಿಗೆ ಯಾವಾಗ ಆಹಾರ ಕಿಟ್ ವಿತರಿಸಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.

ಅದಕ್ಕೆ ನ್ಯಾಯಪೀಠ, ದೇವಾಲಯಗಳ ಬ್ಯಾಂಕ್ ಖಾತೆಗಳಲ್ಲಿ ಜಮೆ ಇರುವ ಹುಂಡಿ ಹಣವನ್ನು ಆರ್ಚಕರ ಆರ್ಥಿಕ ನೆರವಿಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲು ಸಾಧ್ಯತೆಯ ಬಗ್ಗೆ ಹಾಗೂ ತಸ್ತಿಕ್ ಬಿಡುಗಡೆ ಮತ್ತು ಅರ್ಚಕರಿಗೆ ರೇಷನ್ ಕಿಟ್ ವಿತರಣೆ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಜೂ.3ಕ್ಕೆ ಮುಂದೂಡಿತು.

ದೇವಾಲಯಗಳ ಅರ್ಚಕರಿಗೆ ಪರಿಹಾರ ೋಷಿಸುವಂತೆ ಏ. 2ರಂದೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಈವರೆಗೂ ಅದನ್ನು ಪರಿಗಣಿಸಿಲ್ಲ. ಕಟ್ಟಡ ಕಾರ್ಮಿಕರು, ನೇಕಾರರು, ಆಟೋ ಚಾಲಕರು, ಕ್ಷೌರಿಕರು ಸೇರಿ ಹಲವು ವರ್ಗದ ಜನಕ್ಕೆ ಸರ್ಕಾರ ಪರಿಹಾರ ಪ್ಯಾಕೇಜ್ ನೀಡಿದೆ. ಆದರೆ, ಅರ್ಚಕರನ್ನು ಪ್ಯಾಕೇಜ್ಗೆ ಪರಿಗಣಿಸಿಲ್ಲ. ಆದ್ದರಿಂದ ಈ ಸಂಬಂಧ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net