

ನವದೆಹಲಿ: ಟ್ರಾಫಿಕ್ ನಿಯಮ ಉಲ್ಲಂಘಿಸಿರುವ ಕಾರುಚಾಲಕನೊಬ್ಬ, ತನ್ನನ್ನು ತಡೆಯಲು ಬಂದ ಟ್ರಾಫಿಕ್ ಪೊಲೀಸ್ನನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದಿರುವ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಆಲಂಕಾರಿಕ ನಂಬರ್‌ಪ್ಲೇಟ್ ಬಳಸುವುದನ್ನು ದೆಹಲಿಯಲ್ಲಿ ನಿಷೇಧಿಸಲಾಗಿದೆ. ಆದರೂ ಇಂಥ ನಂಬರ್ ಪ್ಲೇಟ್ ಒಂದು ಕಾರಿನಲ್ಲಿ ಕಾಣಿಸಿದೆ. ಆದ್ದರಿಂದ ಟ್ರಾಫಿಕ್ ಪೊಲೀಸ್ ಕಾರನ್ನು ತಡೆಯಲು ಬಂದಿದ್ದಾನೆ. ಈ ಸಮಯದಲ್ಲಿ ಕಾರಿನಲ್ಲಿದ್ದ ಚಾಲಕ, ಕಾರು ನಿಲ್ಲಿಸದೇ ರಭಸದಿಂದ ಹೋಗಿದ್ದಾನೆ.
ಆಗ ಕಾರಿನ ಬಾನೆಟ್ ಮೇಲೆ ಪೊಲೀಸ್ ಬಿದ್ದುಬಿಟ್ಟಿದ್ದಾರೆ. ಆದರೂ ಬಿಡದ ಚಾಲಕ ಜನನಿಬಿಡ ಪ್ರದೇಶದಲ್ಲಿ ವೇಗವಾಗಿ ಕಾರನ್ನು ವಾಹನ ಚಲಾಯಿಸಿದ್ದಾನೆ.
ಇದರಿಂದಾಗಿ ‘ಸುಮಾರು 400 ಮೀಟರ್ ದೂರದವರೆಗೆ ಕಾರಿನ ಬಾನೆಟ್ ಮೇಲೆ ಪೊಲೀಸ್ ಎಳೆಯಲ್ಪಟ್ಟಿದ್ದಾರೆ.
ಉಳಿದ ಸವಾರರು ಇದನ್ನು ನೋಡುತ್ತಿದ್ದರೂ ಕಾರು ಸ್ಪೀಡ್ನಲ್ಲಿ ಇರುವ ಕಾರಣ ಭಯದಿಂದ ಹೋಗುತ್ತಿರುವುದನ್ನು ಸಿಸಿಟಿವಿಯಲ್ಲಿ ಕಾಣಬಹುದಾಗಿದೆ. ಸುಮಾರು 400 ಮೀಟರ್ ಹೋದ ಮೇಲೆ ಆಯ ತಪ್ಪಿ ಟ್ರಾಫಿಕ್ ಪೊಲೀಸ್ ಕೆಳಕ್ಕೆ ಬಿದ್ದಿದ್ದಾರೆ.
ಕಾಲು ಕಾರಿನ ಚಕ್ರದಲ್ಲಿ ಸಿಲುಕುವುದರಿಂದ ಸ್ವಲ್ಪದರಲ್ಲೇ ಪಾರಾಗಿರುವುದು ಈ ದೃಶ್ಯದಲ್ಲಿ ದಾಖಲಾಗಿದೆ. ಕಳೆದ ಸೋಮವಾರ ದಕ್ಷಿಣ ದೆಹಲಿಯ ಧೌಲಾ ಕುವಾನ್ ಎಂಬಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.