ಕಟ್ಟಿಕೊಂಡವಳನ್ನೇ ವರ್ಷಗಳಿಂದ ಶೌಚಗೃಹದಲ್ಲಿ ಕೂಡಿಹಾಕಿದ ಪತಿ!

crime-wife
Published on

ಚಂಡಿಗಢ: ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಳು ಎಂಬ ಕಾರಣ ನೀಡಿ ಪತ್ನಿಯನ್ನು ಸುಮಾರು ಎರಡು ವರ್ಷಗಳಿಂದ ಮನೆಯ ಶೌಚಗೃಹದಲ್ಲಿ ಬಂಧಿಸಿರುವ ಅಮಾನವೀಯ ಘಟನೆ ಹರಿಯಾಣದ ಪಾಣಿಪತ್​ ಜಿಲ್ಲೆ ರಿಷಪುರ ಎಂಬ ಗ್ರಾಮದಲ್ಲಿ ನಡೆದಿದೆ.

ತೀರಾ ಚಿಕ್ಕದಿರುವ ಶೌಚಗೃಹದಲ್ಲಿ 35 ವರ್ಷದ ಈ ಮಹಿಳೆ ಎರಡು ವರ್ಷಗಳಿಂದ ನರಳಾಡುತ್ತಿದ್ದಳು. ಇದೀಗ ಆಕೆಯನ್ನು ರಕ್ಷಣೆ ಮಾಡಲಾಗಿದೆ.

ಇಂಥ ಒಂದು ಹೀನ ಕೃತ್ಯ ಮಾಡಿರುವ ಗಂಡನ ಹೆಸರು, ನರೇಶ್ ಕುಮಾರ್. ಇವರ ಮದುವೆಯಾಗಿ 17 ವರ್ಷಗಳಾಗಿದ್ದು, ಮೂವರು ಮಕ್ಕಳಿದ್ದಾರೆ. 15 ವರ್ಷದ ಮಗಳು ಮತ್ತು 11, 13 ವರ್ಷದ ಗಂಡು ಮಕ್ಕಳಿದ್ದಾರೆ.

ಸುಮಾರು ಎರಡು ವರ್ಷಗಳಿಂದ ಪತ್ನಿ ಮಾನಸಿಕವಾಗಿ ತೊಂದರೆಗೆ ಒಳಗಾಗಿದ್ದಳು. ಆದ್ದರಿಂದ ತಾನು ಹೀಗೆ ಮಾಡಿದೆ ಎಂದು ಗಂಡ ಹೇಳಿದ್ದಾನೆ. ಆದರೆ ಆಕೆಯ ರಕ್ಷಣೆಗೆ ಬಂದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅಂಥ ಯಾವುದೇ ಸಮಸ್ಯೆ ಮಹಿಳೆಯಲ್ಲಿ ಕಾಣಿಸಿಲ್ಲ ಎನ್ನಲಾಗಿದೆ. ತನ್ನ ಮಕ್ಕಳನ್ನು ಗುರುತಿಸಿರುವ ಆಕೆ, ತಮ್ಮ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದ್ದಾಳೆ. ಮಾತ್ರವಲ್ಲದೇ ಆಕೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಎಂಬ ಬಗ್ಗೆ ಪತಿ ಯಾವುದೇ ದಾಖಲೆ ನೀಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಳಕಿಗೆ ಬಂದದ್ದು ಹೇಗೆ? ಈಕೆಯನ್ನು ಶೌಚಗೃಹದಲ್ಲಿ ಕೂಡಿಹಾಕಿಟ್ಟಿರುವ ವಿಷಯ ಸಂಬಂಧಿಕರಿಗೆ ಎರಡು ವರ್ಷಗಳ ನಂತರ ತಿಳಿದಿದೆ. ಕೂಡಲೇ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಶೌಚಗೃಹದಿಂದ ಮಹಿಳೆಯನ್ನು ಹೊರತಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜಿಲ್ಲಾ ಮಹಿಳಾ ರಕ್ಷಣಾ ಅಧಿಕಾರಿ ರಜಿನಿ ಗುಪ್ತಾ ಸ್ಥಳಕ್ಕೆ ಬಂದು ವಿಷಯ ಸಂಗ್ರಹಿಸಿದ್ದಾರೆ.

ಮಹಿಳೆ ಶೋಚನೀಯ ಸ್ಥಿತಿಯಲ್ಲಿರೋದು ನಮ್ಮ ಗಮನಕ್ಕೆ ಬಂತು. ಸರಿಯಾದ ಆಹಾರ ನೀಡದ ಪರಿಣಾಮ ಆಕೆ ತೀರಾ ಹಸಿದುಕೊಂಡಿದ್ದಳು. ನಾವು ಆಕೆಗೆ ಊಟ ನೀಡಿದಾಗ 8 ಚಪಾತಿ ಗಬಗಬನೆ ತಿಂದಳು. ಶೌಚಗೃಹದಲ್ಲಿಯೇ ಬಂಧಿಯಾಗಿದ್ದ ಕಾರಣ, ನಡೆಯಲು ಸಹ ಆಗುತ್ತಿರಲಿಲ್ಲ. ತನ್ನ ಪತಿ ತನ್ನ ಜತೆ ಅಮಾನವೀಯ ನಡೆದುಕೊಂಡಿರುವುದಾಗಿ ಆಕೆ ಹೇಳಿದ್ದಾಳೆ ಎಂದು ರಜನಿ ಗುಪ್ತಾ ಹೇಳಿದ್ದಾರೆ.

ನಂತರ ಮಹಿಳೆಯನ್ನ ಸಂಬಂಧಿಕರ ವಶಕ್ಕೆ ನೀಡಲಾಗಿದೆ. ಗಂಡನನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net